ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್

|

Updated on: Apr 27, 2021 | 10:45 PM

ಸಂಜೆಯ ನಂತರ ಮೆಜೆಸ್ಟಿಕ್​ನಲ್ಲಿ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್​ಗಳಿಂದ ಖಾಸಗಿ ಬಸ್​ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.

ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್
ಸ್ವಗ್ರಾಮಕ್ಕೆ ಹಿಂತಿರುಗುತ್ತಿರುವ ಜನ
Follow us on

ಬೆಂಗಳೂರು: ಕರ್ನಾಟಕ ಸರ್ಕಾರವು ಸೋಮವಾರ ಘೋಷಿಸಿದ್ದಂತೆ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಕೊವಿಡ್ ಕರ್ಫ್ಯೂ ಹೆಸರಿನ ಲಾಕ್​ಡೌನ್ ಜಾರಿಯಾಗಿದೆ. ನಗರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಡೀದಿನ ಬಸ್​ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿಯೇ ಇತ್ತು. ಒಂದರ ಹಿಂದೆ ಒಂದರಂತೆ ಬಸ್​ಗಳು ಹೊರಟವು. ರಾತ್ರಿ 9 ಗಂಟೆಯ ನಂತರ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾರಿಗೆ ನಿಗಮದ ಬಸ್​ ಸಂಚಾರ ಇರುವುದಿಲ್ಲ ಎಂದು ಮಧ್ಯಾಹ್ನವೇ ಕೆಎಸ್​ಆರ್​ಟಿಸಿ ಘೋಷಿಸಿತ್ತು. ಹೀಗಾಗಿ ಸಂಜೆಯ ನಂತರ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್​ಗಳಿಂದ ಖಾಸಗಿ ಬಸ್​ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.

ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದಿಂದ ಕೊನೆಯ ಸರ್ಕಾರಿ ಬಸ್ ಹೊರಟಿತು. ಕೊನೇ ಬಸ್ ಹೊರಟ ನಂತರ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಕಾರ್ಯಾಚರಣೆಯನ್ನು ಸಿಬ್ಬಂದಿ ಬಂದ್ ಮಾಡಿದರು. ನಿಲ್ದಾಣದ ಪ್ರವೇಶ, ನಿರ್ಗಮನ ದ್ವಾರಗಳ ಬಳಿ ಬ್ಯಾರಿಕೇಡ್ ಅಳವಡಿಸಲಾಯಿತು.

ಇದರ ಹೊರತಾಗಿ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಾಹನಗಳಲ್ಲಿಯೂ ಜನರು ಬೆಂಗಳೂರಿನಿಂದ ಹೊರಟರು. ನೆಲಮಂಗಲದ ನವಯುಗ ಟೋಲ್​ನಲ್ಲಿ ಕಿಲೋಮೀಟರ್​ಗಟ್ಟಲೆ ವಾಹನಗಳು ಸಾಲುಗಟ್ಟಿದ್ದವು. ಮನೆಗಳನ್ನು ಖಾಲಿ ಮಾಡಿಕೊಂಡು ಸಾವಿರಾರು ಮಂದಿ ಬೆಂಗಳೂರು ತೊರೆದ ದೃಶ್ಯಗಳೂ ಕಣ್ಣಿಗೆ ಬಿದ್ದವು. ಲಾಕ್​ಡೌನ್​ಗೆ ವಿಧಿಸಿರುವ 14 ದಿನಗಳ ಗಡುವು ಮುಗಿದ ನಂತರವೂ ಪರಿಸ್ಥಿತಿ ಸುಧಾರಿಸುತ್ತೋ? ಇಲ್ಲವೋ ಎಂಬ ಆತಂಕ ಹಲವರನ್ನು ಬಾಧಿಸುತ್ತಿತ್ತು.

ಬೆಂಗಳೂರು ನಗರದಲ್ಲಿ ನೈಟ್​ ಹಾಲ್ಟ್​ ಆಗುತ್ತಿದ್ದ ಬಹುತೇಕ ಬಸ್ಸುಗಳನ್ನು ಖಾಸಗಿ ಬಸ್ ಕಂಪನಿಗಳು ವಾಪಸ್ ಕಳಿಸಿವೆ. ನಾಳೆ ಬೆಳಿಗ್ಗೆ ಜಿಲ್ಲಾ ಕೇಂದ್ರಗಳಿಂದಲೂ ಬಸ್​ಗಳು ಇರುವುದಿಲ್ಲ. ಹೀಗಾಗಿ ಹಳ್ಳಿಗಳಿಗೆ ತಲುಪುವವರು ಸ್ವಂತ ವಾಹನಗಳನ್ನೇ ಅವಲಂಬಿಸಬೇಕಾಗುತ್ತದೆ. ಸರಿಸುಮಾರು 6000 ಬಸ್​ಗಳು ಇಂದು ಸಂಜೆಯಿಂದ ಬೆಂಗಳೂರು ತೊರೆದಿವೆ ಎಂದು ಖಾಸಗಿ ಬಸ್ ಏಜೆಂಟರೊಬ್ಬರು ಮಾಹಿತಿ ನೀಡಿದರು.

ನಾಯಂಡಹಳ್ಳಿಯ ಸ್ಯಾಟಲೈಟ್ ಬಸ್​ ನಿಲ್ದಾಣದಲ್ಲಿ ಕಾಸರಗೋಡು ನಗರಕ್ಕೆ ಹೋಗುವ ಬಸ್​ ಇನ್ನೂ ಬಂದಿರದ ಕಾರಣ ಪ್ರಯಾಣಿಕರು ಆತಂಕದಲ್ಲಿದ್ದರು. ಈ ಬಸ್ 8 ಗಂಟೆಗೆ ಬರಬೇಕಿತ್ತು. ಲಾಕ್​ಡೌನ್​ಗೆ 10 ನಿಮಿಷ ಬಾಕಿಯಿರುವಂತೆಯೇ ಮೆಜೆಸ್ಟಿಕ್ ಬಸ್​ ನಿಲ್ದಾಣದಿಂದ ಕೆಎಸ್​ಆರ್​ಟಿಸಿಯ ಬಹುತೇಕ ಬಸ್​ಗಳು ಹೊರಟವು. ನಿಲ್ದಾಣದಲ್ಲಿ ಜನದಟ್ಟಣೆ ಒಮ್ಮೆಲೆ ಕಡಿಮೆಯಾದಂತೆ ಭಾಸವಾಯಿತು.

ಬಸ್​ ಟಿಕೆಟ್ ಸಿಗದ ಕೆಲವರು ರೈಲು ಹಿಡಿದು ಊರಿಗೆ ಹೋಗಲು ಧಾವಿಸಿದರು. ಆದರೆ ಅಲ್ಲಿಯೂ ಅವಕಾಶ ಸಿಗಲಿಲ್ಲ. ಹೀಗಾಗಿ ರೈಲು ನಿಲ್ದಾಣದಲ್ಲಿಯೇ ಮಲಗಿದ್ದು, ಬೆಳಿಗ್ಗೆ ಟಿಕೆಟ್ ಪಡೆದು ಊರುಗಳಿಗೆ ತೆರಳು ನಿರ್ಧರಿಸಿ ಅಲ್ಲಿಯೇ ಮಲಗಿದ್ದಾರೆ. ಏನಾದರೂ ಆಗಲಿ, ಲಾಕ್​ಡೌನ್ ವೇಳೆ ಬೆಂಗಳೂರಿನಲ್ಲಿ ಇರುವುದು ಬೇಡ. ನಮ್ಮ ಊರುಗಳಿಗೆ ಹೋಗುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ವಲಸಿಗರು ಬಂದಂತೆ ಇದೆ.

(Thousands of KSRTC Private bus left Bengaluru lockdown began state)

ಇದನ್ನೂ ಓದಿ: 14 ದಿನಗಳ ಕೊರೊನಾ ಕರ್ಫ್ಯೂ; ಬೆಂಗಳೂರಿಗೆ ವಿದಾಯ ಹೇಳಿ ತಮ್ಮ ಗೂಡು ಸೇರುತ್ತಿರುವ ಜನ

ಇದನ್ನೂ ಓದಿ: ಬಸ್​ನಲ್ಲಿ ನನಗಾದರೆ ಸೀಟ್ ಕೊಟ್ಟಿದ್ದೀರಿ, ಆದರೆ ನಾನು ಸಾಕಿದ ನಾಯಿಗೆ ಏಕೆ ಸೀಟ್ ಕೊಡುವುದಿಲ್ಲ? ಮಹಿಳೆಯ ಪ್ರಶ್ನೆಗೆ ಕರಗಿತು ಬಸ್ ಸಿಬ್ಬಂದಿ ಕರುಳು

Published On - 9:39 pm, Tue, 27 April 21