ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ದಾಳಿ: ₹ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ

ಮೈಸೂರು ಅರಣ್ಯ ಭವನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಶಿವಶಂಕರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿವಶಂಕರ್​ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಆದಾಯಕ್ಕಿಂತ ಮೂರುಪಟ್ಟು ಹೆಚ್ಚಿನ ಆಸ್ತಿ ಇದ್ದುದು ಎಸಿಬಿ ಕಾರ್ಯಾಚರಣೆ ಸಂದರ್ಭ ಬೆಳಕಿಗೆ ಬಂದಿದೆ.

  • TV9 Web Team
  • Published On - 16:00 PM, 20 Dec 2020
ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ದಾಳಿ: ₹ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ
ಎಸಿಎಫ್ ಶಿವಶಂಕರ್ ಮನೆ

ಮೈಸೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಮೈಸೂರು ಅರಣ್ಯ ಭವನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ (ಎಸಿಎಫ್) ಕಾರ್ಯ ನಿರ್ವಹಿಸುತ್ತಿರುವ  ಶಿವಶಂಕರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದರು. ಏಕಕಾಲದಲ್ಲಿ 5 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಯಿತು.

ಶಿವಶಂಕರ್ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಆದಾಯಕ್ಕಿಂತ ಮೂರುಪಟ್ಟು ಹೆಚ್ಚಿನ ಆಸ್ತಿ ಕಂಡು ಬಂದಿದೆ. ಕಾರ್ಯಾಚರಣೆ ವೇಳೆ 45ಕ್ಕೂ ಹೆಚ್ಚು ಎಕರೆ ಜಮೀನು ಹಾಗೂ 16ಕ್ಕೂ ಹೆಚ್ಚು ನಿವೇಶನಗಳನ್ನು ಶಿವಶಂಕರ್ ಹೊಂದಿರುವುದು ಪತ್ತೆಯಾಯಿತು. ಒಟ್ಟು ₹ 3.79 ಕೋಟಿ ಮೌಲ್ಯದ ಆಸ್ತಿ ಹಾಗೂ ₹ 18 ಲಕ್ಷ ನಗದು ಪತ್ತೆಯಾಗಿದೆ.

ಎಸಿಬಿ ಎಸ್​ಪಿ ಡಾ. ಸುಮನ್ ಡಿ ಪನೆಕರ್ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಎಚ್​.ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ನಜರ್‌ಬಾದ್, ಸರಸ್ವತಿಪುರಂ, ಜೆ.ಸಿ. ಬಡಾವಣೆ, ಮಳವಳ್ಳಿ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಯಿತು.