ಎಸ್​ಎಸ್​ಎಲ್​ಸಿ, ಪಿಯುಸಿಗೆ ಹೊಸ ಪಠ್ಯ ಶೀಘ್ರ ಪ್ರಕಟ: ಸಚಿವ ಸುರೇಶ್​ಕುಮಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 2:34 PM

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಹೊರೆಯಾಗದಂತೆ, ಅವರ ಕಲಿಕೆಗೆ ಲೋಪವಾಗದಂತೆ ಪಠ್ಯವನ್ನು ರಚಿಸಿ ಇನ್ನು ಒಂದು ವಾರದ ಒಳಗೆ ಪ್ರಕಟ ಮಾಡಲಾಗುತ್ತದೆ ಎಂದು ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಎಸ್​ಎಸ್​ಎಲ್​ಸಿ, ಪಿಯುಸಿಗೆ ಹೊಸ ಪಠ್ಯ ಶೀಘ್ರ ಪ್ರಕಟ: ಸಚಿವ ಸುರೇಶ್​ಕುಮಾರ್
ಸಚಿವ ಎಸ್​. ಸುರೇಶ್​ ಕುಮಾರ್​
Follow us on

ಬೆಂಗಳೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಡಕಾಗಬಾರದು ಎಂಬ ಉದ್ದೇಶದಿಂದ  ಸರ್ಕಾರವು ಜ.1ರಿಂದ ರಾಜ್ಯದಲ್ಲಿ ಮತ್ತೆ ಶಾಲೆಗಳನ್ನು ಆರಂಭಿಸುತ್ತಿದೆ. ವಿದ್ಯಾಗಮಕ್ಕೂ ಪುನಃ ಚಾಲನೆ ನೀಡಲಾಗುತ್ತಿದೆ. ಇದು ಸದುದ್ದೇಶ ಮತ್ತು ಸಧ್ಭಾವನೆಯಿಂದ ಕೈಗೊಂಡಿರುವ ನಿರ್ಣಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್-19ರ ಕಾರಣದಿಂದಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಸಮಸ್ಯೆಗಳು ಉಂಟಾಗಿವೆ. ಶೈಕ್ಷಣಿಕ ಕ್ಷೇತ್ರ ಈ ಸಮಸ್ಯೆಗಳಿಂದ ಹೊರತಾಗಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡೇ ಕೇಂದ್ರ ಸರ್ಕಾರವು ವಿದ್ಯಾಗಮ ನಿರಂತರ ಕಲಿಕಾ ಯೋಜನೆಯನ್ನು ಈ ಹಿಂದೆ ಜಾರಿಗೆ ತಂದಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಗ್ರಾಮ, ನಗರ, ಗುಡ್ಡಗಾಡು, ಹಳ್ಳಿಗಾಡು, ಅರಣ್ಯದಂಚಿನ ಯಾವ ಮಕ್ಕಳು ಟಿ.ವಿ, ಮೊಬೈಲ್, ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೋ ಅಂತಹವರ ನಿರಂತರ ಕಲಿಕೆಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಿಕ್ಷಕರು-ಮಕ್ಕಳ ಭೇಟಿ ಮತ್ತು ಪ್ರತಿ ಮಗುವನ್ನೂ ಕಲಿಕಾ ವ್ಯಾಪ್ತಿಗೆ ತರುವುದು ಇದರ ಉದ್ದೇಶ. ಆದರೆ ಕೊರೊನಾ ಸೊಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

ಸರ್ಕಾರದ ಉದ್ದೇಶ ಯಶಸ್ವಿಯಾಗಬೇಕಾದರೆ ಪೋಷಕರ, ಶಾಲಾ ಅಭಿವೃದ್ಧಿ ಸಮಿತಿಗಳ, ಶಿಕ್ಷಕರ ಸಮನ್ವಯ ಹಾಗೂ ಪೂರ್ಣ ಸಹಕಾರ ಅಗತ್ಯ. ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಒಮ್ಮೆ ಯೋಚಿಸಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು. 2020ರ ಎಸ್​ಎಸ್​ಎಲ್​ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರಗಳಿಂದ ಹೇಗೆ ಸೋಂಕು ಹರಡದಂತೆ ನೋಡಿಕೊಂಡಿದ್ದೆವೋ, ಅದೇ ರೀತಿ ಈಗ ಶಾಲೆಗಳಿಂದ ಸೋಂಕು ಬರದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರವಿದೆ ಎಂದು ಸುರೇಶ್​ಕುಮಾರ್ ವಿವರಿಸಿದ್ದಾರೆ.

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಹೊರೆಯಾಗದಂತೆ, ಅವರ ಕಲಿಕೆಗೆ ಲೋಪವಾಗದಂತೆ ಪಠ್ಯವನ್ನು ರಚಿಸಿ ಇನ್ನು ಒಂದು ವಾರದ ಒಳಗೆ ಪ್ರಕಟ ಮಾಡಲಾಗುತ್ತದೆ. ಶಾಲೆಗಳನ್ನು ಆರಂಭಿಸುವುದು ಒಂದು ಸವಾಲು ಆದರೆ ಇವುಗಳನ್ನು ಎದುರಿಸುವಲ್ಲಿ ನಮ್ಮ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ನೆರವಾಗುತ್ತವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ ಆನ್​ಲೈನ್, ಆಫ್​ಲೈನ್ ಕ್ಲಾಸ್​ ಸಂಪೂರ್ಣ ಬಂದ್ -ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್

 

ಜನವರಿ 1ರಿಂದ ವಿದ್ಯಾಗಮ ಶಿಕ್ಷಣ ತರಗತಿ ಆರಂಭ: ನಿಯಮಗಳೇನು ಗೊತ್ತೇ?