Modi Cabinet Expansion: ಕರ್ನಾಟಕದಿಂದ ಮೂವರಿಗೆ ಬುಲಾವ್, ಯಾರಿಗೆ ಸಿಗುತ್ತೆ ಮಂತ್ರಿ ಪಟ್ಟ?
Union Cabinet Expansion Today ಮೋದಿ ಸರ್ಕಾರದ ಸಂಪುಟಕ್ಕೆ ಕಾಲ ಕೂಡಿ ಬಂದಿದೆ. ಹಲವು ಕುತೂಹಲ, ನಿರೀಕ್ಷೆಗಳೊಂದಿಗೆ ಇಂದು ಸಂಜೆ ಮೋದಿ ಕ್ಯಾಬಿನೆಟ್ ಪುನಾರಚನೆಯಾಗುವ ಸಾಧ್ಯತೆ ಇದೆ. ಹೊಸ ಮುಖಗಳು, ಸಾಮಾಜಿಕ ನ್ಯಾಯ, ಪಂಚ ರಾಜ್ಯಗಳ ಚುನಾವಣೆ, ಒಬಿಸಿ ವರ್ಗಗಳ ಒಳಗೊಳ್ಳುವಿಕೆ... ಹೀಗೆ ಹಲವು ಲೆಕ್ಕಾಚಾರಗಳೊಂದಿಗೆ ಮೋದಿ ಆಡಳಿತದ 2ನೇ ಅವಧಿ ಸಂಪುಟ ಪುನಾರಚನೆಗೆ ಕೌಂಟ್ಡೌನ್ ಶುರುವಾಗಿದೆ.
ಮೋದಿ ಸಂಪುಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೇಂದ್ರದಲ್ಲಿ 2ನೇ ಇನ್ನಿಂಗ್ಸ್ನಲ್ಲಿ ಮೋದಿ ಕ್ಯಾಬಿನೆಟ್ಗೆ ಇಂದು ಹೊಸ ಮುಖಗಳ ಸೇರ್ಪಡೆಯಾಗಲಿದೆ. ಎಲ್ಲಾ ಆಯಾಮಗಳಲ್ಲಿ ನೂತನ ಸಚಿವರನ್ನು ಆಯ್ಕೆ ಮಾಡಲಾಗಿದ್ದು, ಇಂದು ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಕೇಂದ್ರ ಸಂಪುಟ ಸಭೆ ರದ್ದಾಗಿದೆ. ಈ ಹಿಂದೆ ಸಂಜೆ 5.30ಕ್ಕೆ ಪ್ರಮಾಣವಚನ ನಡೆಯಲಿದೆ ಎಂದು ಹೇಳಲಾಗಿತ್ತು. ಆದ್ರೆ ಸಭೆ ರದ್ದಾಗಿರುವ ಕಾರಣ ಪ್ರಮಾಣವಚನ ಕಾರ್ಯಕ್ರಮ ವಿಳಂಬವಾಗುವ ಸಾಧ್ಯತೆ ಇದೆ. ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆಲ್ಲಾ ಸ್ಥಾನ ಸಿಗುತ್ತೆ ಅನ್ನೋದೇ ಸದ್ಯ ಕುತೂಹಲಕರವಾಗಿದೆ.
ಹೊಸ ಮುಖಗಳಿಗೆ ಮಣೆ, ಕರ್ನಾಟಕಕ್ಕೆಷ್ಟು ಸಿಹಿ? ಮೋದಿ ಸಂಪುಟ ಪುನಾರಚನೆಗೆ ಕೌಂಟ್ಡೌನ್ ಶುರುವಾಗಿದೆ. ಎರಡನೇ ಬಾರಿಗೆ ಅಧಿಕಾರಕ್ಕೇರಿದ 2 ವರ್ಷಗಳ ಬಳಿಕ ಸಂಪುಟಕ್ಕೆ ಮೋದಿ ಮುಂದಾಗಿದ್ದಾರೆ. 2022ರ ಪಂಚರಾಜ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯುವಮುಖಗಳು ಹಾಗೂ ಸಮುದಾಯಗಳ ನಾಯಕರನ್ನೇ ಪುನಾರಚನೆಯಲ್ಲಿ ಪರಿಗಣಿಸಲಾಗಿದೆ. ಈ ನಡುವೆ ಕರ್ನಾಟಕದಿಂದಲೂ ಮೂವರು ಸಂಸದರಿಗೆ ಕೇಂದ್ರದಿಂದ ಬುಲಾವ್ ಬಂದಿದ್ದು, ಈಗಾಗಲೇ ಮೂವರು ದೆಹಲಿಗೆ ದೌಡಾಯಿಸಿದ್ದಾರೆ.
ರಾಜ್ಯದಿಂದ ಯಾರಿಗೆ ಚಾನ್ಸ್? ಉಮೇಶ್ ಜಾಧವ್.. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿರೋ ಉಮೇಶ್ ಜಾಧವ್, ಕಲಬುರಗಿ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿ ಸಂಸದರಾಗಿದ್ದಾರೆ. ಬಂಜಾರ ಜಾತಿಗೆ ಸೇರಿರೋ ಉಮೇಶ್ ಜಾಧವ್ಗೆ ಮಂತ್ರಿಭಾಗ್ಯ ಒಲಿದು ಬಂದಿದೆ ಎನ್ನಲಾಗಿದೆ. ಎ. ನಾರಾಯಣಸ್ವಾಮಿ.. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಆನೇಕಲ್ ನಾರಾಯಣಸ್ವಾಮಿಗೂ ದೆಹಲಿ ಬುಲಾವ್ ಬಂದಿದೆ. ದಲಿತ ಸಮುದಾಯಕ್ಕೆ ಸೇರಿರೋ ನಾರಾಯಣಸ್ವಾಮಿಗೂ ಮೋದಿ ಸಂಪುಟದಲ್ಲಿ ಮಂತ್ರಿಯಾಗೋ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ.
ರಮೇಶ್ ಜಿಗಜಿಣಗಿ.. ಇನ್ನು 6 ಬಾರಿ ಸಂಸದರಾಗಿ ಆಯ್ಕೆಯಾಗಿರೋ ವಿಜಯಪುರ ಸಂಸದ ರಮೇಶ್ ಜಿಗಜಿಣಗಿಗೂ ಹೈಕಮಾಂಡ್ ಬುಲಾವ್ ಬಂದಿದೆ. ದಲಿತ ಸಮುದಾಯಕ್ಕೆ ಸೇರಿರೋ ರಮೇಶ್ ಜಿಗಜಿಣಗಿ ಮತ್ತೆ ಕೇಂದ್ರ ಸಚಿವರಾಗಲಿದ್ದಾರೆ ಎನ್ನಲಾಗಿದೆ.
ಹೀಗೆ ರಾಜ್ಯದ ಮೂವರು ದಲಿತ ಸಮುದಾಯದ ಸಂಸದರಿಗೆ ದೆಹಲಿ ಬುಲಾವ್ ಬಂದಿದೆ. ಈ ಮೂವರು ಸಂಸದರು ಈಗಾಗಲೇ ದೆಹಲಿಗೆ ದೌಡಾಯಿಸಿದ್ದು, ಮೂವರ ಪೈಕಿ ಯಾರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅನ್ನೋದೇ ಕುತೂಹಲ.
ಕಾಲ್ ಬಾರದಿದ್ದರೂ ಶೋಭಾ ಕರಂದ್ಲಾಜೆ ದೆಹಲಿಗೆ ದೌಡು ಇನ್ನು ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಸಂಸದ ಶಿವಕುಮಾರ್ ಉದಾಸಿ, ಬಿ.ವೈ.ರಾಘವೇಂದ್ರ, ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹಗೆ ದೆಹಲಿಯಿಂದ ಫೋನ್ ಬಂದಿಲ್ಲ. ಯುವ ಸಂಸದರು ಅನ್ನೋ ನಿಟ್ಟಿನಲ್ಲಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ಬಿವೈ ರಾಘವೇಂದ್ರಗೆ ಸಚಿವ ಸ್ಥಾನ ಸಿಗೋ ನಿರೀಕ್ಷೆ ಇತ್ತು. ಮತ್ತೊಂದೆಡೆ ಮಹಿಳಾ ಕೋಟಾದಡಿ ಶೋಭಾ ಕರಂದ್ಲಾಜೆಯವ್ರಿಗೂ ಮಂತ್ರಿಗಿರಿ ನಿರೀಕ್ಷೆ ಇತ್ತು. ಆದ್ರೆ ಈ ನಾಲ್ವರು ಸಂಸದರಿಗೂ ಫೋನ್ ಕಾಲ್ ಬಂದೇ ಇಲ್ಲ.
ಕೇಂದ್ರ ಸಂಪುಟದಲ್ಲಿ 20ಕ್ಕೂ ಹೆಚ್ಚು ಸಚಿವ ಸ್ಥಾನಗಳು ಖಾಲಿ ಇವೆ. ಹಾಲಿ ಇರೋ 53 ಸಚಿವರ ಟೀಂಗೆ ಹೊಸಮುಖಗಳ ಸೇರ್ಪಡೆಗೆ ಮೋದಿ ಮುಂದಾಗಿದ್ದಾರೆ. ಅದ್ರಲ್ಲೂ ಪಕ್ಷ ಸಂಘಟನೆ, ಸಿಎಂ ಸ್ಥಾನ ಕಳೆದುಕೊಂಡಿರುವವರು, ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದು ಸಂಸದರಾದವ್ರಿಗೆ ಸಚಿವ ಸ್ಥಾನ ಸಿಗೋದು ಬಹುತೇಕ ಪಕ್ಕಾ ಆಗಿದೆ.
ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಉತ್ತರಪ್ರದೇಶದಲ್ಲಿ ಜಾಟ್ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಮಣೆ ಹಾಕಲಾಗಿದೆ. ರೀಟಾ ಬಹುಗುಣ ಜೋಶಿ, ರಾಮಶಂಕರ್ ಕಥಾರಿಯಾ, ಅನುಪ್ರಿಯಾ ಪಟೇಲ್ ಮೋದಿ ಸಂಪುಟ ಸೇರೋ ಸಾಧ್ಯತೆ ಇದೆ. ಇನ್ನು ಅಸ್ಸಾಂನಲ್ಲಿ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟ ಸರ್ಬಾನಂದ ಸೋನವಾಲ್ಗೆ ಮತ್ತೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲು ಕಾರಣವಾದ ಜ್ಯೋತಿರಾಧಿತ್ಯ ಸಿಂಧಿಯಾಗೂ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ ಸಿಗುವುದು ನಿಶ್ಚಿತವಾಗಿದೆ. ಸರ್ಬಾನಂದ ಸೋನವಾಲ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಇಬ್ಬರು ದೆಹಲಿಗೆ ತಲುಪಿದ್ದಾರೆ. ಇತ್ತ ಎನ್ಡಿಎ ಮೈತ್ರಿಕೂಟದ ಜೆಡಿಯುನ ಆರ್‌ಸಿಪಿ ಸಿಂಗ್, ಲಾಲನ್ ಸಿಂಗ್ ಕೇಂದ್ರದ ಸಚಿವ ಸಂಪುಟ ಸೇರಲಿದ್ದಾರೆ. ತಮ್ಮ ಅಣ್ಣನ ಮಗ ಚಿರಾಗ್ ಪಾಸ್ವಾನ್ ವಿರುದ್ಧ ಎಲ್ಜೆಪಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ ಪಶುಪತಿನಾಥ ಪಾರಸ್ ಗೆ ಕೇಂದ್ರದ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಸಿಗಲಿದೆ.
ಇತ್ತ ಮಹಾರಾಷ್ಟ್ರದಲ್ಲಿ ಬೇರೆ ಬೇರೆ ಪಕ್ಷಗಳನ್ನು ಸುತ್ತಿಕೊಂಡು ಬಂದಿರುವ ನಾರಾಯಣ್ ರಾಣೆಗೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಪಕ್ಷ ಬಲಪಡಿಸಲು ಕೆಲವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಟಿಎಂಸಿಯಿಂದ ವಲಸೆ ಬಂದಿರುವ ದಿನೇಶ್ ತ್ರಿವೇದಿ, ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಲಾಕೆಟ್ ಚಟರ್ಜಿ ಹೆಸರುಗಳು ಕೂಡ ಕೇಂದ್ರದ ಕ್ಯಾಬಿನೆಟ್ ಗೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿವೆ. ರಾಜಸ್ಥಾನದ ರಾಹುಲ್ ಕಾಸ್ವಾನ್ ಸಚಿವ ಸ್ಥಾನ ಪಡೆಯಬಹುದು. ತಮ್ಮ ಭಾಷಣದ ಮೂಲಕ ದೇಶದ ಗಮನ ಸೆಳೆದಿರೋ ಲಡಾಕ್ ಸಂಸದ ಜಮಯಾಂಗ್ ಕೂಡಾ ಮೋದಿ ಸಂಪುಟ ಸೇರಲಿರೋ ಸಾಧ್ಯತೆ ಇದೆ.
ಸದ್ಯ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಹರದೀಪ್ ಸಿಂಗ್ ಪುರಿ ಬಳಿ ತಲಾ ಮೂರರಿಂದ ನಾಲ್ಕು ಖಾತೆಗಳಿವೆ. ಈ ಖಾತೆಗಳನ್ನ ವಾಪಸ್ ಪಡೆದು ಹೊಸದಾಗಿ ಸಚಿವರಾಗುವವರಿಗೆ ನೀಡಲಿದ್ದಾರೆ. ಈ ಮೂಲಕ ಈ ಸಚಿವರ ಖಾತೆ ಹೊರೆಯನ್ನು ಇಳಿಸಲಾಗುತ್ತೆ. ಮತ್ತೊಂದೆಡೆ ಮಾಜಿ ಸಿಎಂಗಳಿಗೆ ಮೋದಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಮಹಿಳೆಯರಿಗೂ ಹೆಚ್ಚಿನ ಪಾಲು ಕೊಡಲಾಗಿದೆ.
ಇನ್ನು ಕೆಲ ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಇದರಲ್ಲಿ ಮೊದಲ ಹೆಸರೇ ಕೇಂದ್ರ ಆರೋಗ್ಯ ಸಚಿವ ಡಾಕ್ಟರ್ ಹರ್ಷವರ್ಧನ್ ಅವರದ್ದು. ಕೊರೊನಾ 2ನೇ ಅಲೆ ಬರುವ ಬಗ್ಗೆ ಸರಿಯಾದ ಪೂರ್ವಸಿದ್ಧತೆಯನ್ನು ನಡೆಸದೇ ಇರೋದು, 2ನೇ ಅಲೆ ನಿರ್ವಹಣೆಯಲ್ಲಿ ವೈಫಲ್ಯದ ಕಾರಣದಿಂದ ಹರ್ಷವರ್ಧನ್ಗೆ ಕ್ಯಾಬಿನೆಟ್ನಿಂದ ಗೇಟ್ಪಾಸ್ ಕೊಡೋ ಸಾಧ್ಯತೆ ಇದೆ. ಹರ್ಷವರ್ಧನ್ ಸ್ಥಾನದ ಮೇಲೆ ದೆಹಲಿ ಲೋಕಸಭಾ ಸದಸ್ಯರಾದ ಮೀನಾಕ್ಷಿ ಲೇಖಿ, ಮನೋಜ್ ತಿವಾರಿ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದು
Published On - 10:05 am, Wed, 7 July 21