ಮೋದಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​: ಗುರುವಾರದ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಗಬಹುದೇ ಹೆಚ್ಚಿನ ಸ್ಥಾನ?

Union Cabinet Expansion: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದ ಜನರ ನಿರೀಕ್ಷೆ ಹೆಚ್ಚಾಗಿದೆ. 25 ಎಂಪಿ ಕ್ಷೇತ್ರಗಳನ್ನು ಗೆದ್ದುಕೊಟ್ಟ ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಇನ್ನಷ್ಟು ಸ್ಥಾನ ಸಿಗಲಿ ಎಂಬ ಬಯಕೆ ಜಾಸ್ತಿಯಾಗಿದೆ.

ಮೋದಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​: ಗುರುವಾರದ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಗಬಹುದೇ ಹೆಚ್ಚಿನ ಸ್ಥಾನ?
ಪ್ರಧಾನಿ ನರೇಂದ್ರ ಮೋದಿ
Follow us
Lakshmi Hegde
|

Updated on:Jul 07, 2021 | 9:38 AM

ಬಹುದಿನಗಳಿಂದ ಕಾಯುತ್ತಿದ್ದ ಕೆಂದ್ರ ಸಂಪುಟ ವಿಸ್ತರಣೆ ಇಂದು (ಬುಧವಾರ) ನಡೆಯಲಿದ್ದು, ಸಂಪುಟಕ್ಕೆ ಯಾರು ಸೇರುತ್ತಾರೆ? ಯಾರನ್ನು ಕೈ ಬಿಡುತ್ತಾರೆ ಎಂಬ ಕುರಿತು ಲೆಕ್ಕಾಚಾರ ಶುರುವಾಗಿದೆ. ಗರಿಷ್ಠ 81 ಸಚಿವರನ್ನು ಹೊಂದಲು ಅವಕಾಶ ಇರುವ ಸಂಪುಟದಲ್ಲೀಗ 53ಮಂದಿ ಇದ್ದಾರೆ. ಈ ಬಾರಿ ಸಂಪುಟ ವಿಸ್ತರಣೆ ವೇಳೆ ಏನಿಲ್ಲವೆಂದರೂ 20-25 ಹೊಸ ಮುಖಗಳಿಗೆ ಅವಕಾಶ ಸಿಗುವುದು ಪಕ್ಕಾ ಎನ್ನುತ್ತಿದೆ ಬಿಜೆಪಿಯ ಉನ್ನತ ಮೂಲಗಳು. ಎನ್​ಡಿಎ ಮೈತ್ರಿಕೂಟದ ಪಕ್ಷಗಳಾದ ಎಲ್​ಜೆಪಿ, ಜೆಡಿಯು ಪಕ್ಷಗಳಿಗೂ ಈ ಬಾರಿ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಕರ್ನಾಟಕದ ನಿರೀಕ್ಷೆ ಕೂಡ ಹೆಚ್ಚಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 25 ಸೀಟ್​ಗಳನ್ನು ರಾಜ್ಯದಲ್ಲಿ ಗೆದ್ದಿತ್ತು. ರಾಜ್ಯದಲ್ಲಿ ಇರುವುದೇ 28 ಲೋಕಸಭಾ ಕ್ಷೇತ್ರಗಳು. ಅದರಲ್ಲಿ 25ನ್ನು ಬಿಜೆಪಿ ಬಾಚಿಕೊಂಡಿದ್ದು ಕಡಿಮೆ ಸಾಧನೆಯಲ್ಲ. ಇಡೀ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿ ಕೊಟ್ಟ ಕರ್ನಾಟಕಕ್ಕೆ ಈ ಬಾರಿ ಈಗಿರುವ ಎರಡು ಸಂಪುಟ ದರ್ಜೆ ಸಚಿವ ಸ್ಥಾನಕ್ಕಿಂತ ಹೆಚ್ಚಿನ ಸೀಟು ಸಿಗುವ ಸಾಧ್ಯತೆ ಇದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ, 2023 ಮತ್ತು 2024 ಚುನಾವಣೆಗೆ ಈಗಿಂದಲೇ ಕೆಲಸ ಮಾಡಲು ಪಕ್ಷವನ್ನು ಸಜ್ಜುಗೊಳಿಸಲು ಏನು ಬೇಕೋ ಆ ತಂತ್ರವನ್ನು ನಾಡಿದ್ದು ನಡೆಯುವ ವಿಸ್ತರಣೆ ಕಾಲದಲ್ಲಿ ಮಾಡುವ ಸಾಧ್ಯತೆ ಇದೆ.

25 ಸ್ಥಾನಗಳನ್ನು ಗೆದ್ದ ಕರ್ನಾಟಕಕ್ಕೆ ಮೊದಲ ಬಾರಿಗೆ ಸಂಪುಟ ರಚನೆ ಮಾಡುವಾಗ ಮೂರು ಸ್ಥಾನ ಸಿಕ್ಕಿತ್ತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದ ಡಿ.ವಿ.ಸದಾನಂದ ಗೌಡರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿತ್ತು. ಧಾರವಾಡ ಲೋಕಸಭಾ ಕ್ಷೇತ್ರದ ಎಂಪಿ ಪ್ರಲ್ಹಾದ್​ ಜೋಶಿಯವರಿಗೆ ಸಂಸದೀಯ ವ್ಯವಹಾರಗಳ ಖಾತೆ ಮತ್ತು ಬೆಳಗಾವಿ ಕ್ಷೇತ್ರದ ಎಂಪಿ ಸುರೇಶ್​ ಅಂಗಡಿಯವರಿಗೆ ರೈಲ್ವೆ ಖಾತೆ ಸಹಾಯಕ ಸಚಿವನ ಸ್ಥಾನ ನೀಡಲಾಗಿತ್ತು. ಆ ಮೂಲಕ ರಾಜ್ಯದಲ್ಲಿ ಪ್ರಾಬಲ್ಯವಿರುವ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಲಾಗಿತ್ತು

ಕರ್ನಾಟಕದ ನಿರೀಕ್ಷೆ ಹೆಚ್ಚಾಗಿದೆ ಇದೀಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದ ಜನರ ನಿರೀಕ್ಷೆ ಹೆಚ್ಚಾಗಿದೆ. 25 ಎಂಪಿ ಕ್ಷೇತ್ರಗಳನ್ನು ಗೆದ್ದುಕೊಟ್ಟ ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಇನ್ನಷ್ಟು ಸ್ಥಾನ ಸಿಗಲಿ ಎಂಬ ಬಯಕೆ ಜಾಸ್ತಿಯಾಗಿದೆ. ಇದರೊಂದಿಗೆ ಜಾತಿ, ವರ್ಗದ ಲೆಕ್ಕಾಚಾರ ಹಾಕಿದಾಗ ಈ ಬಾರಿ ಕರ್ನಾಟಕದಿಂದ ಯಾವೆಲ್ಲ ಸಂಸದರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕೇಂದ್ರ ಸಚಿವ ಸಂಪುಟ ಪುನರ್​ ರಚನೆ ವಿಚಾರ ಹೊರಬಿದ್ದಾಗಿನಿಂದಲೂ ಎ.ನಾರಾಯಣಸ್ವಾಮಿಯವರ ಹೆಸರು ಕೇಳಿಬರುತ್ತಿದೆ.  ಪರಿಶಿಷ್ಟ ಜಾತಿಯ ಎಡ ಪಂಗಡಕ್ಕೆ ಸೇರಿದ ನಾರಾಯಣ ಸ್ವಾಮಿಯವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಒತ್ತಾಯ ಮಾದಿಗ ಸಮುದಾಯದವರಿಂದ ಬಲವಾಗಿ ಕೇಳಿಬರುತ್ತಿದೆ. 64 ವರ್ಷದ ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2010ರಿಂದ 2013ರವರೆಗೆ, ಜಗದೀಶ್ ಶೆಟ್ಟರ್​ ಸಿಎಂ ಆಗಿದ್ದ ಸಂದರ್ಭದ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬರೋಬ್ಬರಿ 85 ಸಾವಿರ ಮತಗಳಿಂದ ಗೆದ್ದಿದ್ದಾರೆ. ಇವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡುವುದು ಎಲ್ಲ ರೀತಿಯಿಂದಲೂ ಸೂಕ್ತ. ಮಾದಿಗ ಸಮುದಾಯವನ್ನೂ ಪರಿಗಣಿಸಿದಂತೆ ಆಗುತ್ತದೆ ಎಂಬುದು ಇದೀಗ ಚರ್ಚೆಯಾಗುತ್ತಿರುವ ವಿಚಾರ.

ಕಲಬುರಗಿ ಸಂಸದ ಉಮೇಶ್ ಜಾಧವ್​ ಉಮೇಶ್​ ಜಾಧವ್​ ಕಾಂಗ್ರೆಸ್​ನಿಂದ ಬಂದು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದವರು. ಇನ್ನೊಂದು ಮಹತ್ವದ ವಿಚಾರವೆಂದರೆ ಕಾಂಗ್ರೆಸ್​​ನಲ್ಲಿ ಸೋಲಿಲ್ಲದ ಸರದಾರ ಎಂದೇ ಹೆಸರು ಮಾಡಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದಾರೆ. ಮೊದಲ ಹಂತದಲ್ಲಿ ಕೇಂದ್ರ ಸಂಪುಟ ರಚನೆ ಮಾಡುವಾಗಲೇ ಇವರ ಹೆಸರು ಮುಂಚೂಣಿಯಲ್ಲಿ ಇತ್ತು. ಎಸ್​ಸಿ ಕೋಟಾದಿಂದ ಉಮೇಶ್​ ಜಾಧವ್​ಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಬೇಕು ಎಂಬ ಒತ್ತಾಯ ಬಲವಾಗಿತ್ತು. ಮೈತ್ರಿ ಸರ್ಕಾರವನ್ನು ವಿರೋಧಿಸಿ ಬಂದಿದ್ದ ಉಮೇಶ್​ ಜಾಧವ್ ಹೆಸರು ಈ ಬಾರಿ ಸಂಪುಟ ವಿಸ್ತರಣೆ ವೇಳೆ ಮತ್ತೊಮ್ಮೆ ಚಾಲ್ತಿಯಲ್ಲಿದೆ. ನಾನು ಸಚಿವ ಸ್ಥಾನ ಕೇಳುವುದಿಲ್ಲ. ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹಿಂದೆಯೇ ಹೇಳಿದ್ದ ಉಮೇಶ್​ ಜಾಧವ್​ ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಂತೂ ಹೌದು.

ಪ್ರತಾಪ್​ ಸಿಂಹ, ಶೋಭಾ ಕರಂದ್ಲಾಜೆ ಇವರು ಕೂಡ ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಗಳೂ ಹೌದು. ಈ ಬಾರಿ ಸಂಪುಟ ವಿಸ್ತರಣೆ ನಡೆಯುವಾಗ ಸದಾನಂದ ಗೌಡರನ್ನು ಕೆಳಗಿಳಿಸುವ ಸಾಧ್ಯತೆ ಇದೆ ಎಂಬ ಮಾತನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಗುಂಪು ಹೇಳುತ್ತಿದೆ. ಹಾಗೊಮ್ಮೆ ಅವರನ್ನು ಇಳಿಸಿದರೆ ಅದೇ ಸಮುದಾಯ ಅಂದರೆ ಒಕ್ಕಲಿಗೆ ಸಮುದಾಯಕ್ಕೆ ಸೇರಿದ ಇನ್ನೊಬ್ಬರಿಗೆ ಖಂಡಿತ ಸ್ಥಾನ ಸಿಗುತ್ತದೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳೆಂದರೆ ಪ್ರತಾಪ್​ ಸಿಂಹ ಮತ್ತು ಶೋಭಾ ಕರಂದ್ಲಾಜೆ. ಒಂದೊಮ್ಮೆ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಟ್ಟರೆ, ಆ ಸ್ಥಾನ ತಮಗೇ ಎಂಬ ನಿರೀಕ್ಷೆಯಲ್ಲಿ ಇವರಿಬ್ಬರೂ ಇದ್ದಾರೆ. ಆದರೆ, ಪಕ್ಷದ ಮೂಲಗಳು ಹೇಳುವ ಪ್ರಕಾರ ಸದಾನಂದ ಗೌಡರಿಗೆ ಖೊಕ್​ ಕೊಡುವ ಸಾಧ್ಯತೆ ಕಡಿಮೆ.

ಪ್ರತಾಪ ಸಿಂಹ ಮೈಸೂರು-ಕೊಡಗು ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದರಾಗಿದ್ದು, ಕೇಂದ್ರದ ಮಟ್ಟದಲ್ಲಿ ಗುರುತಿಸಿಕೊಂಡವರು. ಇನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದವರು. ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡವರು. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ (2008-2009) ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಇಲಾಖೆಯ ಸಚಿವರಾಗಿದ್ದರು. 2010-2013ರವರೆಗೆ ಇಂಧನ ಇಲಾಖೆಯನ್ನು ನಿಭಾಯಿಸಿದ್ದಾರೆ.

ಶಿವಕುಮಾರ್​ ಉದಾಸಿ, ಪಿಸಿ ಗದ್ದಿಗೌಡರ್​ ಲಿಂಗಾಯತ ಕೋಟಾ ವಿಚಾರಕ್ಕೆ ಬಂದಾಗ ಇವರಿಬ್ಬರೂ ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತು ಇವರಿಬ್ಬರಲ್ಲಿ ಒಬ್ಬರಿಗೆ ಖಂಡಿತ ಈ ಬಾರಿ ಸಚಿವ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಸುರೇಶ್​ ಅಂಗಡಿಯವರು ನಿಧನರಾಗಿದ್ದು, ಅವರ ಸ್ಥಾನಕ್ಕೆ ಲಿಂಗಾಯತ ಸಮುದಾಯದಿಂದಲೇ ಮತ್ತೊಬ್ಬರಿಗೆ ಖಂಡಿತ ಅವಕಾಶ ಸಿಗಲಿದೆ ಎಂಬುದು ಲೆಕ್ಕಾಚಾರ.

ಇತ್ತೀಚೆಗಷ್ಟೇ ನಿಧನರಾದ ಹಾನಗಲ್​ ಶಾಸಕ ಸಿಎಂ ಉದಾಸಿಯವರ ಪುತ್ರ ಶಿವಕುಮಾರ್ ಉದಾಸಿಯವರು ಹಾವೇರಿ-ಗದಗ್​ ಲೋಕಸಭಾ ಕ್ಷೇತ್ರದ ಸಂಸದ. ಇಂಧನ ಸ್ಥಾಯಿ ಸಮಿತಿ ಸದಸ್ಯರೂ ಹೌದು ಮತ್ತು ಜಲಶಕ್ತಿ ಸಚಿವಾಲಯದ ಸಮಾಲೋನಾ ಸಮಿತಿಯ ಸದಸ್ಯರಾಗಿಯೂ ಸಕ್ರಿಯರಾಗಿದ್ದಾರೆ. ಪಿ.ಸಿ.ಗದ್ದಿಗೌಡರ್ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 2004ರಿಂದಲೂ ಅವರು ​ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಇದ್ದಾರೆ. 2019ರಲ್ಲಿ ನಾಲ್ಕನೇ ಬಾರಿಗೆ ಗೆದ್ದು ಗದ್ದುಗೆ ಏರಿರುವ ಪಿ.ಸಿ.ಗದ್ದಿಗೌಡರ್​ಗೆ ಈ ಬಾರಿ ಕೇಂದ್ರದಲ್ಲಿ ಸ್ಥಾನ ನೀಡುವುದು ನಿಜಕ್ಕೂ ಯೋಗ್ಯ ಎನ್ನುವ ಮಾತೂ ಕೇಳಿಬರುತ್ತಿದೆ.

ಕರ್ನಾಟಕದ ಭೌಗೋಳಿಕ ನೆಲೆಯನ್ನು ಪರಿಗಣಿಸಿ ಹೈದರಾಬಾದ್​-ಕರ್ನಾಟಕಕ್ಕೆ ಒಂದು ಮಂತ್ರಿ ಸ್ಥಾನ ನೀಡುವುದಕ್ಕೆ ನಿರ್ಧರಿಸಿದರೆ, ಆಗ ಬೀದರ್​ನ ಭಗವಂತ್​ ಖೂಬಾ ಮತ್ತು ಕಲಬುರ್ಗಿಯ ಜಾಧವ್​ ಅವರನ್ನು ಪರಿಗಣಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಿ ಇವರಷ್ಟೇ ಅಲ್ಲ, ಪ್ರತಿ ಸಂಸದರೂ ಒಂದಲ್ಲ ಒಂದು ಕಾರಣ ನೀಡಿ ತಾವೂ ಕೇಂದ್ರ ಸಚಿವ ಸ್ಥಾನಕ್ಕೆ ಅರ್ಹರು ಎಂಬ ಮಾತುಗಳನ್ನು ನೇರವಾಗಿಯೋ-ಪರೋಕ್ಷವಾಗಿಯೋ ಆಡುತ್ತಲೇ ಇದ್ದಾರೆ. ಈ ಮೇಲೆ ಹೇಳಿದವರ ಹೆಸರು ಹೊರತುಪಡಿಸಿದರೆ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್​ ಕೂಡ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯಲು ಬಯಸಿದವರೇ ಆಗಿದ್ದಾರೆ. ಇನ್ನು ರಾಜ್ಯದ ಜನರ ವಿಚಾರಕ್ಕೆ ಬಂದರೆ ಅವರೂ ಕೂಡ ತಮ್ಮ ತಮ್ಮ ಸಮುದಾಯದ ನಾಯಕರ ಹೆಸರನ್ನೇ ಹೇಳಿ ಆಗ್ರಹಿಸುತ್ತಿದ್ದಾರೆ.

-ಲಕ್ಷ್ಮೀ ಹೆಗಡೆ

ಇದನ್ನೂ ಓದಿ: Union Cabinet Expansion: ನಾಳೆಯಲ್ಲ, ನಾಡಿದ್ದು ಜುಲೈ 8ಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ

Cabinet expansion These BJP MPs from Karnataka are waiting for Get the Minister Post in PM Modis cabinet

Published On - 3:13 pm, Tue, 6 July 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?