AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು

ಜಿಪ್ ಲೈನ್ ಎನ್ನುವ ಈ ಕ್ರೀಡೆ ಜಾಗತಿಕ ಮಟ್ಟದಲ್ಲಿ, ವಿದೇಶಿಗಳಲ್ಲಿ ಅಥವಾ ಉತ್ತರ ಭಾರತದಲ್ಲಿ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್ ಲೈನ್ ಎನ್ನುತ್ತಾರೆ.

ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು
ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್
TV9 Web
| Updated By: preethi shettigar|

Updated on:Jul 07, 2021 | 10:12 AM

Share

ಗದಗ: ಹಸಿರು ಬೆಟ್ಟಗಳ ನಡುವೆ ಸಮಯ ಕಳೆಯುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎರಡು ಬೆಟ್ಟಗಳ ನಡುವೆ ಎತ್ತರಕ್ಕೆ ಹಾರಿದ ಅನುಭವಗೊಳಿಸುವ ಕ್ರೀಡೆ. ಪುಷ್ಪಕ ವಿಮಾನದಲ್ಲಿ ವಿಹರಿಸಿದ ಭಾವನೆ, ತಂತಿಯ ಮೇಲಿನ ನಡುಗೆಯಂತೆ ಮೈ ಜುಮ್ಮೆನಿಸುವ ಸಂದರ್ಭ ಇದ್ದರೆ ಎಲ್ಲರೂ ಒಮ್ಮೆ ಅಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಅನುಭವಗಳಿಗೆ ಸ್ಪೂರ್ತಿ ನೀಡುವಂತಹ ವಾತಾವರಣ ಸದ್ಯ ಗದಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ರೋಮಾಂಚನಕಾರಿ ಜಿಪ್ ಲೈನ್ ಆಟ ಆಡಲು ಮತ್ತು ನೋಡಲು ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಮ್ಮೆ ನೋಡಿದರೆ ನಾವು ಆಡಬೇಕು ಎನಿಸುವ ಈ ಜಿಪ್​ ಲೈನ್​ ಆಟ ಯಾವುದು? ಗದಗದಲ್ಲಿ ಇದು ಆರಂಭವಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಗದಗ ತಾಲೂಕಿನ ಬಿಂಕದಕಟ್ಟಿ ಬಳಿ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈ ಜಿಪ್​ ಲೈನ್ ಸವಾರಿ ಶುರುವಾಗಿದೆ. ಕಪ್ಪತ್ತಗುಡ್ಡದ ಹಸಿರು ಕಾನನದ ಸೆರಗಿನಲ್ಲಿ ಈಗ ಹೊಸ ಕ್ರೀಡೆಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಕೈಗೆತ್ತಿಕೊಂಡಿದ್ದ ಜಿಪ್ ಲೈನ್ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಪ್ರವಾಸಿಗರ ಮನರಂಜನಾ ಕ್ರೀಡೆಯಾಗಿ ಮೊದಲ ಸ್ಥಾನ ಪಡೆದಿದೆ.

ಜಿಪ್ ಲೈನ್ ಎನ್ನುವ ಈ ಕ್ರೀಡೆ ಜಾಗತಿಕ ಮಟ್ಟದಲ್ಲಿ, ವಿದೇಶಿಗಳಲ್ಲಿ ಅಥವಾ ಉತ್ತರ ಭಾರತದಲ್ಲಿ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್ ಲೈನ್ ಎನ್ನುತ್ತಾರೆ. ಇದನ್ನು ಈಶಾನ್ಯ ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಗಣಿಗಾರಿಕೆಗಳಲ್ಲಿ ಸರಕುಗಳನ್ನು ಸಾಗಿಸಲು ಬಳಸುತ್ತಿದ್ದರು. ಆದರೆ ಈಗ ಇದು ಗದಗ ಯುವಕರನ್ನು ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟಿದೆ. ಹೀಗಾಗಿ ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ಅನ್​ಲಾಕ್ ಆಗಿದ್ದೇ ತಡ ಜಿಪ್ ಲೈನ್ ಆಡಲು ಪ್ರವಾಸಿಗರ ದಂಡು ಬಿಂಕದಕಟ್ಟಿಯ ಕಡೆ ಬರುತ್ತಿದೆ.

ಲಾಕ್​ಡೌನ್​ನಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಯುವ ಪಡೆ ಈಗ ಗದಗ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿರುವ ರೋಮಾಂಚನಕಾರಿ ಜಿಪ್ ಲೈನ್​ಗೆ ಮೊರೆ ಹೋಗಿದ್ದಾರೆ. ಕಪ್ಪತ್ತಗುಡ್ಡದ ಹಸಿರು ಕಾನನದ ಮಧ್ಯೆ ಜಿಪ್ ಲೈನ್ ಸವಾರಿ ಮಾಡುವ ಮೂಲಕ ಖುಷಿಪಡುತ್ತಿದ್ದಾರೆ. ಗದಗ ಮಾತ್ರವಲ್ಲ ಪಕ್ಕದ ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಹಾವೇರಿ ಸೇರಿ ಸುತ್ತಮುತ್ತಲಿನ ನೂರಾರು ಜನರು ಈಗ ಜಿಪ್ ಲೈನ್ ಸವಾರಿಗೆ ಮುಗಿಬಿದ್ದಾರೆ.

ಗದಗ ಡಿಎಫ್ಓ ಸೂರ್ಯಸೇನಾ ಉತ್ತರ ಕರ್ನಾಟಕದ ಜನರಿಗೆ ಜಿಪ್ ಲೈನ್ ಅನುಭವ ನೀಡಲು ಯೋಜನೆ ಮಾಡಿದ್ದು, ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಕನಸು ನನಸು ಮಾಡಿದ್ದಾರೆ. ಸುಮಾರು 32 ಲಕ್ಷ ರೂಪಾಯಿ, ವೆಚ್ಚದಲ್ಲಿ ಈ ಜಿಪ್ ಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಸದ್ಯ ಪೂರ್ಣಗೊಂಡಿದ್ದು, ಲಾಕ್​ಡೌನ್ ವೇಳೆಯಲ್ಲಿ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಈಗ ಅತೀ ಹೆಚ್ಚು ಆದಾಯ ತಂದುಕೊಡುತ್ತಿದೆ. ಸದ್ಯ ಇಲ್ಲಿನ ಸಿಬ್ಬಂದಿಗಳಿಗೆ ಸಂಬಳ ಸೇರಿದಂತೆ ಬಹಳಷ್ಟು ಖರ್ಚು ವೆಚ್ಚಗಳನ್ನು ನೀಗಿಸಲು ಅನುಕೂಲಕರವಾಗಿದೆ. ಪ್ರವಾಸಿಗರಿಗೆ ಒಬ್ಬರಿಗೆ 100 ರೂಪಾಯಿ ನಿಗದಿ ಮಾಡಲಾಗಿದೆ. ದಿನಕ್ಕೆ ಸರಿ ಸುಮಾರು ನೂರಾರು ಜನ ಕ್ರೀಡಾಸಕ್ತರು ಬರುತ್ತಿದ್ದಾರೆ. ಇನ್ನೂ ಸದ್ಯ ಆರಂಭಿಕ ಹಂತವಾಗಿದ್ದು, ಅನ್​ಲಾಕ್ ಆದ ಬೆನ್ನಲ್ಲೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಗದಗ ಆರ್​ಎಫ್ಓ ರಾಜು ಗೊಂಡಕರ್ ಹೇಳಿದ್ದಾರೆ.

ಇನ್ನು ಈ ಕ್ರೀಡೆಯಾಡಲು ಎಲ್ಲಾ ರೀತಿಯ ರಕ್ಷಣೆಯ ಸಲಕರಣೆಗಳನ್ನು ಹೊಂದಿಸಿದ್ದಾರೆ. ಜತೆಗೆ ಅಲ್ಲಿ ಯಾವ ರೀತಿ ಕ್ರೀಡೆಯಾಡಬೇಕು ಎಂದು ಹೇಳಲು ನುರಿತ ತರಬೇತಿದಾರರನ್ನು ನೇಮಿಸಲಾಗಿದೆ. ಒಟ್ಟಿನಲ್ಲಿ ಜಿಪ್ ಲೈನ್ ಆಡಲು ಬಂದ ಪ್ರವಾಸಿಗರಿಗೆ ಒಂದೊಳ್ಳೆ ಅನುಭವ ಸಿಗುತ್ತಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶ ಮುಕ್ತ; ಲಾಕ್​ಡೌನ್​ ನಂತರ ನವ ಉತ್ಸಾಹ ಪಡೆಯಲು ಕೊವಿಡ್​ ನಿಯಮ ಅನುಸರಿಸಿ ಭೇಟಿ ನೀಡಿ

ಸೈನಿಕರ ನೆನಪಿಗೆ ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿದೆ ಅಮರ್ ಜವಾನ್ ಪಾರ್ಕ್

Published On - 9:52 am, Wed, 7 July 21