ಒಳ ಮೀಸಲಾತಿ ಬಡ್ತಿಗೆ ಒಪ್ಪಿಗೆ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸುವುದಕ್ಕೆ ಸಂಪುಟ ಅಸ್ತು
ಬೆಳಗಾವಿ ಅಧಿವೇಶನದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಡಿಸೆಂಬರ್ 11) ಸುವರ್ಣ ಸೌಧದಲ್ಲೇ ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ವಿಧೇಯಕಗಳ ಮಂಡನೆ ಬಗ್ಗೆ ಚರ್ಚೆ ಆಯ್ತು. ಅದರಲ್ಲೂ ಮುಖ್ಯವಾಗಿ ಒಳ ಮೀಸಲಾತಿ ಅಡಿಯಲ್ಲಿ ಬಡ್ತಿ ನೀಡಲು ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಸಂಪುಟ ಅಸ್ತು ಎಂದಿದೆ. ಆದ್ರೆ, ಕೆಲ ಷರತ್ತುಗಳನ್ನು ವಿಧಿಸಿದೆ. ಇನ್ನು ಸಂಪುಟ ಸಭೆ ತೆಗೆದುಕೊಂಡು ತೀರ್ಮಾನಗಳು ಈ ಕೆಳಗಿನಂತಿವೆ.

ಬೆಳಗಾವಿ, ಡಿಸೆಂಬರ್ 11: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವ ಸಂಪುಟ ಸಭೆ (Cabinet meeting) ನಡೆಯಿತು. ಈ ವೇಳೆ ಒಳ ಮೀಸಲಾತಿ ಅಡಿಯಲ್ಲಿ ಬಡ್ತಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು ಸಂಪುಟ ತೀರ್ಮಾನಿಸಿದೆ. ಜೊತೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿದೆ.
ಎಸ್ಸಿಎಸ್ಟಿ ಒಳ ಮೀಸಲಾತಿ ಮೊದಲಿದ್ದಂತೆ ಜಾರಿ
ಬೆಳಗಾವಿಯ ಸುವರ್ಣ ಸೌಧದ ಸಂಪುಟ ಸಭಾಮಂದಿರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಎಸ್ಸಿಎಸ್ಟಿ ಒಳ ಮೀಸಲಾತಿ ವಿಚಾರವಾಗಿ ಚರ್ಚಿಸಿದ್ದು, ನ್ಯಾಯಾಲಯಕ್ಕೆ ಹೊಸ ಕಾಯ್ದೆಯ ಬಗ್ಗೆ ಅಫಿಡವಿಟ್ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲೆಮಾರಿ ಸಮುದಾಯಕ್ಕೆ ಬಲ ಅಥವಾ ಎಡ ಸಮುದಾಯಗಳ ಪಂಗಡಕ್ಕೆ ಸೇರಿಸಲು ಚರ್ಚೆ ನಡೆದಿತ್ತು. ಆದರೆ ಹಿರಿಯ ನಾಯಕರು ಒಪ್ಪದ ಕಾರಣ ಯಾವುದೇ ಬದಲಾವಣೆ ಇಲ್ಲದೇ ಮೊದಲಿದ್ದಂತೆ ಜಾರಿಗೆ ಸಂಪುಟ ನಿರ್ಧರಿಸಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ಮೂಲಕ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಗೃಹ ಇಲಾಖೆಗೆ ಜವಾಬ್ದಾರಿ ನೀಡಿ, ನಿವೃತ್ತ ನ್ಯಾ.ಕುನ್ಹಾ ವರದಿ ಶಿಫಾರಸು ಅಳವಡಿಸಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡಿಸುವುದಕ್ಕೆ ಸಂಪುಟ ಅವಕಾಶ ನೀಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 2.8 ಲಕ್ಷ ಹುದ್ದೆಗಳು ಖಾಲಿ: ಯಾವ್ಯಾವ ಇಲಾಖೆಯಲ್ಲಿ ಎಷ್ಟು? ನೇಮಕಾತಿ ಎಷ್ಟು?
ಮ್ಯಾಚ್ ನಡೆಯುವ ಸಂದರ್ಭದಲ್ಲಿ ಭದ್ರತೆ ಒದಗಿಸುವ ಬಗ್ಗೆ ಗೃಹ ಇಲಾಖೆ ಜೊತೆಗೆ ಕೆಎಸ್‌ಸಿಎ ಚರ್ಚೆಗೆ ಸೂಚನೆ ನೀಡಿದೆ. ಕೆಎಸ್ಸಿಎಗೆ ಕೆಲವು ಷರತ್ತುಗಳನ್ನು ವಿಧಿಸಲು ನಿರ್ಧರಿಸಲಾಗಿದೆ. ಗೃಹ ಇಲಾಖೆ ಸೂಚಿಸುವ ಷರತ್ತು ನಿಬಂಧನೆಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಸೂಚಿಸಲಿದೆ.
307 ಕೋಟಿ ರೂ ವೆಚ್ಚದಲ್ಲಿ ರಸ್ತೆ
ಬೆಂಗಳೂರು ಐಟಿಬಿಟಿ ಕಾರಿಡಾರ್ಗೆ ಜಾಗತಿಕ ಲುಕ್ ನೀಡಲು ಸರ್ಕಾರ ಮುಂದಾಗಿದ್ದು, ಸಿಲ್ಕ್ ರಸ್ತೆ ಜಂಕ್ಷನ್ ನಿಂದ ಕೆ.ಆರ್ ಪುರದವರೆಗೆ ಜಾಗತಿಕ ಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಹೊಸ ಮಾದರಿ ವಿನ್ಯಾಸದ ರಸ್ತೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದ್ದು, ಒಟ್ಟು 307 ಕೋಟಿ ರೂ ವೆಚ್ಚದಲ್ಲಿ ನೂತನ ವಿನ್ಯಾಸದ ರಸ್ತೆ ನಿರ್ಮಾಣವಾಗಲಿದೆ.
ಹೊಸ ವಾಹನ ಖರೀದಿದಾರರಿಗೆ ಸೆಸ್ ಬಿಸಿ
ಸರ್ಕಾರ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡಿಸಲಿದ್ದು, ನೂತನವಾಗಿ ಖರೀದಿಸುವ ವಾಹನದ ಮೌಲ್ಯ ಆಧರಿಸಿ ಸೆಸ್ ಅನ್ವಯವಾಗಲಿದೆ. ಎಲ್ಲಾ ಮಾದರಿಯ ವಾಹನಗಳಿಗೆ ಕೇವಲ 1000 ರೂ. ಸೆಸ್ ವಿಧಿಸಲಾಗಿದೆ. ತಿದ್ದುಪಡಿ ಅನ್ವಯ ಕಾರಿನ ಬೆಲೆ ಆಧರಿಸಿ ಶೇಕಡವಾರು ಸೆಸ್ ಜಾರಿ ಮಾಡಲಾಗುವುದು. ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕದಲ್ಲಿ ಸೆಸ್ ಮೊತ್ತ ಉಲ್ಲೇಖಿಸಲಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ
ಖಾಸಗಿ ಆಂಬ್ಯುಲೆನ್ಸ್ಗಳನ್ನು ನಿಯಂತ್ರಿಸಲು ಹಾಗೂ ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸಲು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಸ್ವಯಂ ಪ್ರೇರಿತವಾಗಿ ನೋಂದಾಯಿಸಿದ ಖಾಸಗಿ ಆಂಬ್ಯುಲೆನ್ಸ್ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆಂದು ನೋಂದಾಯಿಸಲು ಅವಶ್ಯಕವಾಗಿರುವುದರಿಂದ ತಿದ್ದುಪಡಿಯನ್ನು ತರಲಾಗುತ್ತಿದೆ. ಪ್ರಸ್ತುತ ಅಧಿನಿಯಮದಲ್ಲಿ ತಾತ್ಕಾಲಿಕ ನೋಂದಣಿಗೆ ಅವಕಾಶ ಇಲ್ಲದೆ ಇರುವುದರಿಂದ ಕೇಂದ್ರ ಅಧಿನಿಯಮದ ಮಾದರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ವ ಮಾನ್ಯತೆ ಪತ್ರ ಒದಗಿಸಿದ ವೈದ್ಯಕೀಯ ಸಂಸ್ಥೆಗಳಿಗೆ 30 ದಿನಗಳೊಳಗಾಗಿ ಖಾಯಂ ನೋಂದಣಿ ನೀಡಲು ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಸದನದಲ್ಲೂ ಪುರುಷೋತ್ತಮ ಬಿಳಿಮಲೆ ಹೇಳಿಕೆ ಸದ್ದು: ಕ್ರಮಕ್ಕೆ BJP ಶಾಸಕರ ಆಗ್ರಹ
ಖಾಸಗಿ ಆಂಬುಲೆನ್ಸ್‌ಗಳ ಸೇವೆಯನ್ನು ಮೊಬೈಲ್ ಆ್ಯಪ್ ಮೂಲಕ ಪಡೆಯಲು ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆಯಂತೆ ಅವುಗಳ ಸೇವೆಗೆ ನಿರ್ದಿಷ್ಟ ದರ ನಿಗದಿಪಡಿಸಲು ಈ ತಿದ್ದುಪಡಿ ಮಸೂದೆ ಅನುವು ಮಾಡಿಕೊಡಲಿದೆ. ಈ ಮಸೂದೆಯಲ್ಲಿ ಮೋಟಾರು ವಾಹನಗಳ ಅಧಿನಿಯಮ 1988 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಜೊತೆಗೆ ಐಚ್ಚಿಕವಾಗಿ ನೋಂದಾಯಿಸಿದ ಆಂಬ್ಯುಲೆನ್ಸ್ ಸೇವಾದಾರರನ್ನು ಅಗ್ರೆಗೇಟರ್ನಂತೆ ನಿಯಂತ್ರಿಸಲು ನಿಯಮ ರೂಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




