ರಾಜ್ಯಪಾಲ ಹುದ್ದೆಗೋಸ್ಕರ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ಖೇದಕರ; ಹೈಕೋರ್ಟ್

ಆರೋಪಿಯು ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಜಾಮೀನು ನೀಡಿದರೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಸಾಧ್ಯತೆಯೂ ಇದೆ. ಹೀಗಾಗಿ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ತಿಳಿಸಿತು.

  • TV9 Web Team
  • Published On - 6:52 AM, 30 Apr 2021
ರಾಜ್ಯಪಾಲ ಹುದ್ದೆಗೋಸ್ಕರ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ಖೇದಕರ; ಹೈಕೋರ್ಟ್
ಯುವರಾಜ್​ ಸ್ವಾಮಿ

ಬೆಂಗಳೂರು: ಕರ್ನಾಟಕ ಹೈಕೋರ್ಟ್​ನ ಓರ್ವ ಮಾಜಿ ನ್ಯಾಯಾಧೀಶರು ರಾಜ್ಯಪಾಲರ ಹುದ್ದೆಯನ್ನು ಪಡೆಯಲು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ನ್ಯಾಯಾಧೀಶರ ಮತ್ತು ರಾಜ್ಯಪಾಲರ ಹುದ್ದೆಯ ಮೇಲಿನ ಗೌರವವನ್ನು ಕುಂಠಿತಗೊಳಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ.

ಹುದ್ದೆ ಕೊಡಿಸುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ವಿಚಾರಣೆ ಎದುರಿಸುತ್ತಿರುವ
ಆರೋಪಿ ಯುವರಾಜ್ ಸ್ವಾಮಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಉನ್ನತ ಹುದ್ದೆ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡಿದ್ದ ಆರೋಪದಲ್ಲಿ ಹೈಕೋರ್ಟ್​ನ ಮಾಜಿ ನ್ಯಾಯಾಧೀಶರೂ ಮೋಸಹೋಗಿರುವುದು ದುರದೃಷ್ಟಕರ. ರಾಜ್ಯಪಾಲ ಹುದ್ದೆ ಕೊಡಿಸುವುದಾಗಿ ನಿವೃತ್ತ ನ್ಯಾಯಾಧಿಶರಿಗೆ 8.50 ಕೋಟಿ ವಂಚನೆಗೈದ ಯುವರಾಜ್ ಸ್ವಾಮಿ ಪ್ರಕರಣದ ವಿಚಾರಣೆಯನ್ನು ನಿನ್ನೆ ನಡೆಸಿದ ಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯಪಾಲ ಹುದ್ದೆಯ ಗೌರವಕ್ಕೆ ಈ ಪ್ರಕರಣದಿಂದ ಭಂಗ ಬಂದಂತಾಗಿದೆ ಎಂದು ತಿಳಿಸಿದೆ.

ಆರೋಪಿ ಯುವರಾಜ್ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಟೋನಿ ಸೆಬಾಸ್ಟಿಯನ್, ಆರೋಪಿಯ ಮೇಲೆ ಪೊಲೀಸರು ಇಲ್ಲಸಲ್ಲದ ಆರೋಪ ಹೋರಿಸಿದ್ದಾರೆ. ಆದರೆ ಅವರ ವಾದಕ್ಕೆ ಮಣಿಯದ ಕೋರ್ಟ್, ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರಂತಹ ಉನ್ನತ ಶಿಕ್ಷಣ ಪಡೆದವರನ್ನೇ ಆರೋಪಿ ವಂಚನೆ ಎಸಗಿದ್ದಾನೆ. ಇದು ಘೋರ ಅಪರಾಧವಾಗಿದೆ ಎಂದು ತಿಳಿಸಿತು. ಅಲ್ಲದೇ ಆರೋಪಿಯು ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಜಾಮೀನು ನೀಡಿದರೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಸಾಧ್ಯತೆಯೂ ಇದೆ. ಹೀಗಾಗಿ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ತಿಳಿಸಿತು.

8.8 ಕೋಟಿ ಹಣ ಪಡೆದು ವಂಚಿಸಿದ ಆರೋಪ
ಕೇಂದ್ರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಿವೃತ್ತ ನ್ಯಾಯಾಧೀಶರ ಬಳಿ ಸುಮಾರು 8.8 ಕೋಟಿ ಹಣ ಪಡೆದು ಯುವರಾಜ್ ವಂಚಿಸಿದ್ದ ಎಂದು ನಿವೃತ್ತ ನ್ಯಾಯಾಧೀಶರು ಈ ಹಿಂದೆ ಹೇಳಿಕೆ ನೀಡಿದ್ದರು.

ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆಯ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ ಸಿಸಿಬಿ ಪೊಲೀಸರು ಇದೀಗ ಈ ಎಫ್ಐಆರ್ ಆಧಾರದಲ್ಲಿ ಹೇಳಿಕೆ ಪಡೆದುಕೊಂಡಿದ್ದರು. ಪೊಲೀಸ್ ಆಧಿಕಾರಿಯೊಬ್ಬರ ಮೂಲಕ ಯುವರಾಜ್ ನನಗೆ ಪರಿಚಯವಾಗಿದ್ದು, ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಯುವರಾಜ್ ನನಗೆ ನಂಬಿಸಿದ್ದಾನೆ ಎಂದು ಆ ನಿವೃತ್ತ ನ್ಯಾಯಾಧೀಶರು ಸಿಸಿಬಿಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಯುವರಾಜ್ ವಿರುದ್ಧ ಸಾಲು ಸಾಲು ದೂರು: ಪಶ್ಚಿಮ ವಿಭಾಗದ ಠಾಣೆಗಳಲ್ಲಿ ದಾಖಲಾಗಿವೆ 11 ಪ್ರಕರಣಗಳು..!

ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

(It is unfortunate that a former High Court judge paid bribe to mediator for the post of governor says Karnataka High Court Yuvaraj Swamy bail case)