ಕೋಗಿಲು ನಿರಾಶ್ರಿತರಿಗೆ ಫಟಾಫಟ್ ಪರಿಹಾರ! ಚಿಕ್ಕಮಗಳೂರು, ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಮನೆ ಯಾವಾಗ?
ಬೆಂಗಳೂರು ಕೋಗಿಲು ನಿರಾಶ್ರಿತರಿಗೆ ಕಾಂಗ್ರೆಸ್ ಸರ್ಕಾರ ಮಿಂಚಿನ ವೇಗದಲ್ಲಿ ಪರಿಹಾರ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಂದೇಶದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಚಿಕ್ಕಮಗಳೂರು ಮತ್ತು ಕೊಡಗಿನ ಪ್ರವಾಹ ಸಂತ್ರಸ್ತರು ಐದಾರು ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಇನ್ನೂ ಪರಿಹಾರ ದೊರೆತಿಲ್ಲ. ಇದು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಡಿಸೆಂಬರ್ 30: ಕಟಾ ಕಟ್ ಪರಿಹಾರ, ಟಕಾಟಕ್ ಮನೆ ಹಂಚಿಕೆ! ಶನಿವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕೆ ಮತ್ತು ಎಐಸಿಸಿ ಪ್ರಧಾನ ಕಾರ್ಯಚದರ್ಶಿ ವೇಣುಗೋಪಾಲ್‌ರಿಂದ ಬಂದ ಒಂದೇ ಒಂದು ಸಂದೇಶದಿಂದ ಕರ್ನಾಟಕ (Karnataka) ಕಾಂಗ್ರೆಸ್ (Congress) ಸರ್ಕಾರ ಅಲರ್ಟ ಆಗಿತ್ತು. ಬೆಂಗಳೂರಿನ ಕೋಗಿಲು ನಿರಾಶ್ರಿತರಿಗೆ ತಕ್ಷಣವೇ ಪರಿಹಾರ ಒದಗಿಸಲು ಮುಂದಾಗಿದೆ. ಮನೆ ಕಳೆದುಕೊಂಡ ಅರ್ಹರಿಗೆ ಬೈಯಪ್ಪನ ಹಳ್ಳಿಯಲ್ಲಿ ಫ್ಲ್ಯಾಟ್ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಮಿಂಚಿನ ವೇಗದಲ್ಲಿ ಪರಹಾರ ನೀಡುವ ಕಾರ್ಯ ನಡೆಯುತ್ತಿದೆ. ಜಿಬಿಎ ಮತ್ತು ಜಿಲ್ಲಾಡಳಿತದಿಂದ ನಿರಾಶ್ರಿತರ ದಾಖಲೆ ಸಂಗ್ರಹವಾಗುತ್ತಿದೆ. ರಾಜೀವ್ ಗಾಂಧಿ ವಸತಿ ಅಧಿಕಾರಿಗಳೂ ಸಾಥ್ ನೀಡಿದ್ದಾರೆ.
ಪ್ರತಿ ಮನೆಯಿಂದಲೂ ವೋಟರ್ ಐಡಿ, ಕರೆಂಟ್ ಬಿಲ್, ಆಧಾರ್ ಕಾರ್ಡ್, ತಾತ್ಕಾಲಿಕ ಆದೇಶ ಪ್ರತಿ ಮತ್ತು ರೇಷನ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ನಿವಾಸಿಗಳ ಅರ್ಹತೆ ನೋಡಿ ಮನೆ ಕೊಡುತ್ತೇವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.
ಒಬ್ಬರಿಗೊಂದು ನ್ಯಾಯ: ಚಿಕ್ಕಮಗಳೂರಿನ ಪ್ರವಾಹ ಸಂತ್ರಸ್ತರಿಗೆ 11 ವರ್ಷ ಆದರೂ ಇಲ್ಲ ಮನೆ
ತೆರವು ಮಾಡಿರುವುದು ಅಕ್ರಮ ಮನೆಗಳು ಅಥವಾ ಶೆಡ್ಗಳನ್ನು. ಆದರೂ ಪರಿಹಾರ ಕೊಡಲು ಸರ್ಕಾರ ಮುಂದಾಗಿದೆ. ಎರಡೇ ದಿನದಲ್ಲಿ ಕೋಗಿಲು ನಿರಾಶ್ರಿತರಿಗೆ ಸೂರು ಭಾಗ್ಯ ಕಲ್ಪಿಸುತ್ತಿದೆ. ಆದರೆ, ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಎರಡು ಗ್ರಾಮದಲ್ಲಿ 11 ಕುಟುಂಬಗಳಿಗೆ 7 ವರ್ಷಗಳಿಂದ ಆಶ್ರಯವಿಲ್ಲ. 7 ವರ್ಷಗಳ ಹಿಂದೆ ಮಳೆಯಿಂದ ಮನೆಗಳು ನೆಲಸಮವಾಗಿದ್ದು, ಮಲೆಮನೆ, ಮಧುಗುಂಡಿಯ 11 ಕುಟುಂಬಗಳು ಮನೆಗಾಗಿ ಎದುರು ನೋಡುತ್ತಿವೆ.
ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ
2019 ರಲ್ಲಿ ಕುಶಾಲನಗರ ತಾಲೂಕಿನ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಕುಂಬಾರಗುಂಡಿ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ಅಂದು ಮನೆ ಕಳೆದುಕೊಂಡವರಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯಷ್ಟೇ ಆಶ್ರಯವಾಗಿದೆ. ಈವರೆಗೂ ಸರ್ಕಾರ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ. ಜಿಲ್ಲಾಡಳಿತದಿಂದ ಅಭ್ಯತ್ ಮಂಗಲದಲ್ಲಿ 7 ಎಕರೆ ಜಾಗ ಗುರುತು ಮಾಡಿ ಮನೆ ಕಟ್ಟಿಕೊಡುವುದಾಗಿ ನೀಡಿದ್ದ ಭರವಸೆ, ಭರವಸೆಯಾಗಿಯೇ ಉಳಿದಿದೆ.
ಒಂದು ಧರ್ಮದ ಓಲೈಕೆಗೆ ಅತಿವೇಗದ ಪರಿಹಾರ: ಜೋಶಿ ಕಿಡಿ
ಸರ್ಕಾರದ ನಡೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಒಂದು ದರ್ಮದ ಓಲೈಕೆಗೆ ಅತಿವೇಗದ ಪರಿಹಾರ ಎಂದು ಎಕ್ಸ್ ಸಂದೇಶದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಠಿಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ. ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರೂ ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬಹುದೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಜೋಶಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ
ನಮಗೆ ಸೂರಿಲ್ಲ ಎಂದು ಸಂತ್ರಸ್ತರೇ ಹೇಳಿಕೊಂಡರೂ, ವಿಪಕ್ಷಗಳು, ಮಾಧ್ಯಮಗಳು ಕಿವಿ ಹಿಂಡಿದರೂ ದಪ್ಪ ಚರ್ಮದ ಸರ್ಕಾರಗಳಿಗೆ ನಾಟಿಲ್ಲ. ಇವರಿಗೂ ಪರಿಹಾರ ಕೊಡಬೇಕು ಎಂದರೆ, ಕಾಂಗ್ರೆಸ್ ಹೈಕಮಾಂಡ್‌ನಿಂದಲೇ ಆದೇಶ ಬರಬೇಕಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ವರದಿ: ಅಶ್ವಿತ್ ಮಾವಿನಗುಣಿ ಹಾಗೂ ಗೋಪಾಲ್ ಎಎಸ್, ಟಿವಿ9




