
ನವದೆಹಲಿ, (ಡಿಸೆಂಬರ್ 11): ತಮ್ಮ ಮೇಲಿನ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೊಂದು ಕೋರ್ಟ್ಗೆ ವರ್ಗಾಯಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court ) ತಿರಸ್ಕರಿಸಿದೆ. ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ನಿಂದ ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು (ಡಿಸೆಂಬರ್ 11) ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತ ಸೂರ್ಯಕಾಂತ್ ನೇತೃತ್ವದ ಪೀಠ ಬೇರೋದು ಕೋರ್ಟ್ಗೆ ವರ್ಗಾವಣೆ ಮಾಡಲು ನಿರಾಕರಿಸಿದೆ.
ಪ್ರಸ್ತುತ ಕೇಸ್ ನಲ್ಲಿ ಹಾಜರುಪಡಿಸುವ ಸಾಕ್ಷ್ಯಗಳ ಆಧಾರದ ಮೇಲೆ ಜಡ್ಜ್ ತೀರ್ಪು ನೀಡಬೇಕೇ ವಿನಃ ಹಿಂದಿನ ಕೇಸ್ ತೀರ್ಪು ಆಧಾರದ ಮೇಲೆ ಅಲ್ಲ. ನಾವು ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಸಹ ನೋಡಬೇಕು. ಈ ವ್ಯಕ್ತಿ ಸುಪ್ರೀಂಕೋರ್ಟ್ ಗೆ ಹೋಗಿ ಜಿಲ್ಲಾ ಕೋರ್ಟ್ ವಿರುದ್ಧ ಆದೇಶ ಪಡೆದಿದ್ದಾರೆ ಎಂಬ ಸಂದೇಶ ನೀಡಲು ಸಾಧ್ಯವಿಲ್ಲ. ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ನಾವು ಉನ್ನತ ಮಟ್ಟದಲ್ಲಿ ಇಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಹಿಂದಿನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂಬ ಅಂಶದಿಂದ ನ್ಯಾಯಾಧೀಶರು ಪ್ರಭಾವಿತರಾಗಬಾರದು. ಪ್ರಸ್ತುತ ವಿಚಾರಣೆಯಲ್ಲಿ ಒದಗಿಸಲಾದ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು. ಹಿಂದಿನ ಅಪರಾಧ ನಿರ್ಣಯದ ಆಧಾರದ ಮೇಲೆ ಮತ್ತು ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗ ಅಂತಹ ಅಪರಾಧ ನಿರ್ಣಯಕ್ಕೆ ಕಾರಣವಾದ ವಿಚಾರಣೆಯ ಆಧಾರದ ಮೇಲೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಪ್ರಕರಣದಲ್ಲಿ ನಮಗೆ ಅಂತಹ ಯಾವುದೇ ಸಂದೇಹವಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಆದೇಶದಲ್ಲಿ ತಿಳಿಸಿದ್ದಾರೆ.
ವಿಚಾರಣಾ ನ್ಯಾಯಾಧೀಶರು ಈ ಹಿಂದೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ತಮ್ಮನ್ನು ಅಪರಾಧಿ ಎಂದು ಘೋಷಿಸಿದ್ದರಿಂದ, ಮುಂದಿನ ಪ್ರಕರಣದಲ್ಲೂ ತಮ್ಮ ವಿರುದ್ಧ ಪಕ್ಷಪಾತ ತೋರುವ ಸಾಧ್ಯತೆಯಿದೆ ಎಂದು ಪ್ರಜ್ವಲ್ ಆತಂಕದಲ್ಲಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಬಾಕಿ ಇರುವ ಇನ್ನೂ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 81ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿಂದ ಬೇರೆ ಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಪ್ರಜ್ವಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಲ್ಲೂ ಸಹ ಹಿನ್ನಡೆಯಾಗಿದೆ.
ತಮ್ಮ ಮನೆಕೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಘೋಷಿಸಿದ್ದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಕಳೆದ ಆಗಸ್ಟ್‌ನಲ್ಲಿ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:48 pm, Thu, 11 December 25