ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ (Thawar Chand Gehlot) ನೇಮಕವಾಗಿದ್ದಾರೆ. ಹಾಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿರುವ ಥಾವರಚಂದ್ ಗೆಹಲೋತ್ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚರನೆ ಬೆನ್ನಲ್ಲೇ ನೇಮಕಾತಿಯಾಗಿದೆ. ಈ ಮೂಲಕ ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ಅಧಿಕಾರ ಸ್ವೀಕರಿಸಲಿದ್ದಾರೆ.
ಕರ್ನಾಟಕ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ನೇಮಕವಾಗುವ ಜತೆಗೆ ಒಟ್ಟು 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದೆ. ಜಾರ್ಖಂಡ್, ಹರಿಯಾಣ, ಮಿಜೋರಾಂ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗೋವಾ, ತ್ರಿಪುರಾ ರಾಜ್ಯಗಳಿಗೂ ಹೊಸ ರಾಜ್ಯಪಾಲರು ನೇಮಕವಾಗಿದ್ದಾರೆ. ಮಿಜೋರಾಂಗೆ ಹರಿಬಾಬು ಕಂಭಂಪತಿ, ಮಧ್ಯಪ್ರದೇಶಕ್ಕೆ ಮಂಗೂಭಾಯ್ ಛಗನ್‌ಭಾಯ್ ಪಟೇಲ್, ಹಿಮಾಚಲಪ್ರದೇಶಕ್ಕೆ ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್, ಗೋವಾಕ್ಕೆ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರಾಕ್ಕೆ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್ಗೆ ರಮೇಶ್ ಬೈಸ್, ಹರಿಯಾಣಕ್ಕೆ ಬಂಡಾರು ದತ್ತಾತ್ತ್ರೇಯ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
President appoints Thaawarchand Gehlot as Governor of Karnataka, Hari Babu Kambhampati as Governor of Mizoram, Mangubhai Chhaganbhai Patel as Governor of Madhya Pradesh, and Rajendra Vishwanath Arlekar as Governor of Himachal Pradesh pic.twitter.com/ZA1GrFrgLV
— ANI (@ANI) July 6, 2021
84 ವರ್ಷದ ವಜೂಬಾಯಿ ವಾಲಾ ಅವರು (Vajubhai Rudabhai Vala) 2014ರ ಸೆಪ್ಟೆಂಬರ್ನಲ್ಲಿ ಕರ್ನಾಟಕದ 18ನೆಯ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಇದೀಗ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ನೇಮಕವಾಗಿದ್ದಾರೆ. ಕರ್ನಾಟಕದ ನೂತನ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸದ್ಯ ಕೇಂದ್ರ ಸಚಿವರಾಗಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯಸಭೆಯ ಸದಸ್ಯರೂ ಆಗಿರುವ ಅವರು ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಸಂಘ ಪರಿವಾರದ ಹಿನ್ನೆಲೆಯ ಥಾವರಚಂದ್ ಗೆಹಲೋತ್, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೂ ಆಗಿದ್ದರು.
ಇದನ್ನೂ ಓದಿ:
ರಾಜ್ಯಪಾಲ ಹುದ್ದೆಗೋಸ್ಕರ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ಖೇದಕರ; ಹೈಕೋರ್ಟ್
Published On - 12:24 pm, Tue, 6 July 21