
ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ (Bangalore) ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್, ಮನೆಗಳ ತೆರವು ದೊಡ್ಡ ಮಟ್ಟದಲ್ಲಿ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ. ಇಲ್ಲಿನ ಸಂತ್ರಸ್ತರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ಕೊಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೇರೆಬೇರೆ ಜಿಲ್ಲೆಗಳಲ್ಲಿ ವಸತಿರಹಿತ ಸಂತ್ರಸ್ತರಿದ್ದರೂ ಅವರಿಗೆ ದಶಕಗಳಿಂದ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್ (Congress) ಸರ್ಕಾರದ ಈ ಇಬ್ಭಗೆ ನೀತಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ 1959 ಲಿಂಗನಮಕ್ಕಿ ಡ್ಯಾಂ ನಿರ್ಮಾಣ ಆಗಿದ್ದು, ಸಾಗರ, ಹೊಸನಗರ ತಾಲೂಕಿನ 6000ಕ್ಕೂ ಅಧಿಕ ರೈತರು ಭೂಮಿ ಕಳೆದುಕೊಂಡಿದ್ದರು. ಇವರಿಗೆ 9,600 ಎಕರೆ ಭೂಮಿ ನೀಡಲಾಗಿದೆ. ಆದರೂ, 65 ವರ್ಷದಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದೇ ಕಾಂಗ್ರೆಸ್ ನಾಯಕರು ಸಂತ್ರಸ್ತರ ಪರ ಪಾದಯಾತ್ರೆ ಮಾಡಿದ್ದರು. ಆದರೆ ಪಕ್ಷ ಅಧಿಕಾರಕ್ಕೆ ಬಂದಮೇಲೆ ಮರೆತು ಬಿಟ್ಟಿದ್ದಾರೆ.
2019 ರಲ್ಲಿ ಕುಶಾಲನಗರ ತಾಲೂಕಿನ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಕುಂಬಾರಗುಂಡಿ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ಅಂದು ಮನೆ ಕಳೆದುಕೊಂಡವರಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯೇ ಆಶ್ರಯವಾಗಿದೆ. ಸರ್ಕಾರ ಪರಿಹಾರ ಕೊಟ್ಟಿಲ್ಲ. ಪ್ರರ್ಯಾಯ ಮನೆಗೆ 7 ಎಕರೆ ಜಾಗ ಗುರುತು ಮಾಡಿದ್ದರೂ ಭರವಸೆ ಈಡೇರಿಲ್ಲ.
ಬೆಳಗಾವಿಯ ಕಲ್ಯಾಣನಗರದಲ್ಲಿ ಮಳೆಯಿಂದ ಪ್ರೇಮಾ ಎಂಬುವವರ ಮನೆ ಬಿದ್ದಿತ್ತು. 1095 ದಿನ ಕಳೆದರೂ ಸೂರು ಸಿಕ್ಕಿಲ್ಲ. ಹೊಸ ಮನೆಗೆ ಪಾಯ ಹಾಕಿ ಪರಿಹಾರಕ್ಕಾಗಿ ಕುಟುಂಬ ಕಾಯುತ್ತಿದೆ.
ಬೆಂಗಳೂರು ಜನರಿಗೆ ಪರಿಹಾರ ಕೊಟ್ಟ ಸರ್ಕಾರದ ವಿರುದ್ಧ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರು ಆಕ್ರೋಶ ಹೊರಹಾಕಿದ್ದಾರೆ. ಸರಕಾರದ ಇಬ್ಬಗೆಯ ನೀತಿಗೆ ಕಿಡಿಕಾರಿದ್ದಾರೆ.
ಧಾರವಾಡ, ಬಳ್ಳಾರಿಯಲ್ಲಿ 15 ವರ್ಷಗಳ ಹಿಂದೆ ಕೆಐಎಡಿಬಿಗೆ ರೈತರು ಭೂಮಿ ನೀಡಿದ್ದರು. ಬಳ್ಳಾರಿಯಲ್ಲಿ 12 ಸಾವಿರ ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಧಾರವಾಡದ ರೈತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಎರಡು ಗ್ರಾಮದಲ್ಲಿ 11 ಕುಟುಂಬಗಳಿಗೆ 7 ವರ್ಷಗಳಿಂದ ಆಶ್ರಯವಿಲ್ಲ. 7 ವರ್ಷಗಳ ಹಿಂದೆ ಮಳೆಯಿಂದ ಮನೆಗಳು ನೆಲಸಮವಾಗಿದ್ದು, ಮಲೆಮನೆ, ಮಧುಗುಂಡಿಯ 11 ಕುಟುಂಬಗಳು ಮನೆಗಾಗಿ ಎದುರು ನೋಡುತ್ತಿವೆ.
ಮತ್ತೊಂದೆಡೆ, ಗದಗ ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೂ ನೆಲೆಯಿಲ್ಲ. ಇಷ್ಟೇ ಅಲ್ಲ, ಧಾರವಾಡದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ 21 ಎಕರೆ ಜಮೀನು ನೀಡಿದ್ದ ಮಧು ಪ್ರಸಾದ್ ಎಂಬುವವರಿಗೆ ಪರಿಹಾರ ಸಿಕ್ಕಿಲ್ಲ.
ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ಫಟಾಫಟ್ ಪರಿಹಾರ! ಚಿಕ್ಕಮಗಳೂರು, ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಮನೆ ಯಾವಾಗ?
ಕೋಗಿಲು ನಿವಾಸಿಗಳ ವಿಷಯದಲ್ಲಿ ಮಾತ್ರ ಸರ್ಕಾರ ತಕ್ಷಣ ಪರಿಹಾರ ನೀಡಲು ಮುಂದಾಗಿದೆ. ಇದು ರಾಜ್ಯದ ಜನರಿಗೆ ಒಂದು ನ್ಯಾಯ, ಪಕ್ಕದ ರಾಜ್ಯದಿಂದ ಬಂದು ಅಕ್ರಮವಾಗಿ ಶೆಡ್ ನಿರ್ಮಿಸಿ ಬೀಡುಬಿಟ್ಟವರಿಗೆ ಮತ್ತೊಂದು ನ್ಯಾಯಾವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
Published On - 6:47 am, Wed, 31 December 25