
ಬೆಂಗಳೂರು, ನವೆಂಬರ್ 09: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswi Surya) ಸತತ ಎರಡನೇ ಬಾರಿಗೆ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು (Ironman 70.3) ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಶಿಸ್ತಿಗೆ ಮಾದರಿಯಾಗಿದ್ದಾರೆ. ಈ ವರ್ಷದ ಐರನ್ ಮ್ಯಾನ್ ಓಟದಲ್ಲಿ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸಹ ಭಾಗವಹಿಸಿದ್ದು ಮತ್ತೊಂದು ವಿಶೇಷ.
ಸಂಸದ ತೇಜಸ್ವಿ ಸೂರ್ಯ ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇವುಗಳಲ್ಲಿ ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಣ್ಣಾಮಲೈ ಅವರು ಈ ಓಟವನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.
A strong finish to my second Ironman 70.3, made all the more special because I did it alongside my dear brother @annamalai_k Anna.
Thousands participated with incredible enthusiasm. PM Sri @narendramodi Ji’s call for a #FitIndia is inspiring a new wave of health, discipline and… pic.twitter.com/qPZ9FeeOwx
— Tejasvi Surya (@Tejasvi_Surya) November 9, 2025
50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗಿಯಾಗುವ ಐರನ್‌ಮ್ಯಾನ್ 70.3 ಗೋವಾ, ಭಾರತದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅಂತಿಮ ಪರೀಕ್ಷೆಯಾಗಿದೆ. ಇದಕ್ಕಾಗಿ ಕೆಲ ತಿಂಗಳು ನಾನು ಕಠಿಣ ತರಬೇತಿ ಪಡೆದುಕೊಂಡಿದ್ದೆ. ಸದ್ಯ ಈ ಓಟವನ್ನು ಪೂರ್ಣಗೊಳಿಸಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆ ಜಟಾಪಟಿ: ಡಿಕೆಶಿಗೆ ಪ್ರಶ್ನೆಗಳ ಸುರಿಮಳೆ, ಉತ್ತರಿಸುವಂತೆ ತೇಜಸ್ವಿ ಸೂರ್ಯ ಸವಾಲ್
ಇನ್ನು ಕುರಿತಾಗಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ನನ್ನ ಆತ್ಮೀಯ ಸಹೋದರ ಅಣ್ಣಾಮಲೈ ಅವರೊಂದಿಗೆ ಭಾಗವಹಿಸಿದ್ದರಿಂದ ನನ್ನ ಎರಡನೇ ಐರನ್‌ಮ್ಯಾನ್ 70.3 ಗೆ ಒಂದು ಬಲ ಸಿಕ್ಕಿದೆ. ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಉಪಕ್ರಮ ಸ್ಫೂರ್ತಿಯಾಗಿದ್ದು, ಯುವಕರಲ್ಲಿ ಆರೋಗ್ಯ, ಶಿಸ್ತು ಮತ್ತು ದೃಢ ಸಂಕಲ್ಪದ ಅಲೆಯನ್ನು ಪ್ರೇರೇಪಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಯುವ ರಾಷ್ಟ್ರವಾಗಿ, ಆರೋಗ್ಯಕರ ಮತ್ತು ದೈಹಿಕ ಸಾಮರ್ಥ್ಯಕ್ಕೆ ನಾವು ಆದ್ಯತೆ ನೀಡಬೇಕು. ಫಿಟ್‌ನೆಸ್ ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಯುವಕರು ಮುಂದೆ ಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮದೇ ಆದ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಲು ನಾನು ಒತ್ತಾಯಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇನ್ನು ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಚಾಂಪಿಯನ್ ಆಗಿದ್ದಾರೆ. ಇದು ದೃಢತೆ ಮತ್ತು ಶಿಸ್ತನ್ನು ಪ್ರದರ್ಶಿಸುತ್ತದೆ. ಪ್ರಧಾನಿ ಮೋದಿ ಅವರ ಫಿಟ್ ಇಂಡಿಯಾ ದೃಷ್ಟಿ ವಾಸ್ತವದಿಂದ ದೂರವಿಲ್ಲ, ಹೆಚ್ಚು ಹೆಚ್ಚು ಯುವಕರು ಫಿಟ್‌ನೆಸ್ ಅನ್ನು ಆದ್ಯತೆಯಾಗಿ ಮತ್ತು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.