Modi Cabinet Reshuffle: ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

TV9 Web
| Updated By: ganapathi bhat

Updated on:Jul 07, 2021 | 11:05 PM

PM Modi New Ministers Cabinet Updates: ಸಚಿವ ಸ್ಥಾನಕ್ಕೆ ರವಿಶಂಕರ್​ ಪ್ರಸಾದ್​​, ಪ್ರಕಾಶ್ ಜಾವಡೇಕರ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಲೈವ್ ಅಪ್ಡೇಟ್​ಗಳು ಇಲ್ಲಿದೆ.

Modi Cabinet Reshuffle: ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ
ಪ್ರಧಾನಿ ನರೇಂದ್ರ ಮೋದಿ

ಕೇಂದ್ರದ ನೂತನ ಸಚಿವರಾಗಿ 43 ಸಂಸದರು ಪದಗ್ರಹಣ ಮಾಡಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ 15 ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾರಾಯಣ ರಾಣೆ, ಸರ್ಬಾನಂದ್ ಸೋನಾವಾಲ್, ಡಾ.ವೀರೇಂದ್ರ ಕುಮಾರ್‌, ಜ್ಯೋತಿರಾದಿತ್ಯ ಸಿಂಧಿಯಾ, ಆರ್.ಪಿ. ಸಿಂಗ್‌, ಅಶ್ವಿನಿ ವೈಷ್ಣವ್‌, ಪಶುಪತಿಕುಮಾರ್ ಪಾರಸ್‌, ಕಿರಣ್ ರಿಜಿಜು, ಆರ್‌.ಕೆ.ಸಿಂಗ್‌, ಹರ್ದೀಪ್ ಸಿಂಗ್‌ ಪುರಿ, ಮನಸುಖ್‌ ಮಾಂಡವೀಯಾ, ಭೂಪೇಂದ್ರ ಯಾದವ್‌, ಪರ್ಷೋತ್ತಮ್ ರೂಪಾಲಾ, ಜಿ.ಕಿಶನ್‌ ರೆಡ್ಡಿ, ಅನುರಾಗ್ ಸಿಂಗ್ ಠಾಕೂರ್‌ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಕರ್ನಾಟಕದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್​ಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಲಭ್ಯವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಸಂಪೂರ್ಣ ಅಪ್ಡೇಟ್​ಗಳು ಈ ಕೆಳಗೆ ಲಭ್ಯವಿದೆ. ಓದಿರಿ..

LIVE NEWS & UPDATES

The liveblog has ended.
  • 07 Jul 2021 11:04 PM (IST)

    ಪ್ರಹ್ಲಾದ್ ಜೋಶಿ ಸೇರಿ 8 ಸಚಿವರ ಖಾತೆ ಬದಲಾವಣೆ ಇಲ್ಲ

    ಪ್ರಹ್ಲಾದ್ ಜೋಶಿ ಸೇರಿ 8 ಸಚಿವರ ಖಾತೆ ಬದಲಾವಣೆ ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಪ್ರಹ್ಲಾದ್ ಜೋಶಿ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಮಿತ್ ಶಾ ಗೃಹ ಇಲಾಖೆ ಸಚಿವರಾಗಿ ಇರಲಿದ್ದಾರೆ. ನಿರ್ಮಲಾ ಸೀತಾರಾಮನ್‌ ಹಣಕಾಸು ಇಲಾಖೆ ಸಚಿವರಾಗಿ ಹಾಗೂ ರಾಜನಾಥ್ ಸಿಂಗ್‌ ರಕ್ಷಣಾ ಇಲಾಖೆ ಸಚಿವರಾಗಿ ಮುಂದುವರಿಯಲಿದ್ದಾರೆ.

  • 07 Jul 2021 10:49 PM (IST)

    ಕೇಂದ್ರ ಗೃಹ ಖಾತೆಗೆ ಮೂವರು ರಾಜ್ಯ ಸಚಿವರು

    ಕೇಂದ್ರ ಗೃಹ ಖಾತೆಗೆ ಮೂವರು ರಾಜ್ಯ ಸಚಿವರು ನೇಮಕವಾಗಿದ್ದಾರೆ. ಅಮಿತ್ ಶಾಗೆ ನೆರವಾಗಲು ಮೂವರು ಸಚಿವರಿಗೆ ಸ್ಥಾನ ನೀಡಲಾಗಿದೆ. ನಿತ್ಯಾನಂದ ರಾಯ್, ಅಜಯ್ ಕುಮಾರ್, ನಿಶಿತ್ ಪ್ರಮಾಣಿಕ್ ಗೃಹ ಖಾತೆಯ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಕೇಂದ್ರ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ಟಾಪ್ ಎಂಟು ಮಂತ್ರಿಗಳ ಖಾತೆಯಲ್ಲಿ ಬದಲಾವಣೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

  • 07 Jul 2021 10:40 PM (IST)

    ಕರ್ನಾಟಕದಿಂದ ಸಂಪುಟಕ್ಕೆ ಸೇರ್ಪಡೆಗೊಂಡವರಿಗೆ ಯಾವ ಖಾತೆ?

    ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿಗೆ ಸಾಮಾಜಿಕ ನ್ಯಾಯ, ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿ ಭಗವಂತ್ ಖೂಬಾ ಆಯ್ಕೆಯಾಗಿದ್ದಾರೆ. ಬೀದರ್ ಕ್ಷೇತ್ರದ ಬಿಜೆಪಿ ಸಂಸದ ಭಗವಂತ್ ಖೂಬಾಗೆ ರಸಗೊಬ್ಬರ ಖಾತೆ ರಾಜ್ಯ ಸಚಿವ ಸ್ಥಾನ ಲಭಿಸಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಕೃಷಿ ಇಲಾಖೆಯ ರಾಜ್ಯ ಸಚಿವೆ ಸ್ಥಾನ ಲಭಿಸಿದೆ. ಕೃಷಿ, ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾಗಿ ಶೋಭಾ ನೇಮಕೊಂಡಿದ್ದಾರೆ. ರಾಜೀವ್​ ಚಂದ್ರಶೇಖರ್‌ಗೆ ಕೌಶಲ್ಯಾಭಿವೃದ್ಧಿ ಖಾತೆ ಹಂಚಿಕೆಯಾಗಿದೆ. ಕೌಶಲ್ಯಾಭಿವೃದ್ಧಿ ಎಲೆಕ್ಟ್ರಾನಿಕ್ಸ್‌, ಐಟಿ ಇಲಾಖೆಯ ರಾಜ್ಯ ಸಚಿವರಾಗಿ ರಾಜ್ಯಸಭೆಯ ಬಿಜೆಪಿ ಸದಸ್ಯ ರಾಜೀವ್​ ಚಂದ್ರಶೇಖರ್ ಆಯ್ಕೆ ಆಗಿದ್ದಾರೆ.

  • 07 Jul 2021 10:37 PM (IST)

    ಆಯುಷ್, ಬಂದರು, ಪ್ರವಾಸೋದ್ಯಮ ಖಾತೆ ಇವರಿಗೆ

    ಸರ್ಬಾನಂದ್ ಸೋನಾವಾಲ್ ಅವರಿಗೆ ಆಯುಷ್‌, ಬಂದರು ಖಾತೆ ನೀಡಲಾಗಿದೆ. ಜಿ.ಕಿಶನ್‌ ರೆಡ್ಡಿಗೆ ಪ್ರವಾಸೋದ್ಯಮ ಇಲಾಖೆ ಸಚಿವ ಸ್ಥಾನ ನೀಡಲಾಗಿದೆ.

  • 07 Jul 2021 10:32 PM (IST)

    ಇನ್ನಿತರ ಸಚಿವರ ಖಾತೆಗಳು

    ಡೈರಿ ಮತ್ತು ಮೀನುಗಾರಿಕೆ ಇಲಾಖೆಯು ಪರ್ಷೋತ್ತಮ್ ರೂಪಾಲಾಗೆ ಸಿಕ್ಕಿದೆ. ಪಶುಪತಿ ಕುಮಾರ್ ಪಾರಸ್‌ ಆಹಾರ ಸಂಸ್ಕರಣಾ ಇಲಾಖೆ ಜವಾಬ್ದಾರಿ ವಹಿಸಿದ್ದಾರೆ. ಗಿರಿರಾಜ್ ಸಿಂಗ್‌ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಮಿಕ, ಪರಿಸರ ಇಲಾಖೆ ಭೂಪೇಂದ್ರ ಯಾದವ್‌ಗೆ ಲಭಿಸಿದೆ.

  • 07 Jul 2021 10:30 PM (IST)

    ಜ್ಯೋತಿರಾಧಿತ್ಯ ಸಿಂಧಿಯಾ, ಅನುರಾಗ್ ಠಾಕೂರ್, ಕಿರಣ್ ರಿಜಿಜುಗೆ ಈ ಖಾತೆಗಳು

    ಜ್ಯೋತಿರಾದಿತ್ಯ ಸಿಂಧಿಯಾಗೆ ನಾಗರಿಕ ವಿಮಾನಯಾನ ಖಾತೆ ಲಭ್ಯವಾಗಿದೆ. ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಖಾತೆ ಅನುರಾಗ್ ಠಾಕೂರ್ ಪಾಲಾಗಿದೆ. ಕಿರಣ್ ರಿಜಿಜುಗೆ ಸಂಸ್ಕೃತಿ ಇಲಾಖೆ ದೊರಕಿದೆ.

  • 07 Jul 2021 10:29 PM (IST)

    ವಸತಿ, ಪೆಟ್ರೋಲಿಯಂ, ನಗರಾಭಿವೃದ್ಧಿ ಖಾತೆ ಹರ್ದೀಪ್ ಸಿಂಗ್ ಪುರಿಗೆ

    ಹರ್ದೀಪ್ ಸಿಂಗ್‌ ಪುರಿ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಹರ್ದೀಪ್ ಸಿಂಗ್‌ ಪುರಿಗೆ ವಸತಿ, ಪೆಟ್ರೋಲಿಯಂ ಖಾತೆ ಕೂಡ ಲಭ್ಯವಾಗಿದ.

  • 07 Jul 2021 10:27 PM (IST)

    ರೈಲ್ವೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸಚಿವರು ಇವರು

    ಅಶ್ವಿನಿ ವೈಷ್ಣವ್​ಗೆ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿಕ್ಷಣ ಇಲಾಖೆ ಜೊತೆ ಕೌಶಲ್ಯಾಭಿವೃದ್ಧಿ ಖಾತೆಯ ಹೊಣೆಗಾರಿಕೆಯೂ ಧರ್ಮೇಂದ್ರ ಪ್ರಧಾನ್​ಗೆ ಇರಲಿದೆ.

  • 07 Jul 2021 10:25 PM (IST)

    ಪಿಯೂಷ್ ಗೋಯಲ್‌ ಜವಳಿ, ವಾಣಿಜ್ಯ ಖಾತೆ

    ಪಿಯೂಷ್ ಗೋಯಲ್​ಗೆ ಜವಳಿ ಮತ್ತು ವಾಣಿಜ್ಯ ಖಾತೆ ನೀಡಲಾಗಿದೆ. ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

  • 07 Jul 2021 10:23 PM (IST)

    ಮನಸುಖ್ ಮಾಂಡವೀಯಾ ಹೊಸ ಆರೋಗ್ಯ ಸಚಿವ

    ನೂತನ ಆರೋಗ್ಯ ಸಚಿವರಾಗಿ ಮನಸುಖ್ ಮಾಂಡವೀಯಾ ನೇಮಕಗೊಂಡಿದ್ದಾರೆ. ಮನಸುಖ್‌ಗೆ ರಾಸಾಯನಿಕ, ಫಾರ್ಮಾಸೂಟಿಕಲ್ಸ್ ಖಾತೆಯನ್ನು ಕೂಡ ನೀಡಲಾಗಿದೆ. ಡಿ.ವಿ. ಸದಾನಂದ ಗೌಡ ಬಳಿ ಇದ್ದ ಖಾತೆಯನ್ನೂ ಮನಸುಖ್ ಮಾಂಡವಿಯಾಗೆ ನೀಡಲಾಗಿದೆ.

  • 07 Jul 2021 10:17 PM (IST)

    ಕೇಂದ್ರ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ

    ಅಮಿತ್ ಶಾ, ನರೇಂದ್ರ ಮೋದಿ ಖಾತೆ ವಿವರ

    ಅಮಿತ್ ಶಾ ಸಹಕಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಮಿತ್ ಶಾಗೆ ಗೃಹ ಖಾತೆ ಜೊತೆ ಸಹಕಾರ ಇಲಾಖೆಯ ಜವಾಬ್ದಾರಿಯನ್ನೂ ನೀಡಲಾಗಿದೆ. ಹೊಸದಾಗಿ ಸಹಕಾರ ಇಲಾಖೆ ಸೃಷ್ಟಿಸಿದ್ದ ಕೇಂದ್ರ ಸರ್ಕಾರ, ಆ ಹೊಣೆಗಾರಿಕೆಯನ್ನು ಅಮಿತ್ ಶಾಗೆ ನೀಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ವಹಿಸಲಿದ್ದಾರೆ.

  • 07 Jul 2021 10:08 PM (IST)

    ನೂತನ ಸಚಿವರಿಗೆ ನರೇಂದ್ರ ಮೋದಿ ಅಭಿನಂದನೆ

    ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಧನ್ಯವಾದ ತಿಳಿಸಿದ್ದಾರೆ. ತಮಗೆ ಸಿಕ್ಕಿರುವ ಜವಾಬ್ದಾರಿಯ ಬಗ್ಗೆ ಎ. ನಾರಾಯಣಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಿಂದ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರ ಮನೆ, ಹುಟ್ಟೂರು, ಅಭಿಮಾನಿ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

  • 07 Jul 2021 07:43 PM (IST)

    ಕೆಲ ಹೊತ್ತಿನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ?

    ಕೆಲ ಹೊತ್ತಿನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೂತನ ಸಚಿವರಿಗೆ ಖಾತೆ ಪ್ರಧಾನಿ ನರೇಂದ್ರ ಮೋದಿ ಹಂಚಲಿದ್ದಾರೆ. ಆಗಸ್ಟ್‌ 15 ರವರೆಗೆ ದೆಹಲಿಯಲ್ಲೇ ಇರುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

  • 07 Jul 2021 07:10 PM (IST)

    ಭಗವಂತ್ ಖೂಬಾ ಪ್ರಮಾಣ ವಚನ ಸ್ವೀಕಾರ

    ಕರ್ನಾಟಕದ ಭಗವಂತ್ ಖೂಬಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಜತೆಗೆ ಕಪಿಲ್ ಮೊರೇಶ್ವರ್ ಪಾಟೀಲ್ ಮತ್ತು ಪ್ರತಿಮಾ ಭೌಮಿಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

  • 07 Jul 2021 07:01 PM (IST)

    ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

    ಉತ್ತರಾಖಂಡ್​ನ ಅಜಯ್ ಭಟ್ ಪ್ರಮಾಣ ವಚನ ಸ್ವೀಕಾರ. ನೈನಿತಾಲ್ ಕ್ಷೇತ್ರದ ಸಂಸದ. 2017ರಲ್ಲಿ ಉತ್ತರಾಖಂಡ್​ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಉತ್ತರ ಪ್ರದೇಶದ ಬಿ.ಎಲ್.ವರ್ಮಾ ಪ್ರಮಾಣ ವಚನ ಸ್ವೀಕಾರ. ಉತ್ತರ ಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷರು, ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಉತ್ತರ ಪ್ರದೇಶದ ಅಜಯ್​ ಮಿಶ್ರಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ರಾಜೀವ್ ಚಂದ್ರಶೇಖರ್: ಕೇರಳ ಮೂಲ, ಬೆಂಗಳೂರು ವಾಸ್ತವ್ಯ

  • 07 Jul 2021 06:58 PM (IST)

    ಎ. ನಾರಾಯಣಸ್ವಾಮಿ ಪ್ರಮಾಣ ವಚನ ಸ್ವೀಕಾರ

    ಚಿತ್ರದುರ್ಗ ಕ್ಷೇತ್ರದ ಸಂಸದ. ಮಾದಿಗ ಸಮುದಾಯಕ್ಕೆ ಸೇರಿದ ನಾರಾಯಣಮೂರ್ತಿ ಹಲವು ವರ್ಷಗಳಿಂದ ದಲಿತ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಎಸ್​ಸಿ ಮೋರ್ಚಾದಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

  • 07 Jul 2021 06:58 PM (IST)

    ಜಾರ್ಖಾಂಡ್​ನ ಅನ್ನಪೂರ್ಣ ದೇವಿ ಪ್ರಮಾಣ ವಚನ ಸ್ವೀಕಾರ

    ಛೋಟಾ ನಾಗ್​ಪುರ್​ ಮೂಲದ ಅನ್ನಪೂರ್ಣ ದೇವಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಾರ್ಖಂಡ್ ಸರ್ಕಾರದಲ್ಲಿ ಗಣಿ, ಮಹಿಳಾ ಮತ್ತು ಮಕ್ಕಳ ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ.

  • 07 Jul 2021 06:51 PM (IST)

    ದೆಹಲಿಯ ಮೀನಾಕ್ಷಿ ಲೇಖಿ ಪ್ರಮಾಣ ವಚನ ಸ್ವೀಕಾರ

    ದೆಹಲಿಯ ಮೀನಾಕ್ಷಿ ಲೇಖಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆ ಆಗಿರುವ ಇವರು ಸುಪ್ರೀಂಕೋರ್ಟ್​ ವಕೀಲೆ. ಟಿವಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಪರವಾಗಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯಿಂದ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಕಾನೂನು ಇಲಾಖೆ ಸಿಗಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿದೆ.

  • 07 Jul 2021 06:49 PM (IST)

    ಭಾನು ಪ್ರತಾಪ್ ವರ್ಮಾ, ಜರ್ದೋಷ್, ಎಸ್​.ಪಿ.ಬಾಘೇಲ್ ಪ್ರಮಾಣ ವಚನ ಸ್ವೀಕಾರ

    ಉತ್ತರ ಪ್ರದೇಶದ ಭಾನು ಪ್ರತಾಪ್ ವರ್ಮಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ದಲಿತ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಸಂಸತ್ತಿನ ರಕ್ಷಣಾ ಸಮಿತಿ ಸದಸ್ಯರಾಗಿದ್ದವರು. ಗುಜರಾತ್​ನ ಜರ್ದೋಷ್ ಪ್ರಮಾಣ ವಚನ ಸ್ವೀಕಾರ. ಇವರು ಸೂರತ್​ ಲೋಕಸಭಾ ಕ್ಷೇತ್ರದ ಸಂಸದೆ, 3 ಬಾರಿ ಆಯ್ಕೆಯಾಗಿದ್ದಾರೆ. ಎಸ್​.ಪಿ.ಬಾಘೇಲ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

  • 07 Jul 2021 06:45 PM (IST)

    ಶೋಭಾ ಕರಂದ್ಲಾಜೆ ಪ್ರಮಾಣ ವಚನ ಸ್ವೀಕಾರ

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ. ಯಡಿಯೂರಪ್ಪ ಅವರ ಆಪ್ತೆ. ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷೆ. ಈ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದಾಗ ಬಿಗಿ ಆಡಳಿತದಿಂದ ಹೆಸರುವಾಸಿಯಾಗಿದ್ದರು. ಹಲವು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದರು. ಹಿಂದುತ್ವ ಪರ ಚಿಂತನೆ, ಆರ್​ಎಸ್​ಎಸ್​ಗೆ ಅಚಲ ನಿಷ್ಠೆಯಿಂದಲೂ ಶೋಭಾ ಕರಂದ್ಲಾಜೆ ಅವರನ್ನು ಗುರುತಿಸಲಾಗುತ್ತದೆ.

  • 07 Jul 2021 06:44 PM (IST)

    ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕಾರ

    ಬಿಎ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್​ ಸ್ನಾತಕೋತ್ತರ ಪದವೀಧರ. ಕೇರಳ ಮೂಲದ ಬೆಂಗಳೂರು ನಿವಾಸಿ ಆಗಿರುವ ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರು ಹಾರ್ವಾರ್ಡ್​ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸುಲಲಿತ ಸಂಭಾಷಣೆ, ಸೈನಿಕರ ಯೋಗಕ್ಷೇಮದ ಚಿಂತನೆ, ಯುದ್ಧ ಸ್ಮಾರಕಗಳ ವಿಚಾರದಲ್ಲಿ ದೇಶದ ಗಮನ ಸೆಳೆದಿದ್ದಾರೆ. ಕರ್ನಾಟಕ ಸರ್ಕಾರದ ಮೂಲ ಸೌಕರ್ಯ ಕಾರ್ಯಪಡೆ ಅಧ್ಯಕ್ಷರು, ಮೋದಿ ಅವರಿಗೆ ಹಲವು ಸಮಿತಿಗಳಲ್ಲಿ ಸಲಹೆಗಾರರಾಗಿದ್ದರು.

  • 07 Jul 2021 06:38 PM (IST)

    ಸಂಪುಟದ ಅತಿಕಿರಿಯ ಸಚಿವರಾಗಲಿರುವ ಅನುಪ್ರಿಯಾ ಪಟೇಲ್ ಪ್ರಮಾಣ ವಚನ ಸ್ವೀಕಾರ

    ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್. 40 ವರ್ಷದ ಕುರ್ಮಿ ಸಮುದಾಯದ ಅನುಪ್ರಿಯಾ ಸಚಿವ ಸಂಪುಟದ ಅತಿಕಿರಿಯ ಸಚಿವರಾಗಲಿದ್ದಾರೆ. ಉತ್ತರ ಪ್ರದೇಶದ ಮಿರ್ಝಾಪುರ್ ಲೋಕಸಭಾ ಕ್ಷೇತ್ರದ ಸಂಸದೆ ಆಗಿರುವ ಇವರು ಈ ಹಿಂದೆ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆಯಾಗಿದ್ದರು. ಇದು ಸಂಸದರಾಗಿ ಅವರ 2ನೇ ಅವಧಿ. ಇದೇ ಮೊದಲ ಬಾರಿಗೆ ಸಚಿವೆಯಾಗುತ್ತಿದ್ದಾರೆ.

  • 07 Jul 2021 06:36 PM (IST)

    ಉತ್ತರ ಪ್ರದೇಶದ ಪಂಕಜ್ ಚೌಧರಿ ಪದಗ್ರಹಣ

    ಉತ್ತರ ಪ್ರದೇಶದ ಪಂಕಜ್ ಚೌಧರಿ ಪ್ರಮಾಣ ವಚನ ಸ್ವೀಕಾರ. ಮಹಾರಾಜಗಂಜ್ ಕ್ಷೇತ್ರದ ಸಂಸದ. ಗೋರಖ್​ಪುರ ವಿಶ್ವವಿದ್ಯಾಲಯದ ಪದವೀಧರ. ಹಲವು ಸಂಸದೀಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉತ್ತರ ಪ್ರದೇಶದ ಪಂಕಜ್ ಚೌಧರಿ 1991ರಿಂದಲೂ ಸಂಸದರಾಗಿದ್ದರು.

  • 07 Jul 2021 06:35 PM (IST)

    ಹಿಮಾಚಲ ಪ್ರದೇಶದ ಅನುರಾಗ್ ಠಾಕೂರ್ ಪ್ರಮಾಣ ವಚನ

    ಹಿಮಾಚಲ ಪ್ರದೇಶದ ಅನುರಾಗ್ ಠಾಕೂರ್ ಪ್ರಮಾಣ ವಚನ ಸ್ವೀಕಾರ. ಈ ಹಿಂದೆ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೊವಿಡ್ ನಿರ್ವಹಣೆ ಪ್ಯಾಕೇಜ್ ರೂಪಿಸಲು ನೆರವು ನೀಡಿ ಗಮನ ಸೆಳೆದಿದ್ದರು. ದೆಹಲಿ ಗಲಭೆ ವೇಳೆ ನೀಡಿದ್ದ ಗೋಲಿ ಮಾರೋ ಹೇಳಿಕೆ ವ್ಯಾಪಕವಾಗಿ ಚರ್ಚೆಗೀಡಾಗಿತ್ತು. ಕ್ರಿಕೆಟ್​ ಆಟಗಾರರಾಗಿಯೂ ಹಲವು ಸಾಧನೆಗಳನ್ನು ಮಾಡಿದ್ದಾರೆ. ಭೂಸೇನೆಯ 124 ಸಿಖ್ ರೆಜಿಮೆಂಟ್​ನ ಲೆಫ್ಟಿನೆಂಟ್ ಆಗಿದ್ದಾರೆ.

  • 07 Jul 2021 06:32 PM (IST)

    ತೆಲಂಗಾಣದ ಗಂಗಾಪುರಂ ಕಿಶನ್ ರೆಡ್ಡಿ ಪದಗ್ರಹಣ

    ತೆಲಂಗಾಣದ ಗಂಗಾಪುರಂ ಕಿಶನ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ. 2002ರಿಂದ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ. ಪ್ರಸ್ತುತ ಸಿಕಂದರಾಬಾದ್​ ಲೋಕಸಭಾ ಕ್ಷೇತ್ರದ ಸಂಸದ. ಅಮಿತ್​ ಶಾ ಅವರ ನೀಲಿಕಣ್ಣಿನ ಹುಡುಗ ಎಂದೇ ಹೆಸರುವಾಸಿ. ವಹಿಸಿದ ಕಾರ್ಯವನ್ನು ಹಟ ಹಿಡಿದು ಮಾಡುತ್ತಾರೆ ಎಂದು ಬಿಜೆಪಿ ವಲಯದಲ್ಲಿ ಹೆಸರು ಪಡೆದಿದ್ದಾರೆ.

  • 07 Jul 2021 06:31 PM (IST)

    ಗುಜರಾತ್​ನ ಪುರುಷೋತ್ತಮ ರೂಪಾಲಿ ಪ್ರಮಾಣ ವಚನ ಸ್ವೀಕಾರ

    ಗುಜರಾತ್​ನ ಪುರುಷೋತ್ತಮ ರೂಪಾಲಿ ಪ್ರಮಾಣ ವಚನ ಸ್ವೀಕಾರ. ಈ ಹಿಂದೆ ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಚಿವರಾಗಿದ್ದರು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅಲ್ಲಿನ ಕೃಷಿ ಕ್ಷೇತ್ರದ ಸುಧಾರಣೆಗೆ ಹಲವು ಮೌಲಿಕ ಕೊಡುಗೆ ನೀಡಿದ್ದರು.

  • 07 Jul 2021 06:30 PM (IST)

    ಅಮಿತ್​ ಶಾ ನೆಚ್ಚಿನ ವ್ಯಕ್ತಿ ಭೂಪೆಂದರ್ ಯಾದವ್ ಪ್ರಮಾಣ ವಚನ

    ರಾಜಸ್ಥಾನದ ಭೂಪೆಂದರ್ ಯಾದವ್ ಪ್ರಮಾಣ ವಚನ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್​ ಶಾ ಅವರ ನೆಚ್ಚಿನ ವ್ಯಕ್ತಿ. ಮೋದಿ ಮತ್ತು ಶಾ ಅವರಿಬ್ಬರ ನಂಬಿಕೆಯನ್ನು ಗಳಿಸಿ, ಉಳಿಸಿಕೊಂಡಿರುವ ನಾಯಕ. ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಸುವ ಹೊಣೆಗಾರಿಕೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಇದು ಮಹತ್ವದ ಬೆಳವಣಿಗೆ ಎನಿಸಿದೆ.

  • 07 Jul 2021 06:30 PM (IST)

    ಎಬಿವಿಪಿ ನಾಯಕರಾಗಿದ್ದ ಮನಸುಖ್ ಮಾಂಡವಿಯಾ ಪದಗ್ರಹಣ

    ಗುಜರಾತ್​ನ ಮನಸುಖ್ ಮಾಂಡವಿಯಾ ಪ್ರಮಾಣ ವಚನ ಸ್ವೀಕಾರ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಾಯಕರಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ಬಂದರು ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

  • 07 Jul 2021 06:29 PM (IST)

    ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಹರ್ದೀಪ್ ಸಿಂಗ್ ಪುರಿ ಪ್ರಮಾಣ ವಚನ ಸ್ವೀಕಾರ

    ಉತ್ತರ ಪ್ರದೇಶದ ಹರ್ದೀಪ್ ಸಿಂಗ್ ಪುರಿ ಪ್ರಮಾಣ ವಚನ ಸ್ವೀಕಾರ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದರು. ನಾಗರಿಕ ವಿಮಾನಯಾನ ಸಚಿವರಾಗಿದ್ದರು. ನಗರಾಭಿವೃದ್ಧಿ ಸಚಿವರಾಗಿ ಹಲವು ವಸತಿ ಯೋಜನೆಗಳನ್ನು ರೂಪಿಸಿದ್ದರು. ಇವರು ರಾಜಕಾರಣಕ್ಕೆ ಬರುವ ಮೊದಲು ಐಎಫ್​ಎಸ್​ ಅಧಿಕಾರಿಯಾಗಿದ್ದರು. ಪಂಜಾಬ್​ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಸಚಿವರಾಗಿ ಈಗಾಗಲೇ ಹರ್ದೀಪ್ ತಮ್ಮ ಸಾಮರ್ಥ್ಯ ನಿರೂಪಿಸಿದವರು. ಮುಂದಿನ ದಿನಗಳಲ್ಲಿ ವಸತಿ ಯೋಜನೆಗಳಿಗೆ ಹೊಸ ವೇಗ ನೀಡುವ ಉದ್ದೇಶಕ್ಕೆ ಹರ್ದೀಪ್ ಚಿಂತನೆಗಳು ನೆರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  • 07 Jul 2021 06:23 PM (IST)

    ಬಿಹಾರದಿಂದ ಆಯ್ಕೆಯಾದ ಸಂಸದ ರಾಜ್​ಕುಮಾರ್​ ಸಿಂಗ್ ಪದಗ್ರಹಣ

    ರಾಜ್​ಕುಮಾರ್​ ಸಿಂಗ್ (ಆರ್​.ಕೆ.ಸಿಂಗ್) ಪ್ರಮಾಣ ವಚನ ಸ್ವೀಕಾರ. ಪ್ರಸ್ತುತ ಇಂಧನ ಸಚಿವರಾಗಿರುವ ಆರ್​.ಕೆ.ಸಿಂಗ್ ಬಿಹಾರದಿಂದ ಆಯ್ಕೆಯಾದ ಸಂಸದ. ಇವರೂ ಟೆಕ್ನೊಕ್ರಾಟ್​ ಎಂದೇ ಹೆಸರುವಾಸಿ.

  • 07 Jul 2021 06:21 PM (IST)

    ಕಿರಣ್​ ರಿಜಿಜು ಪ್ರಮಾಣ ವಚನ ಸ್ವೀಕಾರ

    ಕಿರಣ್​ ರಿಜಿಜು ಪ್ರಮಾಣ ವಚನ ಸ್ವೀಕಾರ. ಬಿಎ, ಎಲ್​ಎಲ್​ಬಿ ಪದವೀಧರ. ಫಿಟ್​ನೆಸ್​ ಫ್ರೀಕ್ ಎಂದೇ ಹೆಸರುವಾಸಿ. ಈ ಹಿಂದೆ ಕ್ರೀಡಾ ಮತ್ತು ಯುವಜನ ಖಾತೆಯ ರಾಜ್ಯ ಸಚಿವರಾಗಿದ್ದರು. ಫಿಟ್​ನೆಸ್​ ವಿಡಿಯೊಗಳನ್ನು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದರು.

  • 07 Jul 2021 06:21 PM (IST)

    ಚಿರಾಗ್​ ಪಾಸ್ವಾನ್​ ವಿರೋಧದ ನಡುವೆಯೂ ಪಶುಪತಿ ಪಾರಸ್ ಪ್ರಮಾಣ ವಚನ ಸ್ವೀಕಾರ

    ಬಿಹಾರದ ನಾಯಕ ಪಶುಪತಿ ಪಾರಸ್ ಪ್ರಮಾಣ ವಚನ ಸ್ವೀಕಾರ. ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದ ಸದಸ್ಯ. ಚಿರಾಗ್​ ಪಾಸ್ವಾನ್​ ವಿರೋಧದ ನಡುವೆಯೂ ಇವರನ್ನು ಸಚಿವರನ್ನಾಗಿ ಮಾಡಲು ಮೋದಿ ನಿರ್ಧರಿಸಿದ್ದು ಅಚ್ಚರಿಯ ಬೆಳವಣಿಗೆ ಎನಿಸಿದೆ.

  • 07 Jul 2021 06:19 PM (IST)

    ಅಶ್ವಿನಿ ಕುಮಾರ್​ರಿಂದ ಡಿಜಿಟಲ್ ಇಂಡಿಯಾ ಪ್ರಯತ್ನಕ್ಕೆ ಹೊಸ ವೇಗ?

    ಒಡಿಶಾದ ಅಶ್ವಿನಿ ಕುಮಾರ್ ಪ್ರಮಾಣ ವಚನ ಸ್ವೀಕಾರ. ಇವರು ಎಂಟೆಕ್, ಎಂಬಿಎ ಮತ್ತು ಐಐಟಿ ಪದವೀಧರ. ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಹಲವು ಮಹತ್ವದ ತೀರ್ಮಾನಗಳು ಜಾರಿಯಾಗಲು ನೆರವಾಗಿದ್ದರು. ಮಾಜಿ ಐಎಎಸ್ ಅಧಿಕಾರಿ. ಐಎಎಸ್ ಅಧಿಕಾರಿಗಳ ವಲಯದಲ್ಲಿ ಟೆಕ್ನೊಕ್ರಾಟ್ ಎಂದೇ ಹೆಸರು ಪಡೆದವರು. ಇವರ ಸೇರ್ಪಡೆಯು ಡಿಜಿಟಲ್ ಇಂಡಿಯಾ ಪ್ರಯತ್ನಗಳಿಗೆ ಹೊಸ ವೇಗ ನೀಡಲಿದೆ ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

  • 07 Jul 2021 06:17 PM (IST)

    ಬಿಹಾರದ ನಾಯಕ ರಾಮಚಂದ್ರ ಸಿಂಗ್​ರಿಂದ ಆಡಳಿತ ಸುಧಾರಣೆ ನಿರ್ಧಾರ ನಿರೀಕ್ಷೆ

    ಬಿಹಾರದ ನಾಯಕ ರಾಮಚಂದ್ರ ಸಿಂಗ್ ಪ್ರಮಾಣ ವಚನ ಸ್ವೀಕಾರ. 1984ರ ಬ್ಯಾಚ್​ನ ನಿವೃತ್ತ ಐಎಎಸ್​ ಅಧಿಕಾರಿ. 25 ವರ್ಷ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತಾತ್ಮಕ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಈ ಹಿಂದೆಯೂ ಹಲವು ಮೌಲಿಕ ಸಲಹೆಗಳನ್ನು ನೀಡಿದ್ದರು. ಇವರ ಸೇರ್ಪಡೆಯಿಂದ ಸರ್ಕಾರಕ್ಕೆ ಆಡಳಿತ ಸುಧಾರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

  • 07 Jul 2021 06:14 PM (IST)

    ಮಧ್ಯಪ್ರದೇಶದ ಡಾ. ವೀರೇಂದ್ರ ಕುಮಾರ್, ಜ್ಯೋತಿರಾದಿತ್ಯ ಸಿಂಧ್ಯಾ ಪ್ರಮಾಣ ವಚನ ಸ್ವೀಕಾರ

    ಮಧ್ಯಪ್ರದೇಶ ಬಿಜೆಪಿ ನಾಯಕ ಡಾ.ವಿರೇಂದ್ರ ಕುಮಾರ್ ಪ್ರಮಾಣ ವಚನ ಸ್ವೀಕಾರ. ಬಾಲಕಾರ್ಮಿಕ ಪದ್ಧತಿ ಬಗ್ಗೆ ಪಿಎಚ್​ಡಿ ಮಾಡಿದ್ದಾರೆ. ಮಧ್ಯಪ್ರದೇಶ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಪ್ರಮಾಣ ವಚನ ಸ್ವೀಕಾರ. ಬಹುಕಾಲ ಕಾಂಗ್ರೆಸ್​ನಲ್ಲಿದ್ದ ಇವರು ರಾಹುಲ್​ಗಾಂಧಿಯ ಆಪ್ತರು ಎನಿಸಿಕೊಂಡಿದ್ದರು. ಮಧ್ಯಪ್ರದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹಾರ್ವಾರ್ಡ್​ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದಿದ್ದಾರೆ. ಬುದ್ಧಿವಂತಿಕೆ ಮತ್ತು ದೇಶದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಹಲವು ಮೌಲಿಕ ಸಲಹೆಗಳನ್ನು ಯುಪಿಎ ಅವಧಿಯಲ್ಲಿ ನೀಡಿದ್ದ ಬಗ್ಗೆ ದಾಖಲೆಗಳಿವೆ.

  • 07 Jul 2021 06:13 PM (IST)

    ಅಸ್ಸಾಂ ಬಿಜೆಪಿ ನಾಯಕ ಸರ್ಬಾನಂದ ಸೋನೋವಾಲ್​ ಪ್ರಮಾಣ ವಚನ ಸ್ವೀಕಾರ

    ಅಸ್ಸಾಂ ಬಿಜೆಪಿ ನಾಯಕ ಸರ್ಬಾನಂದ ಸೋನಾವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಇವರಿಗೆ ಮಹತ್ವದ ಖಾತೆಯೇ ಸಿಗುವ ನಿರೀಕ್ಷೆಯಿದೆ.

  • 07 Jul 2021 06:11 PM (IST)

    ನಾರಾಯಣ ರಾಣೆ ಮೊದಲ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಮೊದಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸಚಿವರಾಗಿ ಸರ್ಬಾನಂದ್ ಸೋನಾವಾಲ್ ಪದಗ್ರಹಣ, ಡಾ.ವೀರೇಂದ್ರ ಕುಮಾರ್‌ ಪದಗ್ರಹಣ, ಕೇಂದ್ರಸಚಿವರಾಗಿ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವರಾಗಿ ಆರ್‌.ಪಿ.ಸಿಂಗ್‌, ಕೇಂದ್ರ ಸಚಿವರಾಗಿ ಅಶ್ವಿನಿ ವೈಷ್ಣವ್‌ ಪ್ರಮಾಣವಚನ ಸ್ವೀಕರಿಸಿದರು.

  • 07 Jul 2021 06:07 PM (IST)

    ರಾಷ್ಟ್ರಪತಿ ಬಂದರು

    ದರ್ಬಾರ್​ ಹಾಲ್​ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಚಿವರು ಒಬ್ಬೊಬ್ಬರಾಗಿ ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.

  • 07 Jul 2021 06:07 PM (IST)

    ಸಂಪುಟ ವಿಸ್ತರಣೆ ಪ್ರಯತ್ನಕ್ಕೆ ಕಾಂಗ್ರೆಸ್​ ಟೀಕೆ

    ಕೇಂದ್ರ ಸರ್ಕಾರದ ಪ್ರಸ್ತುತ ಸಂಪುಟ ವಿಸ್ತರಣೆ ಕಾರ್ಯವು ಸಚಿವರ ಕಾರ್ಯಕ್ಷಮತೆ ಅಥವಾ ಆಡಳಿತ ಸುಧಾರಣೆಯ ಉದ್ದೇಶ ಹೊಂದಿಲ್ಲ. ಅಧಿಕಾರ ಹಂಚಿಕೆ ಮತ್ತು ಪಕ್ಷಾಂತರಿಗಳಿಗೆ ಮಣೆ ಹಾಕುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್ ಸುರ್ಜೆವಾಲಾ ಟೀಕಿಸಿದ್ದಾರೆ.

  • 07 Jul 2021 06:05 PM (IST)

    ರಾಜ್ಯದಿಂದ ನಾಲ್ವರಿಗೆ ಕೇಂದ್ರದಲ್ಲಿ ಅವಕಾಶ; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ

    ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸ್ಥಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ. ರಾಜ್ಯದಿಂದ ನಾಲ್ವರಿಗೆ ಕೇಂದ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದ ನಾಲ್ವರು ಸಂಸದರು ಪ್ರಭಾವಿಗಳಾಗಿ ಕೆಲಸ ಮಾಡಲಿ. ಮತ್ತೊಮ್ಮೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

  • 07 Jul 2021 06:01 PM (IST)

    ರಾಷ್ಟ್ರಪತಿ ಭವನಕ್ಕೆ ಬಂದ ನರೇಂದ್ರ ಮೋದಿ

    ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿರುವ ರಾಷ್ಟ್ರಪತಿ ಭವನದ ದರ್ಬಾರ್​ ಹಾಲ್​ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು.

  • 07 Jul 2021 05:59 PM (IST)

    ನೂತನ ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ 43 ಮಂದಿಯ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಲಿದೆ. 15 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಳಿದವರು ರಾಜ್ಯ ಖಾತೆ ಮತ್ತು ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣ ವಚನ ಬೋಧಿಸಲಿದ್ದಾರೆ.

  • 07 Jul 2021 05:58 PM (IST)

    ಸಚಿವ ಸಂಪುಟದಲ್ಲಿ 11 ಮಹಿಳೆಯರು

    ಈ ಬಾರಿಯ ಸಂಪುಟ ಪುನಾರಚನೆಯ ನಂತರ ಕೇಂದ್ರ ಸಚಿವ ಸಂಪುಟಕ್ಕೆ ಹೊಸದಾಗಿ 7 ಮಂದಿ ಮಹಿಳೆಯರು ಸೇರ್ಪಡೆಯಾಗಲಿದ್ದಾರೆ. ಸಂಪುಟದಲ್ಲಿ ಮಹಿಳೆಯರ ಸಂಖ್ಯೆ 11 ಮುಟ್ಟಲಿದೆ.

  • 07 Jul 2021 05:57 PM (IST)

    12 ಸಚಿವರ ರಾಜೀನಾಮೆ ಅಂಗೀಕಾರ

    ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 12 ಸಚಿವರ ರಾಜೀನಾಮೆಯನ್ನು ಅಂಗೀಕರಿಸಿದರು. ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ರಾಜೀನಾಮೆ ನೀಡಿದ್ದರು. ಈವರೆಗೆ ಒಟ್ಟು 12 ಕೇಂದ್ರ ಸಚಿವರಿಂದ ರಾಜೀನಾಮೆ ಸಲ್ಲಿಕೆ ಮಾಡಲಾಗಿತ್ತು. 12 ಕೇಂದ್ರ ಸಚಿವರು ರಾಷ್ಟ್ರಪತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

  • 07 Jul 2021 05:34 PM (IST)

    ಸಚಿವ ಸ್ಥಾನಕ್ಕೆ ರವಿಶಂಕರ್​ ಪ್ರಸಾದ್​​, ಜಾವಡೇಕರ್ ರಾಜೀನಾಮೆ

    ಸಚಿವ ಸ್ಥಾನಕ್ಕೆ ರವಿಶಂಕರ್​ ಪ್ರಸಾದ್​​, ಪ್ರಕಾಶ್ ಜಾವಡೇಕರ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವರು, ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಈವರೆಗೆ ಒಟ್ಟು 12 ಕೇಂದ್ರ ಸಚಿವರಿಂದ ರಾಜೀನಾಮೆ ಸಲ್ಲಿಕೆ ಮಾಡಲಾಗಿದೆ. 12 ಕೇಂದ್ರ ಸಚಿವರು ರಾಷ್ಟ್ರಪತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

  • 07 Jul 2021 05:05 PM (IST)

    ಪ್ರಧಾನಿ ನಿವಾಸಕ್ಕೆ ಆಗಮಿಸುತ್ತಿರುವ ಸಂಭಾವ್ಯ ಸಚಿವರು

    ಇಂದು ಸಂಜೆ 6ಕ್ಕೆ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನಿವಾಸಕ್ಕೆ ಸಂಭಾವ್ಯ ಸಚಿವರು ಆಗಮಿಸುತ್ತಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗ್‌ನಲ್ಲಿರುವ ನಿವಾಸಕ್ಕೆ ಸಂಭಾವ್ಯ ಸಚಿವರು ಬರುತ್ತಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ, ನಾರಾಯಣ್ ರಾಣೆ, ಮೀನಾಕ್ಷಿ ಲೇಖಿ, ಅನುಪ್ರಿಯಾ ಪಟೇಲ್, ಪಶುಪತಿ ಪಾರಸ್, ಅನುರಾಗ್ ಠಾಕೂರ್, ಸುನಿತಾ ದುಗ್ಗಲ್, ಅಜಯ್ ಭಟ್ಟ, ಶೋಭಾ ಕರಂದ್ಲಾಜೆ, ಭೂಪೇಂದ್ರ ಯಾದವ್, ಹೀನಾ ಗವಾನಿ, ಪುರುಷೋತ್ತಮ್ ರೂಪಾಲಿ, ಸರ್ಬಾನಂದ್ ಸೋನಾವಾಲ್ ಭೇಟಿ ನೀಡಿದ್ದಾರೆ. ಈ ಬಾರಿ 36 ಹೊಸಬರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಲಭ್ಯವಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕರ್ನಾಟಕದ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಕೂಡ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

  • 07 Jul 2021 04:37 PM (IST)

    ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ

    ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 15 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದವರು ಸ್ವತಂತ್ರ, ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 8 ಸಚಿವರಿಗೆ ರಾಜ್ಯ ಖಾತೆಯಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

    ಕೇಂದ್ರದ ನೂತನ ಸಚಿವರ ಪಟ್ಟಿ ಇಲ್ಲಿದೆ:

  • 07 Jul 2021 04:32 PM (IST)

    ಕೇಂದ್ರ ಸಚಿವರಾಗುವ 43 ಸಂಸದರ ಹೆಸರು ಲಭ್ಯ

    ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕ್ಷಣಗಣನೆ ಆರಂಭವಾಗಿದೆ. ಟಿವಿ9ಗೆ ಕೇಂದ್ರ ಸಚಿವರಾಗುವ 43 ಸಂಸದರ ಹೆಸರು ಲಭ್ಯವಾಗಿದೆ. ನಾರಾಯಣ ರಾಣೆ, ಸರ್ಬಾನಂದ ಸೋನೋವಾಲಾ ಡಾ.ವೀರೇಂದ್ರ ಕುಮಾರ್‌, ಜ್ಯೋತಿರಾದಿತ್ಯ ಸಿಂಧಿಯಾ, R.P.ಸಿಂಗ್‌, ಅಶ್ವಿನಿ ವೈಷ್ಣವ್‌, ಪಶುಪತಿಕುಮಾರ್ ಪಾರಸ್‌, ಕಿರಣ್ ರಿಜಿಜು, ಆರ್‌.ಕೆ.ಸಿಂಗ್‌, ಹರ್ದೀಪ್ ಸಿಂಗ್‌ ಪುರಿ, ಮನಸುಖ್‌ ಮಾಂಡವೀಯಾ, ಭೂಪೇಂದ್ರ ಯಾದವ್‌, ಪುರುಷೋತ್ತಮ್ ರೂಪಾಲಾ, ಜಿ.ಕಿಶನ್‌ ರೆಡ್ಡಿ, ಅನುರಾಗ್ ಸಿಂಗ್ ಠಾಕೂರ್‌, ಪಂಕಜ್ ಚೌಧರಿ, ಅನುಪ್ರಿಯಾ ಸಿಂಗ್‌ ಪಟೇಲ್‌, ಸತ್ಯಪಾಲ್‌ಸಿಂಗ್ ಬಘೇಲ್‌, ರಾಜೀವ್ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಭಾನುಪ್ರತಾಪ್ ವರ್ಮಾ, ದರ್ಶನ ವಿಕ್ರಮ್ ಜಾರ್ದೋಶ್‌, ಮೀನಾಕ್ಷಿ ಲೇಖಿ, ಅನ್ನಪೂರ್ಣಾದೇವಿ, ನಾರಾಯಣಸ್ವಾಮಿ, ಕೌಶಲ್ ಕಿಶೋರ್, ಅಜಯ್ ಭಟ್‌, ಬಿ.ಎಲ್.ವರ್ಮಾ, ಅಜಯ್ ಕುಮಾರ್‌, ಚೌಹಾಣ್‌ ದೇವುಸಿನ್ಹಾ, ಭಗವಂತ್ ಖೂಬಾ, ಕಪಿಲ್ ಮೋರೇಶ್ವರ್ ಪಟೇಲ್‌, ಪ್ರತಿಮಾ ಭೌಮಿಕ್‌, ಡಾ.ಸುಭಾಷ್ ಸರ್ಕಾರ್‌, ಡಾ.ಭಗವಂತ ಕೃಷ್ಣರಾವ್ ಕಾರಟ್‌, ಡಾ.ರಾಜ್‌ಕುಮಾರ್ ರಂಜನ್ ಸಿಂಗ್‌, ಡಾ.ಭಾರತಿ ಪ್ರವೀಣ್ ಪವಾರ್‌, ಬಿಶ್ವೇಶ್ವರ್ ಟುಡು, ಶಾಂತನು ಠಾಕೂರ್‌, ಡಾ.ಮುಂಜಾಪರ ಮಹೇಂದ್ರ ಭಾಯ್‌, ಜಾನ್ ಬರ್ಲಾ, ಡಾ.ಎಲ್‌.ಮುರುಗನ್‌, ನಿಶಿತ್ ಪ್ರಾಮಾಣಿಕ್‌ಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ.

  • 07 Jul 2021 04:12 PM (IST)

    ಹರ್ಷವರ್ಧನ್ ರಾಜೀನಾಮೆಗೆ ಜೈರಾಮ್ ರಮೇಶ್ ಪ್ರತಿಕ್ರಿಯೆ

    ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರಾಜೀನಾಮೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಉಂಟಾದ ಬಹುದೊಡ್ಡ ವೈಫಲ್ಯಕ್ಕೆ ಪಾಪದ ಹರ್ಷವರ್ಧನ್ ಅವರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ನಿರ್ಣಯವನ್ನು ಟೀಕಿಸಿದ್ದಾರೆ.

  • 07 Jul 2021 04:09 PM (IST)

    ಮೋದಿ ಸಚಿವ ಸಂಪುಟದಲ್ಲಿ ಪಶುಪತಿ ಪರಾಸ್​ಗೆ ಸ್ಥಾನ; ಎಲ್​ಜೆಪಿ ಪಕ್ಷದಿಂದ ಆಕ್ಷೇಪ

    ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ಎಲ್​​ಜೆಪಿ) ಕೇಂದ್ರ ಸಚಿವ ಸಂಪುಟದಲ್ಲಿ ತನ್ನ ಸಂಬಂಧಿ ಪಶುಪತಿ ಪರಾಸ್ ಅವರಿಗೆ ಸ್ಥಾನ ಕೊಟ್ಟಿರುವುದನ್ನು ಆಕ್ಷೇಪಿಸಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

  • 07 Jul 2021 03:42 PM (IST)

    ನೂತನ ಕೇಂದ್ರ ಸಚಿವ ಸಂಪಟದಲ್ಲಿ‌ನ ವಿಶೇಷತೆ

    ನೂತನ‌ ಕೇಂದ್ರ ಸಚಿವ ಸಂಪುಟದಲ್ಲಿ 11 ಮಂದಿ ಮಹಿಳಾ ಸಚಿವರಿಗೆ ಆದ್ಯತೆ ನೀಡಲಾಗಿದೆ. ನೂತನ ಕೇಂದ್ರ ಮಂತ್ರಿ‌ಗಳ ಪಟ್ಟಿಯಲ್ಲಿ 4 ಮಾಜಿ ಮುಖ್ಯಮಂತ್ರಿಗಳು, 3 ಶಾಸಕರು, 29 ಹಿಂದುಳಿದ ವರ್ಗಕ್ಕೆ ಸೇರಿದವರು ಇರಲಿದ್ದಾರೆ. ಇದರಲ್ಲಿ ಐವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 8 ಪರಿಶಿಷ್ಟ ಪಂಗಡದವರು ಇವರಲ್ಲಿ ಮೂವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಇರಲಿದೆ. 12 ಮಂದಿ‌ ಪರಿಶಿಷ್ಟ ಜಾತಿಯವರು ಇರಲಿದ್ದು, ಇದರಲ್ಲಿ ಇಬ್ಬರು ಕ್ಯಾಬಿನೆಟ್ ದರ್ಜೆ, 5 ಅಲ್ಪಸಂಖ್ಯಾತರು, ಇದರಲ್ಲಿ ಮುಸ್ಲಿಮ್, ಸಿಖ್, ಕ್ರಿಶ್ಚಿಯನ್ ಸೇರಿ ಅಲ್ಪಸಂಖ್ಯಾತ ಪಂಗಡವರಿಗೆ ಸಚಿವ ಸ್ಥಾನ ನೀಡಲಾಗುವ ಬಗ್ಗೆ ತಿಳಿದುಬಂದಿದೆ.

  • 07 Jul 2021 03:21 PM (IST)

    ಕೊವಿಡ್ 2ನೇ ಅಲೆ ನಿರ್ವಹಣೆ ಮಾಡುವಲ್ಲಿ ವಿಫಲ; ಕೇಂದ್ರ ಆರೋಗ್ಯ ಖಾತೆಯ ಇಬ್ಬರೂ ಸಚಿವರ ತಲೆದಂಡ

    ಕೊವಿಡ್ 2ನೇ ಅಲೆ ನಿರ್ವಹಣೆ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಖಾತೆಯ ಇಬ್ಬರೂ ಸಚಿವರ ತಲೆದಂಡವಾಗಿದೆ. ಆರೋಗ್ಯ ಖಾತೆ ರಾಜ್ಯ ಸಚಿವ, ಕ್ಯಾಬಿನೆಟ್ ಸಚಿವರಿಗೆ ಕೊಕ್ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್​, ಆರೋಗ್ಯ ಖಾತೆ ರಾಜ್ಯ ಸಚಿವ ಆಶ್ವಿನ್ ಚೌಬೆ ರಾಜೀನಾಮೆ ನೀಡಿದ್ದಾರೆ. ಕೊರೊನಾ 2ನೇ ಅಲೆ ಎದುರಿಸಲು ಪೂರ್ವ ಸಿದ್ಧತೆ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • 07 Jul 2021 03:18 PM (IST)

    ಕೇಂದ್ರ ಸಂಪುಟಕ್ಕೆ ಸಚಿವರಿಂದ ರಾಜೀನಾಮೆ

    ಕೇಂದ್ರ ಸಂಪುಟ ಪುನಾರಚನೆ ಹಿನ್ನೆಲೆ ಸಚಿವರಿಂದ ರಾಜೀನಾಮೆ ಸಲ್ಲಿಕೆ ಕಾರ್ಯ ನಡೆಯುತ್ತಿದೆ. ಸಚಿವರಾದ ಡಿ.ವಿ.ಸದಾನಂದಗೌಡ, ಥಾವರ್ಚಂದ್ ಗೆಹಲೋತ್, ರತನ್‌ಲಾಲ್‌ ಕಟಾರಿಯಾ, ಪ್ರತಾಪ‌ ಸಾರಂಗಿ, ಪೋಖ್ರಿಯಾಲ್, ಬಾಬುಲ್ ಸುಪ್ರಿಯೋ, ಡಾ.ಹರ್ಷವರ್ಧನ್​, ಆಶ್ವಿನ್ ಚೌಬೆ ರಾಜೀನಾಮೆ ಸಲ್ಲಿಸಿದ್ದಾರೆ.

    ರಾಜೀನಾಮೆ ಸಲ್ಲಿಸಿರುವ ಸಚಿವರು: 1)‌ ರಮೇಶ ಪೊಕ್ರಿಯಾಲ್ 2) ಸಂತೋಷ ಗಂಗವರ್ 3) ದೇವೇಂದ್ರ ಚೌಧರಿ 4) ಸಂಜಯ 5) ಬಾಬುಲ್ ಸುಪ್ರಿಯೊ 6) ರಾವ್ ಸಾಹೇಬ್ ದಾನವೆ ಪಾಟೀಲ 7) ಸದಾನಂದಗೌಡ 8) ರತನ್ ಲಾಲ್ ಕಟಾರಿಯಾ 9) ಪ್ರತಾಪ್ ಸಾರಂಗಿ 10) ಡಾ ಹರ್ಷವರ್ಧನ 11) ಅಶ್ವಿನ್ ಚೌಬೆ 12) ತಾವರಚಂದ ಗೆಹಲೋಟ

  • 07 Jul 2021 03:14 PM (IST)

    ಕೇಂದ್ರ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ

    ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್​ಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಲಭ್ಯವಾಗಿದೆ. ಮತ್ತೊಂದೆಡೆ ಕರ್ನಾಟಕದ ಸಂಸದ ಹಾಗೂ ರಸಗೊಬ್ಬರ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡ ರಾಜೀನಾಮೆ ನೀಡಿದ್ದಾರೆ. ಮೋದಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕುತೂಹಲ ಹೆಚ್ಚಿದೆ.

  • 07 Jul 2021 03:11 PM (IST)

    ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಟಿವಿ9ಗೆ ಲಭ್ಯ

    ಇಂದು ಸಂಜೆ 6ಕ್ಕೆ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗಲಿದೆ. ಕರ್ನಾಟಕದಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಾನ ಸಿಕ್ಕಿದೆ. ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಪಶುಪತಿನಾಥ್ ಪಾರಸ್, ನಾರಾಯಣ ರಾಣೆ, ಭೂಪೇಂದ್ರ ಯಾದವ್, ಅನುಪ್ರಿಯಾ ಪಟೇಲ್, ಕಪಿಲ್ ಪಾಟೀಲ್, ಮೀನಾಕ್ಷಿ ಲೇಖಿ, ರಾಹುಲ್ ಕಸಾವಾ, ಅಶ್ವಿನಿ ವೈಷ್ಣವ್, ಶಾಂತನು ಠಾಕೂರ್, ವಿನೋದ್ ಸೋನ್‌ಕರ್, ಪಂಕಜ್ ಚೌಧರಿ, ಆರ್‌ಸಿಪಿ ಸಿಂಗ್, ದಿಲೇಶ್ವರ್ ಕಾಮತ್, ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ, ರಾಮನಾಥ್ ಠಾಕೂರ್, ರಾಜ್‌ಕುಮಾರ್ ರಂಜನ್, ಬಿ.ಎಲ್. ವರ್ಮಾ, ಅಜಯ್ ಮಿಶ್ರಾ, ಹೀನಾ ಗಾವಿತ್, ಅಜಯ್ ಭಟ್ಟ, ಪ್ರೀತಂ ಮುಂಡೆಗೆ ಸ್ಥಾನ ಸಿಗುವ ಬಗ್ಗೆ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.

  • 07 Jul 2021 03:10 PM (IST)

    ಪ್ರಧಾನಿ ಕಚೇರಿಯಿಂದ ಭಗವಂತ್ ಖೂಬಾಗೆ ಕರೆ; ಹೈದರಾಬಾದ್​ನಿಂದ ದೆಹಲಿಗೆ ಹೊರಟ ಖೂಬಾ

    ಪ್ರಧಾನಿ ಕಚೇರಿಯಿಂದ ಭಗವಂತ್ ಖೂಬಾಗೆ ಕರೆ ಹಿನ್ನೆಲೆಯಲ್ಲಿ ಭಗವಂತ್ ಖೂಬಾ ದೆಹಲಿಗೆ ಹೊರಟಿದ್ದಾರೆ. ದೆಹಲಿಗೆ ಬರುವಂತೆ ಭಗವಂತ್​ ಖೂಬಾಗೆ ಸೂಚನೆ ಲಭ್ಯವಾಗಿದೆ. ಪ್ರಧಾನಿ ಕಚೇರಿಯಿಂದ ಸೂಚನೆ ಬಂದ ಕೂಡಲೇ ದೆಹಲಿಗೆ ಪ್ರಯಾಣ ಆರಂಭಿಸಿದ್ದಾರೆ.

  • 07 Jul 2021 03:06 PM (IST)

    ಕೇಂದ್ರದ ನಾಲ್ವರು ಸಚಿವರಿಗೆ ಸಂಪುಟದಲ್ಲಿ ಬಡ್ತಿ

    ಕೇಂದ್ರದ ನಾಲ್ವರು ಸಚಿವರಿಗೆ ಸಂಪುಟದಲ್ಲಿ ಬಡ್ತಿ ಸಿಕ್ಕಿದೆ. ಮನಸುಖ್ ಮಾಂಡವೀಯ, ಕಿರಣ್ ರಿಜಿಜು, ಆರ್.ಕೆ.ಸಿಂಗ್, ಹರ್ದೀಪ್​ ಪುರಿಗೆ ಸಂಪುಟದಲ್ಲಿ ಬಡ್ತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಬಹಳ ಕುತೂಹಲ ಮೂಡಿಸಿದೆ. ಯುವಜನ ಮತ್ತು ಕ್ರೀಡಾ ರಾಜ್ಯ ಸಚಿವ ಕಿರಣ್ ರಿಜಿಜು, ಬಂದರು ಮತ್ತು ಒಳನಾಡು ಜಲಸಾರಿಗೆ ರಾಜ್ಯ ಸಚಿವ ಮನಸುಖ್ ಮಾಂಡವೀಯ, ಕೌಶಲ್ಯಾಭಿವೃದ್ಧಿ ಹಾಗೂ ನವೋದ್ಯಮ ರಾಜ್ಯ ಸಚಿವ ಆರ್.ಕೆ. ಸಿಂಗ್, ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಹರ್ದೀಪ್ ಪುರಿಗೆ ಬಡ್ತಿ ಸಿಕ್ಕಿದೆ.

  • Published On - Jul 07,2021 11:04 PM

    Follow us
    ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
    ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
    ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
    ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
    ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
    ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ