ಶೋಭಾ ಕರಂದ್ಲಾಜೆಗಿಂತಲೂ ಮೊದಲು ಕೇಂದ್ರದಲ್ಲಿ ಮಂತ್ರಿಗಿರಿ ಪಡೆದ ಕರ್ನಾಟಕದ ಮಹಿಳಾ ರಾಜಕಾರಣಿಗಳು ಇವರು..
ರಾಜ್ಯದಿಂದ ಈ ಹಿಂದೆ ಯಾರೆಲ್ಲ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದರು ಎಂದು ಒಮ್ಮೆ ಅವಲೋಕನ ಮಾಡಿದರೆ ಅದರಲ್ಲಿ ಮುಖ್ಯವಾಗಿ ನೆನಪಾಗುವವರು ಮಾರ್ಗರೆಟ್ ಆಳ್ವಾ ಮತ್ತು ಡಿ.ಕೆ.ತಾರಾದೇವಿ ಸಿದ್ಧಾರ್ಥ.
ದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಇಂದು ಕರ್ನಾಟಕದಿಂದ ನಾಲ್ವರಿಗೆ ಸ್ಥಾನ ಸಿಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನಸೆಳೆದಿರುವುದು ಶೋಭಾ ಕರಂದ್ಲಾಜೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚು ಸಿಗುತ್ತಿದೆ..ಪ್ರಮುಖ ಖಾತೆಗಳನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ. ಅದರಲ್ಲಿ ಅನುಮಾನವಿಲ್ಲ..ಆದರೆ ಕರ್ನಾಟಕದಿಂದ ಯಾವುದೇ ಮಹಿಳಾ ಸಂಸದೆ ಕೇಂದ್ರ ಸಚಿವ ಸ್ಥಾನ ಪಡೆದಿರಲಿಲ್ಲ. ಇದೀಗ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಟ್ಟು ಅದೇ ಒಕ್ಕಲಿಗ ಸಮುದಾಯದಿಂದ ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇಲ್ಲಿ ಪ್ರತಾಪ್ ಸಿಂಹ ಹೆಸರು ಕೇಳಿಬಂದಿದ್ದರೂ ಮಹಿಳಾ ಸಂಸದೆಯೊಬ್ಬರಿಗೆ ಸ್ಥಾನ ಕೊಟ್ಟಿದ್ದು ನಿಜಕ್ಕೂ ಸಂತಸದ ವಿಚಾರವೇ ಸರಿ.
ಹಾಗೇ ರಾಜ್ಯದಿಂದ ಈ ಹಿಂದೆ ಯಾರೆಲ್ಲ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದರು ಎಂದು ಒಮ್ಮೆ ಅವಲೋಕನ ಮಾಡಿದರೆ ಅದರಲ್ಲಿ ಮುಖ್ಯವಾಗಿ ನೆನಪಾಗುವವರು ಮಾರ್ಗರೆಟ್ ಆಳ್ವಾ ಮತ್ತು ಡಿ.ಕೆ.ತಾರಾದೇವಿ ಸಿದ್ಧಾರ್ಥ. ಇವರಿಬ್ಬರೂ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದರು.
ಮಾರ್ಗರೇಟ್ ಆಳ್ವಾ ವೃತ್ತಿಯಲ್ಲಿ ವಕೀಲೆಯಾಗಿದ್ದ ಮಾರ್ಗರೇಟ್ ಆಳ್ವಾ ಮಂಗಳೂರಿನವರು. ರಾಜಕೀಯ ಪ್ರವೇಶಿಸಿದ್ದು ಕಾಂಗ್ರೆಸ್ ಮೂಲಕ. 1974ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಅವರು ಮೂರು ಅವಧಿಗೆ (18 ವರ್ಷ) ರಾಜ್ಯಸಭೆ ಸದಸ್ಯರಾಗಿದ್ದರು. ಹಾಗೇ 1984 -85ರವರೆಗೆ (ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು) ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅದಾದ ಬಳಿಕ 1985 ರಿಂದ 89ರವರೆಗೆ ಅಂದರೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಯುವ, ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ರಾಜ್ಯ ಸಚಿವರಾಗಿದ್ದರು. ಈಗಲೂ ಸಹ ಅವರು ರಾಜ್ಯಸಭೆಯಿಂದಲೇ ಕೇಂದ್ರ ಸಚಿವ ಸ್ಥಾನ ಪಡೆದಿದ್ದರು. ನಂತರ 1991ರಲ್ಲಿ ಪಿ.ವಿ.ನರಸಿಂಹ ರಾವ್ ಪ್ರಧಾನಿಯಾದಾಗ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ ರಾಜ್ಯ ಸಚಿವ ಸ್ಥಾನ ಇವರಿಗೆ ಲಭಿಸಿತ್ತು. ಮತ್ತೆ 1993ರಲ್ಲಿ ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ ಜತೆ ಹೆಚ್ಚುವರಿಯಾಗಿ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ನಂತರ ಗೋವಾ, ಗುಜರಾತ್, ಉತ್ತರಾಖಂಡ, ರಾಜಸ್ಥಾನ ರಾಜ್ಯಗಳ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಡಿ.ಕೆ.ತಾರಾದೇವಿ ಸಿದ್ಧಾರ್ಥ ಡಿ.ಕೆ.ತಾರಾದೇವಿ ಚಿಕ್ಕಮಗಳೂರಿನ ಮೂಡಿಗೆರೆಯವರಾಗಿದ್ದಾರೆ. ಇವರೂ ಸಹ ಕಾಂಗ್ರೆಸ್ ಪಕ್ಷದ ರಾಜಕಾರಣಿ. 1981ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. ಅದಾದ ಬಳಿಕ 1984ರಲ್ಲಿ ರಾಜ್ಯಸಭೆಗೆ ಚುನಾಯಿತರಾಗುತ್ತಾರೆ. ಮತ್ತೆ 1990ರಲ್ಲಿ ಲೋಕಸಭೆಯಲ್ಲಿ ಗೆದ್ದು, 1991ರಲ್ಲಿ ಪ್ರಧಾನಿ ಪಿ.ವಿ.ನರಸಿಂಹ್ ರಾವ್ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯಸಚಿವರ ಸ್ಥಾನಕ್ಕೆ ಏರಿದ್ದರು.
ನಿರ್ಮಲಾ ಸೀತಾರಾಮನ್ ಇವರು ಮೂಲತಃ ತಮಿಳುನಾಡಿನವರು. ಆದರೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದಲ್ಲಿ ಮಹತ್ವದ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಮೊದಲ ಬಾರಿಗೆ ಆಡಳಿತ ಹಿಡಿದಾಗ ರಕ್ಷಣಾ ಸಚಿವರಾಗಿ ಇವರನ್ನು ನೇಮಕ ಮಾಡಲಾಗಿತ್ತು. ಇಂದಿರಾ ಗಾಂಧಿಯವರನ್ನು ಹೊರತುಪಡಿಸಿದರೆ ರಕ್ಷಣಾ ಇಲಾಖೆ ಜವಾಬ್ದಾರಿ ಹೊತ್ತ ಎರಡನೇ ಮಹಿಳೆ ಇವರೇ ಆಗಿದ್ದಾರೆ. ಹಾಗೇ, ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಮತ್ತೊಂದು ಉನ್ನತ ಇಲಾಖೆ ಆರ್ಥಿಕ ಖಾತೆ ಇವರ ಹೆಗಲೇರಿದೆ.
ಇದನ್ನೂ ಓದಿ: Modi Cabinet Reshuffle Live: ಕೆಲ ಹೊತ್ತಿನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ?!
These women politicians Of Karnataka got the ministry at the Center Cabinet
Published On - 8:07 pm, Wed, 7 July 21