ಕೊರೊನಾ ಲಸಿಕೆ ಪಡೆಯುವ ಮುನ್ನ ಗರ್ಭಿಣಿಯರು ಗಮನಿಸಲೇಬೇಕಾದ ಅಂಶಗಳು; ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ
ಕೊರೊನಾ ಲಸಿಕೆ ಪಡೆಯಲು ಗರ್ಭಿಣಿಯರು ಕೊವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ನೇರವಾಗಿ ಕೊರೊನಾ ಲಸಿಕಾ ಕೇಂದ್ರಗಳಿಗೆ ತೆರಳಿ ಅಲ್ಲಿಯೇ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದು.
ದೆಹಲಿ: ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ನೂತನ ಮಾರ್ಗಸೂಚಿಯನ್ನು ನಿನ್ನೆ (ಜೂನ್ 28) ಬಿಡುಗಡೆ ಮಾಡಿದೆ. ಗರ್ಭಿಣಿಯರು ಕೊರೊನಾ ಲಸಿಕೆಯನ್ನು ಧೈರ್ಯವಾಗಿ ತೆಗೆದುಕೊಳ್ಳಬಹುದು, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಲಸಿಕೆ ತೆಗೆದುಕೊಳ್ಳುವುದರಿಂದ ಕೊರೊನಾದಿಂದ ಬಾಧಿಸಬಹುದಾದ ಸಮಸ್ಯೆಗಳನ್ನು ತಡೆಗಟ್ಟಬಹುದು. ಹೀಗಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳಿ ಎಂದು ತಿಳಿಸಿದೆ.
ಕೊರೊನಾ ಲಸಿಕೆ ಪಡೆಯಲು ಗರ್ಭಿಣಿಯರು ಕೊವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ನೇರವಾಗಿ ಕೊರೊನಾ ಲಸಿಕಾ ಕೇಂದ್ರಗಳಿಗೆ ತೆರಳಿ ಅಲ್ಲಿಯೇ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದು ಎಂದು ತಿಳಿಸಿರುವ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಕೆಲವೊಂದಷ್ಟು ಪ್ರಮುಖ ಅಂಶಗಳನ್ನೊಳಗೊಂಡ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲಿನ ಅಂಶಗಳು ಇಂತಿವೆ: 1. ಗರ್ಭಧಾರಣೆ ಕೊವಿಡ್ 19 ಸೋಂಕಿನ ಅಪಾಯವನ್ನು ಹೆಚ್ಚಿಸುವುದಿಲ್ಲ. ಹೆಚ್ಚಿನ ಗರ್ಭಿಣಿಯರು ಯಾವುದೇ ಸೋಂಕು ಲಕ್ಷಣಗಳನ್ನೇ ಒಳಗೊಂಡಿರುವುದಿಲ್ಲ ಅಥವಾ ಸಣ್ಣ ಪ್ರಮಾಣದ ಗುಣಲಕ್ಷಣಗಳನ್ನು ತೋರಿಸಬಹುದು. ಆದರೆ, ಅವರ ಆರೋಗ್ಯ ತಕ್ಷಣ ಹದಗೆಟ್ಟು, ಗರ್ಭದಲ್ಲಿರುವ ಭ್ರೂಣದ ಮೇಲೂ ಅದು ಅಡ್ಡಪರಿಣಾಮ ಬೀರಬಹುದು. ಹೀಗಾಗಿ ಕೊರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದಕ್ಕಾಗಿ ಗರ್ಭಿಣಿಯರೆಲ್ಲರೂ ಕೊರೊನಾ ಲಸಿಕೆ ತೆಗೆದುಕೊಳ್ಳಬೇಕು.
2. ಇದುವರೆಗೆ ಶೇ.80ಕ್ಕಿಂತ ಹೆಚ್ಚು ಪ್ರಮಾಣದ ಕೊರೊನಾ ಸೋಂಕಿತ ಗರ್ಭಿಣಿಯರು ಯಾವುದೇ ತೀವ್ರ ತೆರನಾದ ಸಮಸ್ಯೆ ಇಲ್ಲದೇ, ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಆದರೆ, ಕೆಲವು ಪ್ರಕರಣದಲ್ಲಿ ಸೋಂಕು ತೀವ್ರವಾಗಿ ಬಾಧಿಸಿದ್ದೂ ಇದೆ. ಒಂದುವೇಳೆ ಸೋಂಕು ಉಲ್ಬಣಿಸಿದರೆ ಗರ್ಭಿಣಿಯರಿಗೂ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲದೇ, ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ, 35 ವರ್ಷ ಮೇಲ್ಪಟ್ಟವರು ಕೆಲ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದನ್ನು ತಡೆಯಲು ಕೊರೊನಾ ಲಸಿಕೆ ಅತ್ಯವಶ್ಯಕ.
3. ಇಲ್ಲಿಯ ತನಕ ಕೊರೊನಾ ಸೋಂಕಿತರಿಗೆ ಜನಿಸಿದ ಶೇ.96ಕ್ಕಿಂತ ಹೆಚ್ಚು ನವಜಾತ ಶಿಶುಗಳು ಆರೋಗ್ಯಕರವಾಗಿಯೇ ಜನಿಸಿವೆ. ಆದರೆ, ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅವಧಿಗೂ ಮುನ್ನವೇ ಮಗು ಜನಿಸುವ ಸಾಧ್ಯತೆ, ಮಗು ತೂಕ ಕಳೆದುಕೊಳ್ಳುವ ಸಾಧ್ಯತೆ ಅಥವಾ ಅಪರೂಪದ ಪ್ರಕರಣಗಳಲ್ಲಿ ಹುಟ್ಟುವ ಮುನ್ನವೇ ಮಗು ಸಾವಿಗೀಡಾಗಿರುವುದು ಕೂಡಾ ಕಂಡುಬಂದಿದೆ.
Union Ministry of Health issues guidelines for vaccination of pregnant women; COVID-19 vaccines available are safe & vaccination protects pregnant women against COVID-19 illness/disease like other individuals. pic.twitter.com/k47ggCOKj4
— ANI (@ANI) June 28, 2021
4. 35 ವರ್ಷ ಮೇಲ್ಪಟ್ಟ ಗರ್ಭಿಣಿಯರು ಗರ್ಭ ಧರಿಸುವ ಮುನ್ನವೇ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇತ್ಯಾದಿಯಿಂದ ಬಳಲುತ್ತಿದ್ದರೆ ಅಂತಹವರಿಗೆ ಕೊರೊನಾ ಹೆಚ್ಚು ಬಾಧಿಸುವ ಸಾಧ್ಯತೆ ಇರುತ್ತದೆ.
5. ಒಂದುವೇಳೆ ಗರ್ಭ ಧರಿಸಿದ ಸಂದರ್ಭದಲ್ಲೇ ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದ್ದಲ್ಲಿ ಅವರಿಗೆ ಹೆರಿಗೆಯಾದ ಕೂಡಲೇ ಆದಷ್ಟು ಬೇಗ ಕೊರೊನಾ ಲಸಿಕೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು.
6. ಕೊರೊನಾ ಲಸಿಕೆ ತೆಗೆದುಕೊಂಡ ನಂತರ ಗರ್ಭಿಣಿಯರಿಗೆ ಒಂದರಿಂದ ಮೂರು ದಿನಗಳ ಕಾಲ ಅನಾರೋಗ್ಯ ಎನ್ನಿಸುವಂತೆ ಸಣ್ಣ ಪ್ರಮಾಣದ ಜ್ವರ, ನೋವು, ಸುಸ್ತು ಕಾಣಿಸಿಕೊಳ್ಳಬಹುದು. ಇಲ್ಲಿಯ ತನಕ ಕೊರೊನಾ ಲಸಿಕೆ ಮಗುವಿನ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎನ್ನುವುದು ಯಾವುದೇ ಅಧ್ಯಯನದಲ್ಲಿ ಸಾಬೀತಾಗಿಲ್ಲ. ಅತೀ ಅಪರೂಪದ ಪ್ರಕರಣದಲ್ಲಿ (1.5ಲಕ್ಷದಲ್ಲಿ ಒಬ್ಬರಿಗೆ) ಲಸಿಕೆ ತೆಗೆದುಕೊಂಡ ನಂತರ ತುರ್ತು ವೈದ್ಯಕೀಯ ಸಹಾಯ ಬೇಕಾಗಬಹುದು. ಅದರಲ್ಲಿ ಉಸಿರಾಟದ ಸಮಸ್ಯೆ, ಎದೆನೋವು, ಕೈ ಕಾಲು ಸೆಳೆತ, ತಲೆನೋವು, ವಾಂತಿ, ಕಣ್ಣು ಮಂಜಾಗುವುದು ಸೇರಿದಂತೆ ಕೆಲ ಸಮಸ್ಯೆಗಳು ಬಾಧಿಸಬಹುದು.
7. ಕೊರೊನಾ ಲಸಿಕೆ ತೆಗೆದುಕೊಂಡ ನಂತರವೂ ಗರ್ಭಿಣಿಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅವರಿಗೆ, ಅವರ ಕುಟುಂಬಸ್ಥರಿಗೆ ಅರಿವು ಮೂಡಿಸಬೇಕು. ಎರಡು ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಇದ್ದಲ್ಲಿ ತೆರಳದೇ ಇರುವುದು ಅತ್ಯವಶ್ಯಕ.
ಇದನ್ನೂ ಓದಿ: ಕೊವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕು, ಅದು ಅವರಿಗೆ ಉಪಯುಕ್ತ: ಐಸಿಎಂಆರ್
ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್ 19 ಎರಡನೇ ಅಲೆ; ಐಸಿಎಂಆರ್ ಅಧ್ಯಯನ