ತುಮಕೂರು: ಅನ್ಯಕೋಮಿನ ಯುವಕರಿಂದ ಚಾಕು ಇರಿದ (Stab the knife) ಘಟನೆಯೊಂದು ತುಮಕೂರು ನಗರದ ದಿಬ್ಬೂರಹಳ್ಳಿಯಲ್ಲಿ ನಡೆದಿದೆ. ವಿನೋದ್(17) ಎಂಬ ಯುವಕನ ಮೇಲೆ ದಾಳಿ ನಡೆಸಿದ ಇಬ್ಬರು ಆರೋಪಿಗಳು, ವಿನೋದ್ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Crime News: ವಿದ್ಯುತ್ ತಂತಿ ಎಳೆಯುವ ವೇಳೆ ಅವಘಡ, ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು
ಗಿಣಿಶಾಸ್ತ್ರದವನು ಭವಿಷ್ಯ ಸರಿಯಾಗಿ ಹೇಳಿಲ್ಲ ಎಂದು ಹಲ್ಲೆ?
ಗಿಣಿ ಹೇಳಿದಂತೆ ಭವಿಷ್ಯ ನಡೆದಿಲ್ಲ ಎಂದು ಗಿಣಿಶಾಸ್ತ್ರದವನ ಮೇಲೆ ಹಲ್ಲೆ ನಡೆಸಿದ ಆರೋಪ ತುಮಕೂರು ನಗರದ ಉಪ್ಪಾರಹಳ್ಳಿಯಲ್ಲಿ ಕೇಳಿಬಂದಿದೆ. 40 ಸಾವಿರ ರೂಪಾಯಿ ಹಣ ಪಡೆದು ಭವಿಷ್ಯ ನುಡಿದಂತೆ ನಡೆದಿಲ್ಲ ಎಂದು ಗಿಣಿಶಾಸ್ತ್ರ ಹೇಳುವ ಮಾರಣ್ಣನ ಮೇಲೆ ಮೇ 23ರಂದು ತುಮಕೂರಿನ ಉಪ್ಪಾರಹಳ್ಳಿ ನಿವಾಸಿ ರಮ್ಯಾ ಮತ್ತು ಕೀರ್ತಿ ದಂಪತಿ ಸೇರಿದಂತೆ ಮೂವರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ಸಂಬಂಧ ಮಾರಣ್ಣ ಮೇ 25ರಂದು ಮಾರಣ್ಣನ ಪತ್ನಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ರಮ್ಯಾ, ಕೀರ್ತಿ ಹಾಗೂ ವಿನೋದ್ ಎಂಬವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಪೊಲೀಸರು ಮೂವರನ್ನು ನಿಂದಿಸಿದ ಆರೋಪ ಹೊರಿಸಿದ ಮೂವರು, ಪ್ರತಿ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ದೂರು ನೀಡಲು ಜಿಲ್ಲಾ ಪೊಲೀಸ್ ಕಚೇರಿಗೆ ರಮ್ಯಾ ತೆರಳಿದ್ದಾಳೆ. ಇದಕ್ಕೂ ಮುನ್ನ ಆಕೆ ವಿಷ ಸೇವಿಸಿದ್ದು, ಕಚೇರಿ ಬಳಿ ಅಸ್ವಸ್ಥರಾಗಿದ್ದಾಳೆ. ಕೂಡಲೇ ಪೊಲೀಸರು ರಮ್ಯಾಳನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಎಸ್ಪಿ ರಾಹುಲ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಲ್ಲೆ ಪ್ರಕರಣದಿಂದ ಪಾರಾಗಲು ಈ ರೀತಿ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸುವುದಾಗಿ ರಾಹುಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮೇ 27ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಟ್ಯಾಂಕರ್ ಮಾಲೀಕನ ಕಳ್ಳಾಟ
ಬೆಂಗಳೂರು: ಟ್ಯಾಂಕರ್ ಹರಿದು 3 ವರ್ಷದ ಮಗು ಸಾವು ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ವಾಟರ್ ಟ್ಯಾಂಕರ್ ಮಾಲೀಕನ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾನೆ. ಕೃತ್ಯ ನಡೆದಾಗ ಟ್ಯಾಂಕರ್ನಲ್ಲಿದ್ದ ಅಸಲಿ ಚಾಲಕನ ಬದಲಿಗೆ ಬೇರೊಬ್ಬ ಚಾಲಕನನ್ನು ಠಾಣೆಗೆ ಕರೆತಂದ ಟ್ಯಾಂಕರ್ ಮಾಲೀಕ ಆನಂದ್ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾನೆ. ವಿಚಾರಣೆ ವೇಳೆ ಅಸಲಿಯತ್ತು ಬೆಳಕಿಗೆ ಬಂದಿದ್ದು, ಹಣದ ಆಸೆಗೆ ರಮೇಶ್ ಬಾಬು ಆರೋಪಿಯಾಗಿ ಬಂದಿದ್ದನು. ಈ ಬಗ್ಗೆ ಸ್ವತಃ ರಮೇಶ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ನಂತರ ಅಸಲಿ ಚಾಲಕ ರಖಿಬ್ನನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಎಚ್ಎಸ್ಆರ್ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
ಮೈಸೂರು: ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಜಲಪುರಿ ಪೊಲೀಸ್ ವಸತಿಗೃಹದಲ್ಲಿ ನಡೆದಿದೆ. ದೇವರಾಜ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಸಪ್ಪ ಕೊನ್ನೂರು (27) ಆತ್ಮಹತ್ಯೆ ಮಾಡಿಕೊಂಡವರು. 2016ನೇ ಬ್ಯಾಚ್ನಲ್ಲಿ ಆಯ್ಕೆಯಾಗಿದ್ದ ಪರಸಪ್ಪ, ಒಂದೂವರೆ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೈಸೂರಿನ ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ