ಬೆಂಗಳೂರು: ತನ್ನ ಪೋಷಕರನ್ನು ಕಳೆದುಕೊಂಡು ಅನಾಥನಾಗಿದ್ದ ವ್ಯಕ್ತಿಯೊಬ್ಬ ಮುಂದೆ ಏನು ಎಂದು ದಿಕ್ಕು ತೋಚದೆ ಕಳ್ಳದಾರಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನಲ್ಲಿ ಕಳ್ಳತನ ನಡೆಸುತ್ತಿದ್ದ ಖದೀಮ ಮೊಹಮದ್ ಸಾದಿಕ್ (31) ಅರೆಸ್ಟ್ ಆದ ಆರೋಪಿ. ತಾನೂ ಅವರಂತೆ ಹೈಫೈ ವ್ಯಕ್ತಿಯಾಗಬೇಕು ಅಂದುಕೊಂಡಿದ್ದ ಸಾದಿಕ್, ಜೈಕಲು ಸೇರಿದ ಕಥೆ ಇಲ್ಲಿದೆ ನೋಡಿ.
18ವರ್ಷಗಳ ಹಿಂದೆ ತಂದೆ ತಾಯಿಯನ್ನು ಕಳೆದುಕೊಂಡ ಸಾದಿಕ್ ಅನಾಥನಾಗಿದ್ದಾನೆ. ಇನ್ನೇನು ಮಾಡುವುದು ಎಂದು ದಿಕ್ಕು ತೋಚದೇ ಇದ್ದಾಗ ಕೆಲಸ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದಾನೆ. ಹೀಗೆ ಬಂದ ಸಾದಿಕ್ ಸಿಟಿ ಮಾರ್ಕೆಟ್ನ ನಂದಿನಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡ. ಇಲ್ಲಿ ಬರುತ್ತಿದ್ದ ಹೈಫೈ ಜನರನ್ನು ನೋಡಿ ಮುಂದೊಂದು ದಿನ ತಾನೂ ಅವರಂತೆ ಆಗಬೇಕು ಎಂದು ಅಂದುಕೊಂಡಿದ್ದ. ಇದಕ್ಕಾಗಿ ಆತ ಹಿಡಿದಿದ್ದೇ ಕಳ್ಳದಾರಿ.
ಇದನ್ನೂ ಓದಿ: Crime News: ವೈದ್ಯರ ನಿರ್ಲಕ್ಷ್ಯದಿಂದ ಮುಂಗೈ ಆಪರೇಷನ್ ಆದ ಯುವತಿ, 2 ವರ್ಷದ ಬಾಲಕಿ ಸಾವು
ತಾನೂ ಹಣವಂತನಾಗಬೇಕು ಎಂದು ಸಾದಿಕ್, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲು ಆರಂಭಿಸಿದ್ದಾನೆ. ಆರಂಭದಲ್ಲಿ ಒಂದೆರಡು ಮನೆಗಳಿಗೆ ನುಗ್ಗಿ ವಸ್ತುಗಳನ್ನು ಎಗರಿಸಿದ್ದಾನೆ. ತನ್ನ ಯೋಜನೆ ಯಶಸ್ವಿಯಾಗಿದ್ದನ್ನು ಕಂಡು ಕಳ್ಳತನ ಮಾಡುವುದನ್ನು ಖಾಯಂ ಆಗಿ ಮಾಡಿಕೊಂಡ. ಹೀಗೆ ನಾಲ್ಕೈದು ಬಾರಿ ಜೈಲು ಕೂಡ ಸೇರಿದ್ದನು.
ಕುಮಾರಸ್ವಾಮಿ ಲೇಔಟ್, ಕೆ.ಆರ್ ಮಾರುಕಟ್ಟೆ, ಬನಶಂಕರಿ ಹಾಗೂ ಬಸವನಗುಡಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದ ಸಾದಿಕ್, ಇದೀಗ ಮತ್ತೆ ಬಸವನಗುಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಎರಡು ದಿನಗಳ ಹಿಂದೆ ರೆಜೆನ್ಸಿ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಕಿಟಕಿ ಮೂಲಕ ಕೈ ಹಾಕಿ ಲಾಕ್ ತೆಗೆದು ಚಿನ್ನಾಭರಣ ದೋಚಿದ್ದನು. ಸುಮಾರು 18 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ದೋಚಿ ಪರಾರಿಯಾಗಿದ್ದನು. ಪ್ರಕರಣ ಸಂಬಂಧ ಸಾದಿಕ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈಜಲೆಂದು ಹಳ್ಳಕ್ಕೆ ಇಳಿದ ಯುವಕ ಕಣ್ಮರೆ
ಕಾರವಾರ: ಬರ್ತಡೇ ಪಾರ್ಟಿಗೆಂದು ತೆರಳಿದ್ದ ಯುವಕ ನೀರಿನಲ್ಲಿ ಕಣ್ಮರೆಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಅಣಶಿಯ ಕಾಪೋಯಿ ಹಳ್ಳದಲ್ಲಿ ನಿನ್ನೆ ನಡೆದಿದೆ. ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಅರಣ್ಯ ಇಲಾಖೆ ನೇಚರ್ ಕ್ಯಾಂಪ್ ಬಳಿ ಕಾಪೋಯಿ ಹಳ್ಳದಲ್ಲಿ ಆಯೋಜಿಸಿದ್ದ ಪಾರ್ಟಿಗೆಂದು ದಿಗಂಬರ್ ಮಡಿವಾಳ(23) ತೆರಳಿದ್ದನು. ಅಲ್ಲದೆ ಅರಣ್ಯ ಇಲಾಖೆಯ ಸ್ನೇಹಿತರೊಂದಿಗೆ ಊಟ ಮಾಡಿ ಬರುತ್ತೇನೆಂದು ಹೇಳಿ ಹೋಗಿದ್ದನು.
ಇದನ್ನೂ ಓದಿ: Crime News: ಅನ್ಯಕೋಮಿನವರಿಂದ ಯುವಕನ ಮೇಲೆ ಚಾಕು ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು!
ಪಾರ್ಟಿ ವೇಳೆ ಹಳ್ಳದಲ್ಲಿ ಈಜಲು ಇಳಿದಿದ್ದ ದಿಗಂಬರ್ ಮಡಿವಾಳ, ನೀರಲ್ಲಿ ತೇಲಿಹೋಗಿದ್ದಾನೆ. ಕೂಡಲೇ ಹಳ್ಳದ ಬಳಿ ಹುಡುಕಾಟ ನಡೆಸಿದರೂ ದಿಗಂಬರ್ ಪತ್ತೆಯಾಗಿಲ್ಲ. ಸಂಜೆ ವೇಳೆ ಮಾಹಿತಿ ತಿಳಿದ ಯುವಕನ ತಂದೆ, ತನ್ನ ಮಗನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಾವಿಯಲ್ಲಿ ಮುಳುಗಿ ಬಾಲಕಿಯರು ಸಾವು
ರಾಯಚೂರು: ಬಾವಿಯಲ್ಲಿ ಈಜಲು ಹೋಗಿ ಬಾಲಕಿಯರಿಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ. ತನಾಜ್ (16) ಹಾಗೂ ಮುಸ್ಕಾನ್ (18) ಸಾವನ್ನಪ್ಪಿದ ದುರ್ದೈವಿಗಳು. ರಾಯಚೂರು ನಗರದ ನಿವಾಸಿಗಳಾಗಿರುವ ಇವರು ನಿನ್ನೆ ಯರಗೇರಾ ಗ್ರಾಮದ ಅತ್ತೆಮನೆಗೆ ಹೋಗಿದ್ದರು. ಅದರಂತೆ ಸ್ನೇಹಿತರ ಜೊತೆ ಈಜಲು ಹೋಗಿದ್ದಾರೆ. ಈ ವೇಳೆ ಈಜು ಬಾರದೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ