Rekha Kadiresh ರೇಖಾಳನ್ನು ಕೊಂದು ಕದಿರೇಶ್ ಆತ್ಮಕ್ಕೆ ಶಾಂತಿ ಕೊಡಿಸಲು ಶಪಥ ಮಾಡಿದ್ದನಂತೆ ಪೀಟರ್

| Updated By: Digi Tech Desk

Updated on: Jun 29, 2021 | 12:41 PM

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಪೊಲೀಸರು ಅಂದುಕೊಂಡಂತೆ ಇದು ಕುಟುಂಬಸ್ಥರೇ ಮಾಡಿಸಿರೋ ಕೊಲೆ ಅನ್ನೋದಕ್ಕೆ ಕೆಲವು ಸಾಕ್ಷ್ಯಗಳು ಸಿಗ್ತಿವೆ. ಕುಟುಂಬಸ್ಥರ ನಡುವಿನ ವೈಮನಸ್ಸು, ರಾಜಕೀಯ ವೈಷಮ್ಯಕ್ಕೆ ಕೊಲೆ ನಡೆದಿದೆ ಅನ್ನೋದಕ್ಕೆ ಪುರಾವೆಗಳು ಸಿಗ್ತಿವೆ. ಇಷ್ಟಕ್ಕೂ ರೇಖಾ ಮರ್ಡರ್ ಕೇಸ್ನಲ್ಲಿ ತನಿಖೆ ಎಲ್ಲಿಗೆ ಬಂತು. ಹೊಸದಾಗಿ ಸಿಕ್ಕ ಟ್ವಿಸ್ಟ್ಗಳೇನು ಎಂಬ ಡಿಟೈಲ್ಸ್ ಇಲ್ಲಿದೆ.

Rekha Kadiresh ರೇಖಾಳನ್ನು ಕೊಂದು ಕದಿರೇಶ್ ಆತ್ಮಕ್ಕೆ ಶಾಂತಿ ಕೊಡಿಸಲು ಶಪಥ ಮಾಡಿದ್ದನಂತೆ ಪೀಟರ್
ರೇಖಾ ಕದಿರೇಶ್ ದಂಪತಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಜೂನ್ 24 ಗುರುವಾರ ಬೆಳಗ್ಗೆ 10.30ಕ್ಕೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ರನ್ನ ಯಾರೋ ದುಷ್ಕರ್ಮಿಗಳು ಹಾಡಹಗಲೇ ಕೊಲೆ ಮಾಡಿದ್ದಾರೆ ಅನ್ನೋ ಸುದ್ದಿ ಬೆಂಗಳೂರಿನ ತುಂಬಾ ಹರಿದಾಡಿತ್ತು. ಇದಾದ 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ರು. ಆಗಿನಿಂದ ಈ ಹತ್ಯೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ರೇಖಾಗೆ ಅತ್ಯಂತ ಆಪ್ತನಾಗಿದ್ದ ಪೀಟರ್ ಈ ಕೊಲೆಯ ಪ್ರಮುಖ ವ್ಯಕ್ತಿಯಾಗಿದ್ದ. ಆಪ್ತರೇ ರೇಖಾ ಹತ್ಯೆ ಮಾಡಬೇಕಾದ್ರೆ ಬಲವಾದ ಕಾರಣವಿರಬೇಕು ಅಂತಾ ಊಹಿಸಿದ ಪೊಲೀಸರ ಊಹೆ ನಿಜವಾಗಿದ್ರೂ.. ಆ ಕಾರಣ ಗೊತ್ತಾಗುತ್ತಾ ಹೋಗ್ತಿದ್ದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ.

ಪೀಟರ್ ಬ್ರೈನ್ ವಾಷ್ ಮಾಡಿ ರೇಖಾ ಹತ್ಯೆಗೆ ಮಸಲತ್ತು
ಪೀಟರ್, ಸೂರ್ಯ, ಅರುಳ್, ಮಾಲಾ ಈ ನಾಲ್ಕು ಆರೋಪಿಗಳು ರೇಖಾ ಕದಿರೇಶ್ ಹತ್ಯೆಗೆ ಪ್ರಮುಖ ಕಾರಣ ಅಂತಾ ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳು ಹೇಳ್ತಿವೆ. ಈ ಕೇಸ್ಗೆ ಸಂಬಂಧಿಸಿ 7 ಜನ ಅರೆಸ್ಟ್ ಆಗಿದ್ದಾರೆ. ಕದಿರೇಶ್ ಬದುಕಿದ್ದಾಗಿನಿಂದಲೂ ಆತನಿಗೆ ಅತ್ಯಂತ ಆಪ್ತನಾಗಿದ್ದವನೇ ಪೀಟರ್. ಕದಿರೇಶ್ ಸತ್ತ ಬಳಿಕ ಆತನ ಪತ್ನಿ ರೇಖಾ ಜೊತೆಗೂ ತನ್ನ ಆಪ್ತ ಸಂಬಂಧ ಮುಂದುವರಿಸಿದ್ದ. ಆದ್ರೆ, ಕಸ ವಿಲೇವಾರಿ ಕಾಂಟ್ರ್ಯಾಕ್ಟ್ ಪೀಟರ್ ಕೈ ತಪ್ಪಿದ ಮೇಲೆ ಆತನಿಗೆ ಹಣಕಾಸು ಸಮಸ್ಯೆ ಶುರುವಾಗಿತ್ತು. ಆಗಿನಿಂದಲೂ ಆತ ರೇಖಾ ವಿರುದ್ಧ ಒಳಗೊಳಗೆ ದ್ವೇಷದ ಭಾವನೆ ಬೆಳೆಸಿಕೊಂಡಿದ್ದ. ಇದನ್ನೇ ಮಾಲಾ ಮತ್ತು ಆಕೆಯ ಪುತ್ರ ಅರುಳ್ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡ್ರು ಅನ್ನೋದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಕದಿರೇಶ್ ಹತ್ಯೆ ಬಳಿಕ ರೇಖಾ, ಕದಿರೇಶ್ ಸಂಬಂಧಿಕರನ್ನ ಹತ್ತಿರಕ್ಕೆ ಬಿಟ್ಟು ಕೊಳ್ಳುತ್ತಿರಲಿಲ್ಲ. ಛಲವಾದಿಪಾಳ್ಯ ವಾರ್ಡ್ನಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳನ್ನ ಮಾಡುತ್ತಾ ಜನರಿಗೂ ಹತ್ತಿರವಾಗಿದ್ರು. ಇದೆಲ್ಲವನ್ನ ಕಂಡು ಆಕೆಯ ನಾದಿನಿ ಮಾಲಾಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ. ಅಲ್ದೆ, ಮುಂಬರೋ ಚುನಾವಣೆಯಲ್ಲಿ ತನ್ನ ಮಗ ಅಥವಾ ಮಗಳು ಅಥವಾ ಸೊಸೆಯನ್ನ ಕಣಕ್ಕಿಳಿಸಬೇಕು ಅಂತಾ ಮಾಲಾ ಯೋಚನೆ ಮಾಡ್ತಿದ್ಲು. ಆದ್ರೆ, ಇದಕ್ಕೆ ಅಡ್ಡವಾಗಿದ್ದಿದ್ದೇ ರೇಖಾ ಕದಿರೇಶ್. ಹೇಗಾದ್ರೂ ಮಾಡಿ ಈ ಅಡ್ಡಿಯನ್ನ ತೊಲಗಿಸಬೇಕು ಅಂತಾ ಯೋಚನೆ ಮಾಡ್ತಿದ್ದಾಗ ಸಿಕ್ಕಿದ್ದೇ ಪೀಟರ್. ರೇಖಾ ಮತ್ತು ಪೀಟರ್ ನಡುವೆ ಹಣಕಾಸು ಸಮಸ್ಯೆ ತಲೆದೋರಿದೆ ಅಂತಾ ಮಾಲಾ ಮತ್ತು ಆಕೆಯ ಮಗ ಅರುಳ್ಗೆ ಹಿಂಟ್ ಸಿಗುತ್ತಿದ್ದಂತೆ.. ಅವರ ಕ್ರಿಮಿನಲ್ ಮೈಂಡ್ ಅಲರ್ಟ್ ಆಗಿತ್ತು. ಆಗಲೇ ರೇಖಾ ಕದಿರೇಶ್ ಕಥೆ ಮುಗಿಸಲು ಪ್ಲ್ಯಾನ್ ಸಿದ್ಧ ಮಾಡಿಕೊಂಡಿದ್ರು.

ಯಾವಾಗ ಪೀಟರ್ ಮತ್ತು ರೇಖಾ ನಡುವೆ ವೈಮನಸ್ಸಿದೆ ಅಂತಾ ಗೊತ್ತಾಯ್ತೋ.. ಪಕ್ಕಾ ಪ್ಲ್ಯಾನ್ ಮಾಡಿದ್ದ ಮಾಲಾ, ಮಗ ಅರುಳ್ನನ್ನ ಗಾಂಜಾ ಕೇಸ್ನಲ್ಲಿ ಜೈಲು ಸೇರುವಂತೆ ಮಾಡಿದ್ಲು. ಜೈಲಿನಲ್ಲಿ ಕದಿರೇಶ್ ಹತ್ಯೆ ಆರೋಪಿಗಳಾದ ವಿನಯ್ ಮತ್ತು ನವೀನ್ ಸ್ನೇಹ ಸಂಪಾದಿಸಿದ್ದ. ಜೈಲಿನಿಂದ ಹೊರ ಬಂದವನೇ ಮೊದಲೇ ಪೀಟರ್ ಸಂಪರ್ಕ ಸಾಧಿಸಿ.. ಕದಿರೇಶ್ ಹತ್ಯೆಯಲ್ಲಿ ರೇಖಾ ಕೈವಾಡವಿದೆ. ಇದೇ ಕಾರಣಕ್ಕೆ ನಿನ್ನನ್ನ ದೂರವಿಡ್ತಿದ್ದಾಳೆ ಅಂತಾ ಕಥೆ ಕಟ್ಟಿ ಅವನ ಬ್ರೈನ್ ವಾಷ್ ಮಾಡಿದ್ದ. ನೀನು ನಮ್ಮ ಕುಟುಂಬಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದೀಯ. ರೇಖಾ ಕೈವಾಡ ನಿನಗೆ ಗೊತ್ತಾಗುತ್ತೆ ಅನ್ನೋ ಕಾರಣಕ್ಕೆ ನಿನ್ನನ್ನ ದೂರವಿಟ್ಟಿದ್ದಾಳೆ ಅಂತಾ ಅವನ ತಲೆಗೆ ತುಂಬಿದ್ದ. ಜೊತೆಗೆ ಪೀಟರ್ಗೆ ಹಣ ಸಹಾಯವನ್ನೂ ಮಾಲಾ ಮತ್ತು ಅರುಳ್ ಮಾಡಿದ್ರು. ಇಷ್ಟಾಗುತ್ತಿದ್ದಂತೆ ಪೀಟರ್, ರೇಖಾ ಕೊಲೆ ಮಾಡೋಕೆ ಡಿಸೈಡ್ ಆಗಿ ಬಿಟ್ಟಿದ್ದ.

ಕದಿರೇಶ್ ಆತ್ಮಕ್ಕೆ ಶಾಂತಿ ಕೊಡಿಸಲು ಶಪಥ ಮಾಡಿದ್ದನಂತೆ ಪೀಟರ್
ಇನ್ನು ಮಾಲಾ ಮತ್ತು ಅರುಳ್ ಇಬ್ಬರೂ ಸೇರಿಕೊಂಡು ಪೀಟರ್ ಮೈಂಡ್ ವಾಷ್ ಮಾಡಿ ರೇಖಾಳ ವಿರುದ್ಧ ಎತ್ತಿಕಟ್ಟಿದ್ದರು. ಬಳಿಕ ಕದಿರೇಶ್ ಆತ್ಮಕ್ಕೆ ಶಾಂತಿ ಕೊಡಿಸಲು ರೇಖಾಳ ಕೊಲೆ ಮಾಡಲು ಪೀಟರ್ ಶಪಥ ಮಾಡಿದ್ದ. ಅಂದಿನಿಂದ ರೇಖಾ ಮೇಲೆ ಕೆಂಡಕಾರಲು ಮುಂದಾಗಿದ್ದ. ಈ ಮೊದಲೇ ಪೀಟರ್ನನ್ನು ಸಂಪೂರ್ಣವಾಗಿ ದೂರವಿಟ್ಟಿದ್ದ ರೇಖಾ ಪೀಟರ್ ಜಾಗಕ್ಕೆ ಮತ್ತೊಬ್ಬನನ್ನು ನೇಮಕ ಮಾಡಿಕೊಂಡಿದ್ದರು. ಪೀಟರ್ ಕಡೆಗಣಿಸಿದ್ದು ಮತ್ತು ಕದಿರೇಶ್ ಹತ್ಯೆ ರೂಮರ್ ನಿಂದ ರೇಖಾ ಹತ್ಯೆಗೆ ಸ್ಕೇಚ್ ಹಾಕಿದ್ದ. ರೇಖಾ ಹತ್ಯೆ ಮಾಡಿ ತನ್ನ ಗುರುವಿನ ಆತ್ಮಕ್ಕೆ ಶಾಂತಿ ಕರುಣಿಸಲು ಸಮಯಕ್ಕಾಗಿ ಕಾಯುತ್ತಿದ್ದ. ಸಮಯ ಸಿಕ್ಕಿದ ತಕ್ಷಣ ಪ್ಲಾನ್ ಮಾಡಿಕೊಂಡು ಕೊಲೆ ಮಾಡಲಾಗಿದೆ. ಸದ್ಯ ಪೊಲೀಸರ ವಿಚಾರಣೆಯಲ್ಲಿ ಒಂದೊಂದೆ ಸತ್ಯ ಬಯಲಾಗುತ್ತಿದೆ.

ಇಷ್ಟೆಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದವರು, ರೇಖಾ ಕೊಲೆ ಕೇಸ್ನಿಂದ ಎಸ್ಕೇಪ್ ಆಗಲು ಪ್ಲ್ಯಾನ್ ಮಾಡಿದ್ರು ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇದೇ ಕಾರಣಕ್ಕೆ ರೇಖಾ ಕೊಲೆಯಾದ ಕ್ಷಣದಿಂದ ಮಾಲಾ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡೋದ್ರಿಂದ ಹಿಡಿದು ರೇಖಾ ಅಂತ್ಯಕ್ರಿಯೆ ಆಗೋವರೆಗೆ ಜೊತೆಗೆ ಇದ್ಲು. ತನ್ನ ಸಂಬಂಧಿಯನ್ನ ಕಳೆದುಕೊಂಡ ರೀತಿ ಕಣ್ಣೀರು ಹಾಕಿದ್ಲಂತೆ. ಆದ್ರೆ, ಯಾವಾಗ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಇಟ್ಟುಕೊಂಡು ವಿಚಾರಣೆ ಶುರು ಮಾಡಿದ್ರೋ.. ಆಗ ಇವರ ಎಲ್ಲ ಪ್ಲ್ಯಾನ್ಗಳು ಒಂದೊಂದಾಗಿ ಬಯಲಾಗಿವೆ. ಅಲ್ದೆ, ಊಟದ ನೆಪದಲ್ಲಿ ಇವರು ಮಾಡಿದ್ದ ಮೀಟಿಂಗ್ನ ಫೋಟೋ ಕೂಡ ಮುಂದಿಟ್ಟು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಜೊತೆಗೆ ರೇಖಾ ಕೊಲೆಗೆ ಸುಪಾರಿ ಕೊಟ್ಟಿದ್ರಾ? ಸುಪಾರಿ ಕೊಟ್ಟಿದ್ರೆ ಎಷ್ಟು ಲಕ್ಷಕ್ಕೆ ಡೀಲ್ ಕುದುರಿಸಲಾಗಿತ್ತು ಅನ್ನೋದು ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೀತಿದೆ.

ಆರೋಪಿಗಳಿಗೆ ಪ್ರೇರಣೆ ನೀಡೋಕೆ.. ಅವರ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳೋ ಭರವಸೆಯನ್ನೂ ಮಾಲಾ ಮತ್ತು ಅರುಳ್ ನೀಡಿದ್ರಂತೆ. ಇದೆಲ್ಲವೂ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಒಟ್ನಲ್ಲಿ ರಾಜಕೀಯ ಮಹತ್ವಾಕಾಂಕ್ಷೆ.. ವೈಯಕ್ತಿಕ ದ್ವೇಷಕ್ಕೆ ಒಬ್ಬರು ಸಾವಿನ ಮನೆ ಸೇರಿದ್ರೆ.. ಉಳಿದವರು ಕಂಬಿ ಎಣಿಸ್ತಿದ್ದಾರೆ. ಇದರ ನಡುವೆ ರೇಖಾ ಮರ್ಡರ್ ಕೇಸ್ನಲ್ಲಿ ಇನ್ನೂ ಯಾವ್ಯಾವ ಟ್ವಿಸ್ಟ್ ಸಿಗುತ್ತೆ ಅಂತಾ ಕಾದು ನೋಡಬೇಕಿದೆ.

ಇದನ್ನೂ ಓದಿ: ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ; ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

Published On - 11:52 am, Tue, 29 June 21