ಚಿದಾನಂದ ಸವದಿಯವರೇ ಚಾಲಕನ ಸೀಟಿನಲ್ಲಿ ಕುಳಿತಿದ್ದರು ಪ್ರತ್ಯಕ್ಷದರ್ಶಿ ಹನುಮಂತ ದೊಡ್ಡಮನಿ ಗಂಭೀರ ಆರೋಪ

ಚಿದಾನಂದ ಸವದಿ ಕಾರಿನ ಅಪಘಾತ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಪ್ರತ್ಯಕ್ಷದರ್ಶಿ ಹನುಮಂತ ದೊಡ್ಡಮನಿ, ಚಿದಾನಂದ ಸವದಿ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಸವಾರನನ್ನು ಆಸ್ಪತ್ರೆಗೆ ಸೇರಿಸಿದ್ದು ನಾವೇ ಎಂದು ಹೇಳಿಕೆ ನೀಡಿದ್ದಾರೆ. ಬಾಗಲಕೋಟೆ ಎಸ್​ಪಿ ಚಿದಾನಂದ ಸವದಿ ಕಾರಿನಲ್ಲಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಚಿದಾನಂದ ಸವದಿಯ ಸ್ನೇಹಿತರು ಬೈಕ್ ಸವಾರನನ್ನು ಆಸ್ಪತ್ರೆಗೆ ಸೇರಿಸಿದ್ದು ನಾವೇ ಎಂದು ಹೇಳಿ ಕರೆಯ ದಾಖಲೆಗಳನ್ನು ತೋರಿಸಿದ್ದಾರೆ.

ಚಿದಾನಂದ ಸವದಿಯವರೇ ಚಾಲಕನ ಸೀಟಿನಲ್ಲಿ ಕುಳಿತಿದ್ದರು ಪ್ರತ್ಯಕ್ಷದರ್ಶಿ ಹನುಮಂತ ದೊಡ್ಡಮನಿ ಗಂಭೀರ ಆರೋಪ
ಚಿದಾನಂದ ಸವದಿ (ಫೈಲ್ ಚಿತ್ರ)
TV9kannada Web Team

| Edited By: shivaprasad.hs

Jul 06, 2021 | 3:15 PM

ಬಾಗಲಕೋಟೆ:  ಚಿದಾನಂದ ಸವದಿಯವರೇ ಚಾಲಕನ ಸೀಟಿನಲ್ಲಿ ಕುಳಿತಿದ್ದರು. ನಾನು ಪಕ್ಕಾ ನೋಡಿದ್ದೇನೆ ಎಂದು ರಸ್ತೆ ಬಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹನುಮಂತ ಅವರು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಪ್ರತ್ಯಕ್ಷದರ್ಶಿ ಹನುಮಂತ ದೊಡ್ಡಮನಿ ಅವರು ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ನಮಗೆ ಮೊದಲು ಅವರು ಸವದಿ ಮಗ ಎಂದು ಗೊತ್ತಿರಲಿಲ್ಲ. ನಾವು ಅವರನ್ನು ಹಿಡಿದು ಅಲ್ಲೇ ಕೂರಿಸಿದ್ದೆವು. ನಾನು ಲಕ್ಷ್ಮಣ ಸವದಿ ಅವರ ಮಗ ಎಂದು ಅವರು ರೇಗಾಡಿದರು. ನಮ್ಮ ಗ್ರಾಮದವರೊಬ್ಬರು ವಿಡಿಯೋ‌ ಮಾಡುತ್ತಿದ್ದರು. ಆಗ ಮೊಬೈಲ್ ಕಸಿದುಕೊಂಡು ಡಿಲೀಟ್ ಮಾಡಿದರು. ಅವರು ಆಂಬುಲೆನ್ಸ್​ಗೆ ಕರೆ ಮಾಡಿಲ್ಲ, ಕರೆ ಮಾಡಿದ್ದು ನಾವು. ಅಪಘಾತ ನಂತರ ಅವರು ಕಾರಿನ ನಂಬರ್ ಕೀಳುತ್ತಿದ್ದರು. ಡಿಸಿಎಂ ಸವದಿ ಮಗ ನಾನು, ಏನು ಮಾಡ್ತೀರೋ ಮಾಡಿಕೊಳ್ಳಿ ಎಂದು ಅಪಘಾತದ ಬಳಿಕ‌ ನಮಗೆ ಬೈಯ್ಯಲು ಶುರು‌ ಮಾಡಿದರು ಎಂದು ಹನುಮಂತ ಆರೋಪಿಸಿದ್ದಾರೆ.ನಂತರ ನಾವು ಊರ ಜನರನ್ನು ಕರೆದೆವು. ಅಷ್ಟರಲ್ಲಿ ಇನ್ನೊಂದು ಕಾರಿನಲ್ಲಿ ಅವರು ಹೊರಟು ಹೋದರು ಎಂದು ಪ್ರತ್ಯಕ್ಷದರ್ಶಿ ಟಿವಿ9ಗೆ ತಿಳಿಸಿದ್ದಾರೆ.

ಕಾರಿನಲ್ಲಿದ್ದವರೇ ಆಸ್ಪತ್ರೆಗೆ ಸಾಗಿಸಿದ್ದು: ಮೂವರು ಪ್ರತ್ಯಕ್ಷದರ್ಶಿಗಳು

ಘಟನೆ ನಡೆದ ಬಳಿಕ ಸ್ಥಳಕ್ಕೆ ತೆರಳಿದ ಯಲ್ಲಪ್ಪ ಅಮಾತಿಗೌಡರ್, ಬಸವರಾಜ ಗಂಗೂರು, ಹನುಮಂತ ಹಳಬರ್ ಕಾರಿನಲ್ಲಿದ್ದವರೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಟಿವಿ9ಗೆ ಹೇಳಿಕೆ ನೀಡಿದ್ದಾರೆ. ದೇವಲಾಪುರ ಗ್ರಾಮದಲ್ಲಿ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದು ಘಟನೆ ನಡೆದ ಬಳಿಕ 15 ನಿಮಿಷಕ್ಕೆ ಸ್ಥಳಕ್ಕೆ  ಹೋದೆವು. ಆಗ ಅವರು ಕೂಡಲೆಪ್ಪನ ಮುಖವನ್ನು ತೊಳೆಯುತ್ತಿದ್ದರು. ಕಾರಿನಲ್ಲಿದ್ದವರೇ ಮೊದಲು ಉಪಚಾರ ಮಾಡಿ, 108 ಆಂಬುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದರು. ಅವರಲ್ಲಿ ಸವದಿ‌ ಅವರ ಮಗ ಇರೋದೇ ಗೊತ್ತಿರಲಿಲ್ಲ. ಮುಂಜಾನೆ ನಮಗೆ ಅದು ಸವದಿ ಮಗ ಅನ್ನೋದು ಗೊತ್ತಾಯಿತು. ಇದು ನಮಗೆ ಗೊತ್ತಿರೋ ಸತ್ಯ ಎಂದು ಪ್ರತ್ಯಕ್ಷದರ್ಶಿಗಳು ಟಿವಿ9 ವರದಿಗಾರರಿಗೆ ಹೇಳಿಕೆ ನೀಡಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಚಿದಾನಂದ ಸವದಿ ಕಾರಿನಲ್ಲಿರಲಿಲ್ಲ, ಆಸ್ಪತ್ರೆಗೆ ಸೇರಿಸಿದ್ದು ನಾವೇ: ಕರೆ ದಾಖಲೆ ತೋರಿಸಿದ ಸ್ನೇಹಿತ ಸುಶೀಲ್ ಕುಮಾರ್ 

ಬೆಳಗಾವಿ: ಅಪಘಾತವಾದ ಕಾರಿನಲ್ಲಿ ನಾಲ್ಕು ಜನ ಗೆಳೆಯರಿದ್ದೆವು. ಅಪಘಾತವಾದ ಸಂದರ್ಭದಲ್ಲಿ ಕಾರಿನಲ್ಲಿ ಚಿದಾನಂದ ಸವದಿ ಇರಲಿಲ್ಲ. ಅವರಿಗೆ ಕಾರು ಅಪಘಾತ ಆಗಿದೆ ಎಂದು ನಾವು ಕರೆ ಮಾಡಿ ತಿಳಿಸಿದ್ದು. ನಾವೇ ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ, ಸವಾರನ ಜೀವ ರಕ್ಷಿಸಲು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದೆವು ಎಂದು ಟಿವಿ9ಗೆ ಚಿದಾನಂದ ಸವದಿ ಸ್ನೇಹಿತ ಸುಶೀಲ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸವದಿ ಮನೆಯಲ್ಲಿ ಹೇಳಿಕೆ ನೀಡಿರುವ ಅವರು ಚಿದಾನಂದ ಸವದಿ ಮುಕ್ಕಾಲು ಗಂಟೆ ನಮ್ಮಿಂದ ಮುಂದೆ ಇದ್ದರು. ರಾಷ್ಟ್ರೀಯ ಹೆದ್ದಾರಿ ಮೇಲೆ ಹೋಗುವಾಗ ಬೈಕ್ ಸವಾರನೇ ಎಡದಿಂದ ಬಲಕ್ಕೆ ಬಂದಿದ್ದು. ನಮ್ಮ ಡ್ರೈವರ್ ಕಂಟ್ರೋಲ್ ಮಾಡೋಕೆ ಟ್ರೈ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನಾವು ಸವಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಡ್ರೈವರ್ ಹಾಗೂ ಇನ್ನುಳಿದ ಇಬ್ಬರು ಸ್ನೇಹಿತರು ಸ್ಥಳದಲ್ಲಿದ್ದರು. ಈ ವೇಳೆ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಕಾರಿನ ಮೇಲೆ ಕಲ್ಲು ತೂರಿ, ಚಕ್ರದ ಗಾಳಿ ಬಿಡಲು ಯತ್ನಿಸಿದ್ದಾರೆ. ನಾವು ಆಸ್ಪತ್ರೆಗೆ ಹೋದ ಬಳಿಕ ಚಿದಾನಂದ ಸವದಿ ಆಸ್ಪತ್ರೆ ಬಂದರು. ಆದರೆ ಅದಾಗಲೇ ಸವಾರ ಮೃತಪಟ್ಟಿದ್ದರು ಎಂದು ಸುಶೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಆಂಬುಲೆನ್ಸ್​ಗೆ ಕರೆ ಮಾಡಿದ್ದು ನಾವೇ ಎಂದು ಕರೆಗಳ ಡಿಟೈಲ್ ತೋರಿಸಿದ ಅವರು, ಬೈಕ್ ಸವಾರ ಹೆಲ್ಮೆಟ್ ಹಾಕಿರಲಿಲ್ಲ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಹೋಗುವವರೆಗೂ ಆರಾಮವಾಗಿದ್ದರು ಆದರೆ ಆಕ್ಸಿಜನ್ ಲೆವಲ್ ಕಡಿಮೆಯಾಗಿ ಮೃತಪಟ್ಟಿದ್ದಾರೆ. ಹೆಲ್ಮೆಟ್ ಹಾಕಿದ್ದರೆ ಬದುಕುಳಿಯುತ್ತಿದ್ದರು ಎಂದು ಸುಶೀಲ್ ಕುಮಾರ್ ಟಿವಿ9ಗೆಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿರಲಿಲ್ಲ: ಬಾಗಲಕೋಟೆ ಎಸ್​ಪಿ ಪ್ರತಿಕ್ರಿಯೆ

ಇದನ್ನೂ ಓದಿ: DCM Laxman Savadi Son: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು

(He is in Driver seat says eyewitness Hanumantha Doddamani regardingChidananda Savadi’s car accident case)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada