ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ ಖುದ್ದು ‘ಟಾರ್ಗೆಟ್’ ಭೇಟಿ; ಜೆಡಿಎಸ್ ದಳಪತಿಗಳು ಸಿಡಿಮಿಡಿ
ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವವರಲ್ಲಿ ಎಲ್ಲಾ ಪಕ್ಷಗಳ ಮುಖಂಡರೂ ಸೇರಿರುವರಾದರೂ ಬೇಬಿ ಬೆಟ್ಟದಲ್ಲಿ ಜೆಡಿಎಸ್ ಪಕ್ಷದವರೇ ಹೆಚ್ಚಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಂಡ್ಯ: ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್ ಜಲಾಶಯದ ಬಿರುಕಿಗೆ ಸಂಬಂಧಿಸಿದಂತೆ ಧ್ವನಿ ಎತ್ತಿರುವ ಮಂಡ್ಯ ಸಂಸದೆ ಸುಮಲತಾ ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮೊದಲು ಮಧ್ಯಾಹ್ನ 12.15ಕ್ಕೆ ಮಂಡ್ಯ ತಾಲೂಕು ಇಂಡುವಾಳು ಗ್ರಾಮಕ್ಕೆ ಭೇಟಿ ನೀಡಲಿರುವ ಅವರು, ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಂತರ ಕೊವಿಡ್ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಲಿದ್ದು, 3.30ಕ್ಕೆ ಹಂಗರಹಳ್ಳಿ ಗ್ರಾಮದ ಬಳಿಯ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಹಾಗೂ 4.30 ಕ್ಕೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬೇಬಿ ಬೆಟ್ಟದಲ್ಲಿ ಸದ್ಯ 80 ಕ್ಕೂ ಹೆಚ್ಚು ಕ್ರಷರ್ಗಳಿದ್ದು ಈ ಪೈಕಿ 50 ಕ್ರಷರ್ ಇಂದಿಗೂ ಅನಧಿಕೃತವಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಣಿಗಾರಿಕೆ ಮತ್ತು ಕ್ರಷರ್ ಚಟುವಟಿಕೆ ನಿಂತಿದೆಯಷ್ಟೇ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವವರಲ್ಲಿ ಎಲ್ಲಾ ಪಕ್ಷಗಳ ಮುಖಂಡರೂ ಸೇರಿರುವರಾದರೂ ಬೇಬಿ ಬೆಟ್ಟದಲ್ಲಿ ಜೆಡಿಎಸ್ ಪಕ್ಷದವರೇ ಹೆಚ್ಚಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟ ಕೆಆರ್‌ಎಸ್ ಡ್ಯಾಂಗೆ ಹತ್ತು ಕಿಲೋ ಮೀಟರ್ ದೂರದಲ್ಲಿದ್ದು, ಕೆಲ ಉದ್ಯಮಿಗಳೂ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಅಧಿಕೃತವಾಗಿರುವ ಕ್ರಷರ್ ಮತ್ತು ಗಣಿಗಳ ವಿವರ ಹೀಗಿದೆ: ಪಾಂಡವಪುರ ತಾಲ್ಲೂಕು: 09 ಗಣಿ, 23 ಕ್ರಷರ್ ಶ್ರೀರಂಗಪಟ್ಟಣ ತಾಲ್ಲೂಕು: 15 ಗಣಿ, 21 ಕ್ರಷರ್ ಮಂಡ್ಯ ತಾಲ್ಲೂಕು: 07 ಗಣಿ, 3 ಕ್ರಷರ್ ಮದ್ದೂರು ತಾಲ್ಲೂಕು: 16 ಗಣಿ ಮಳವಳ್ಳಿ ತಾಲ್ಲೂಕು: 03 ಗಣಿ, 1 ಕ್ರಷರ್ ಕೆ.ಆರ್.ಪೇಟೆ ತಾಲ್ಲೂಕು: 6 ಗಣಿ, 1 ಕ್ರಷರ್
ಅಧಿಕೃತವಾಗಿರುವ ಕ್ರಷರ್ ಮತ್ತು ಗಣಿಗಳ ಸಂಖ್ಯೆ ಇಷ್ಟಿದೆಯಾದರೂ ವಾಸ್ತವವಾಗಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಗಣಿಗಳು ಅಕ್ರಮದಲ್ಲಿಯೇ ನಡೆಯುತ್ತಿವೆ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ. ಈ ವಿಚಾರದಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕೆಂಗಣ್ಣಿಗೆ ಗುರಿಯಾದರಾ ಎನ್ನುವ ಅನುಮಾನವೂ ಇದೇ ಸಂದರ್ಭದಲ್ಲಿ ವ್ಯಕ್ತವಾಗುತ್ತಿದೆ. ಟಿ.ಎಂ.ಹೊಸೂರು ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚು ಗಣಿಗಾರಿಕೆಯಾಗುತ್ತಿದ್ದರೂ ಸುಮಲತಾ ಆದ್ಯತೆ ಮೇರೆಗೆ ಚೆನ್ನನಹಳ್ಳಿ, ಹಂಗರಹಳ್ಳಿಗೆ ಭೇಟಿ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಎರಡೂ ಕಡೆ ಹೆಚ್ಚಾಗಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಿಂದಲೇ ಗಣಿಗಾರಿಕೆ ಆಗುತ್ತಿದೆ ಎನ್ನುವ ಮಾತು ಕೂಡಾ ಕೇಳಿಬಂದಿದೆ. ಕೊವಿಡ್ ವೇಳೆ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ನೀಡಿಕೆ ವಿಚಾರದಲ್ಲಿ ಹಾಗೂ ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಮಾತು ಬಂದಾಗ ಸುಮಲತಾರನ್ನು ಮೊದಲು ಪ್ರಶ್ನಿಸಿದ್ದ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ತಪ್ಪು ಮುಚ್ಚಿಕೊಳ್ಳಲು ಸಂಸದೆಯ ಬಾಲಿಶ ಹೇಳಿಕೆ ಎಂದಿದ್ದ ರವೀಂದ್ರ ಶ್ರೀಕಂಠಯ್ಯ, ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದವರು ಡ್ಯಾಂ ನೋಡುವ ಬದಲು ಗಣಿಗಾರಿಕೆ ಸ್ಥಳಕ್ಕೆ ಯಾಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಅಲ್ಲದೇ, ಮುಂದುವರೆದು ವಾಗ್ದಾಳಿ ನಡೆಸಿದ್ದ ರವೀಂದ್ರ ಶ್ರೀಕಂಠಯ್ಯ, ಸುಮಲತಾರನ್ನು ಮೀರ್ಸಾಧಿಕ್ ಎಂದು ಜರಿದಿದ್ದರು. ಮೈಷುಗರ್ ಕಾರ್ಖಾನೆಗೆ ಯಾರನ್ನ ತರಬೇಕೆಂದುಕೊಂಡಿದ್ದೀರಿ? ಕಾರ್ಖಾನೆಯನ್ನು ಯಾರಿಗೋ ಕೊಡಿಸಲು ದಾರಿ ತಪ್ಪಿಸ್ತಿದ್ದೀರಿ, ಮಂಡ್ಯ ಜಿಲ್ಲೆಯ ಜನರಿಂದ ಸರ್ಕಾರಿ ಸ್ವಾಮ್ಯಕ್ಕೆ ಒತ್ತಾಯ ಆಗುತ್ತಿದ್ದರೆ ನೀವೊಬ್ಬರು ಮಾತ್ರ ಖಾಸಗೀಕರಣ ಪದ ಬಳಸುವುದು ಏಕೆ? ಯಾರಿಗೆ ಇದನ್ನು ಕೊಡಿಸಲು ಕಮಿಟ್ ಆಗಿದ್ದೀರಿ? ನಾವು ಹುಟ್ಟು ರಾಜಕಾರಣಿಗಳು, ಈ ವಿಚಾರ ಪ್ರಸ್ತಾಪಿಸದೆ ಕೈಕಟ್ಟಿ ಕೂರಲು ಆಗಲ್ಲ. ನೀವು ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಬಂದಿದ್ದೀರಿ, ನಮ್ಮ ಜಿಲ್ಲೆಯನ್ನು ಹೇಗೆ ನಿರ್ವಹಿಸಬೇಕು ಎಂದು ನಮಗೆ ಗೊತ್ತಿದೆ ಎಂದು ಕಿಡಿಕಾರಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಸುಮಲತಾ ಇಂದು ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ನಾನು ಬೆದರಿಕೆಗಳಿಗೆಲ್ಲಾ ಬಗ್ಗೋದಿಲ್ಲ, ಎಂತಹ ಸವಾಲಿದ್ದರೂ ಎದರಿಸೋಕೆ ಸಿದ್ಧ: ಸುಮಲತಾ