ಮುಂಬೈ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಭರದಿಂದ ಸಾಗಿದೆ. ಎರಡನೇ ಅಲೆಯಿಂದ ಹೈರಾಣಾಗಿರುವ ಆರೋಗ್ಯ ವ್ಯವಸ್ಥೆಯನ್ನು ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆಯ ಹೊಡೆತದಿಂದ ರಕ್ಷಿಸಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈಗಾಗಲೇ ಇರುವ ಕೊರೊನಾ ಲಸಿಕೆಗಳ ಜತೆಗೆ ಹೊಸ ಲಸಿಕೆಗಳಿಗೂ ಅನುಮತಿ ನೀಡಿ ವಿತರಣೆ ಮಾಡುವತ್ತ ಗಮನ ನೀಡಲಾಗುತ್ತಿದೆ. ಆದರೆ, ಎಷ್ಟೋ ಜನರು ಕೊರೊನಾ ಲಸಿಕೆ ಪಡೆದ ನಂತರ ಜ್ವರ ಬರುತ್ತದೆ, ಮೈಕೈ ನೋವು ಶುರುವಾಗುತ್ತದೆ ಎಂಬ ಭಯದ ಕಾರಣಕ್ಕೆ ಲಸಿಕೆ ಸ್ವೀಕರಿಸಲು ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಪರೂಪವೆಂಬ ಘಟನೆಯೊಂದು ನಡೆದಿದ್ದು ಲಸಿಕೆ ಪಡೆದ 70 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ಕಾಡುತ್ತಿದ್ದ ದೃಷ್ಟಿದೋಷ ಬಹುಪಾಲು ನಿವಾರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಅಚ್ಚರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ವಾಸಿಂ ಜಿಲ್ಲೆಯ ಬೆಂದೆರ್ವಾಡಿ ನಿವಾಸಿ ಮಥುರಾಬಾಯಿ ಬಿಡ್ವೆ ಎಂಬ 70 ವರ್ಷ ವಯಸ್ಸಿನ ವೃದ್ಧೆ ತಮಗೆ ಕೊರೊನಾ ಲಸಿಕೆ ಪಡೆದ ನಂತರ ದೃಷ್ಟಿ ಮರುಕಳಿಸಿದ್ದಾಗಿ ಹೇಳುತ್ತಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಕಣ್ಣಿನ ಪೊರೆ ಬೆಳೆದು ದೃಷ್ಟಿ ಕಳೆದುಕೊಂಡಿದ್ದ ಮಥುರಾಬಾಯಿ ಕಳೆದ ಜೂನ್ 26ನೇ ತಾರೀಖು ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರು ಕೊವಿಶೀಲ್ಡ್ ಲಸಿಕೆ ಸ್ವೀಕರಿಸಿದ್ದು, ಇದೀಗ ದೃಷ್ಟಿಯಲ್ಲಿ ಮೊದಲಿಗಿಂತ ಶೇ.30ರಿಂದ ಶೇ.40ರಷ್ಟು ಭಾಗ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಮೂಲತಃ ಜಲ್ನಾ ಜಿಲ್ಲೆಯ ಪರ್ತೂರ್ನವರಾಗಿರುವ ಅವರು ಕೆಲ ವರ್ಷಗಳಿಂದ ತಮ್ಮ ಸಂಬಂಧಿಗಳ ಮನೆಯಲ್ಲಿ ನೆಲೆಸಿದ್ದಾರೆ. ಜೂನ್ 26ರಂದು ಕೊವಿಶೀಲ್ಡ್ ಲಸಿಕೆ ಪಡೆದಿರುವ ಅವರಿಗೆ ಮರುದಿನವೇ ಒಂದು ಕಣ್ಣಿನ ದೃಷ್ಟಿ ಶೇ.30ರಿಂದ ಶೇ.40ರಷ್ಟು ವೃದ್ಧಿಸಿದೆಯಂತೆ. ಈ ಚಮತ್ಕಾರಕ್ಕೆ ಕಾರಣವೇನೆಂದು ಈ ತನಕ ತಿಳಿದುಬಂದಿಲ್ಲವಾದರೂ ಸದ್ಯ ಕೊರೊನಾ ಲಸಿಕೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೇ ಕೇಳಿಬರುತ್ತಿದ್ದ ಸುದ್ದಿಗಳ ನಡುವೆ ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಕೊರೊನಾ ಲಸಿಕೆ ಪಡೆದವರ ದೇಹದಲ್ಲಿ ಅಯಸ್ಕಾಂತೀಯ ಗುಣ ಅಭಿವೃದ್ಧಿಯಾಗಿದೆ, ವಿದ್ಯುತ್ ಉತ್ಪಾದನೆಯಾಗುತ್ತದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿ ವೈರಲ್ ಆಗಿದ್ದವು. ಆದರೆ, ಕೊರೊನಾ ಲಸಿಕೆಯಿಂದ ಆ ರೀತಿಯ ಬದಲಾವಣೆಗಳು ಆಗಲಾರದು, ಮೈಗೆ ಬಲ್ಬ್ ತಾಗಿಸಿದರೆ ಬೆಳಕು ಬರುತ್ತದೆ ಎನ್ನುವುದರ ಹಿಂದಿನ ಅಸಲಿಯತ್ತೇ ಬೇರೆ ಇದೆ. ಅದಕ್ಕೂ ಲಸಿಕೆಗೂ ಸಂಬಂಧವಿಲ್ಲ ಎಂದು ತಜ್ಞರು ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ
ಕೊರೊನಾ ಲಸಿಕೆ ಪಡೆಯುವ ಮುನ್ನ ಗರ್ಭಿಣಿಯರು ಗಮನಿಸಲೇಬೇಕಾದ ಅಂಶಗಳು; ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ