
ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಕ ಘಟಕದಲ್ಲಿ ನಡೆದ ಕಾರ್ಮಿಕರ ಗಲಾಟೆ ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ತೈವಾನ್ ಮೂಲದ ವಿಸ್ಟ್ರಾನ್ ಕಂಪೆನಿ ತಿಳಿಸಿದೆ.
ಕಾರ್ಮಿಕರ ಗಲಾಟೆಗೆ ಸಂಬಂಧಿಸಿದಂತೆ ಸರ್ಕಾರದ ತನಿಖೆಯೊಂದಿಗೆ ಆಂತರಿಕ ತನಿಖೆಯೂ ನಡೆಯುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತೇವೆ. ತೈವಾನ್ ಕಚೇರಿಗೆ ಇಲ್ಲಿಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ನರಸಾಪುರದ ಘಟಕ ಸಣ್ಣಮಟ್ಟದಲ್ಲಿರುವ ಕಾರಣ ಹೆಚ್ಚಿನ ತೊಂದರೆಗಳೇನೂ ಸಂಭವಿಸುವುದಿಲ್ಲ. ಗ್ರಾಹಕರ ಸಮಸ್ಯೆ ಪರಿಹರಿಸಲು ಯಾವುದೇ ಅಡೆತಡೆಗಳಾಗುವುದಿಲ್ಲ ಎಂದು ವಿಸ್ಟ್ರಾನ್ ಭರವಸೆ ವ್ಯಕ್ತಪಡಿಸಿದೆ.
ಕಾರ್ಮಿಕರ ಆರೋಪದ ಕುರಿತು ನಿನ್ನೆ ಸ್ಪಷ್ಟನೆ ನೀಡಿದ್ದ ವಿಸ್ಟ್ರಾನ್, ಕೆಲ ಕಾರ್ಮಿಕರಿಗೆ ಸಂಬಳ ನೀಡುವಲ್ಲಿ ವ್ಯತ್ಯಯ ಆಗಿರುವುದು ನಿಜ, ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿತ್ತು. ಸಂಸ್ಥೆಯ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿದಂತೆ ತಯಾರಿಕಾ ಉತ್ಪನ್ನಗಳಿಗೆ ದೊಡ್ಡಮಟ್ಟದ ಹಾನಿಯೇನೂ ಆಗಿಲ್ಲ. ಒಟ್ಟಾರೆ ₹ 52 ಕೋಟಿ ನಷ್ಟವಾಗಿರಬಹುದು ಎಂದು ತಿಳಿಸಿದೆ.
ಆದರೆ, ಆರಂಭದಲ್ಲಿ ಈ ಕುರಿತು ವಿಸ್ಟ್ರಾನ್, ಕಾರ್ಮಿಕರ ದಾಳಿಯಿಂದ ಸುಮಾರು ಹಾನಿಯಾಗಿದೆ. ಅಂದಾಜು ₹ 437 ಕೋಟಿ ನಷ್ಟವಾಗಿದೆ ಎಂದು ಹೇಳಿತ್ತು. ವಿಸ್ಟ್ರಾನ್ ಗಲಾಟೆಯ ಕುರಿತು ನಿನ್ನೆ ಹೇಳಿಕೆ ನೀಡಿದ್ದ ಆ್ಯಪಲ್ ಸಂಸ್ಥೆ ವಿಸ್ಟ್ರಾನ್ ಆಂತರಿಕ ಕಲಹಗಳು ಪರಿಹಾರವಾಗುವ ತನಕ ಯಾವುದೇ ಹೊಸಾ ಯೋಜನೆ ಮಂಜೂರು ಮಾಡುವುದಿಲ್ಲ ಮತ್ತು ಈಗಾಗಲೇ ನೀಡಿರುವ ಕೆಲಸಗಳನ್ನೂ ತಡೆ ಹಿಡಿಯುತ್ತೇವೆ ಎಂದು ತಿಳಿಸಿತ್ತು.
ವಿಸ್ಟ್ರಾನ್ ಕಂಪನಿಗೆ ಕೊಡಲ್ಲ ಹೊಸ ಉತ್ಪಾದನಾ ಗುತ್ತಿಗೆಗಳು: ಆ್ಯಪಲ್ ಕಟು ನುಡಿ
Published On - 1:59 pm, Mon, 21 December 20