ಸರ್ವಪಕ್ಷಗಳ ಸಭೆಗೆ ಯಡಿಯೂರಪ್ಪ ಸೇರಿ ಬಿಜೆಪಿಯ ಮೂವರು ಮಾಜಿ ಸಿಎಂಗಳಿಗೆ ಆಹ್ವಾನ

ಬರದ ಛಾಯೆಯ ನಡುವೆ ಕರ್ನಾಟಕದ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಬಡಿಲಾಗುತ್ತಿದೆ. ಈ ಬಗ್ಗೆ ವಿಪಕ್ಷಗಳು ಮಾತ್ರವಲ್ಲದೆ, ರೈತರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಸರ್ಕಾರ ನಾಳೆ (ಆಗಸ್ಟ್ 23) ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದು, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.

ಸರ್ವಪಕ್ಷಗಳ ಸಭೆಗೆ ಯಡಿಯೂರಪ್ಪ ಸೇರಿ ಬಿಜೆಪಿಯ ಮೂವರು ಮಾಜಿ ಸಿಎಂಗಳಿಗೆ ಆಹ್ವಾನ
ಸರ್ವ ಪಕ್ಷಗಳ ಸಭೆಗೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದಗೌಡರಿಗೆ ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on:Aug 22, 2023 | 1:30 PM

ಬೆಂಗಳೂರು, ಆಗಸ್ಟ್ 22: ಕರ್ನಾಟಕದಲ್ಲಿ ಮಳೆ ಕೊರತೆಯಾಗಿ ಬರದ ಛಾಯೆ ಎದುರಾಗಿದ್ದರೂ ಕಾಂಗ್ರೆಸ್ ಸರ್ಕಾರವು ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಕಾವೇರಿ ನೀರನ್ನು ಹರಿಬಿಡುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಟೀಕಾಪ್ರಹಾರ ನಡೆಸುತ್ತಿದ್ದು, ರೈತರು ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಎಚ್ಚೆತ್ತ ಸರ್ಕಾರ, ನಾಳೆ (ಆಗಸ್ಟ್ 23) ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಬಿಜೆಪಿಯ (BJP) ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಹ್ವಾನ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಸ್ಥಾನ ಇಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದ್ದಾರೆ. ಇನ್ನು, ಡಿ.ವಿ. ಸದಾನಂದಗೌಡ ಅವರಿಗೆ ಮುಖ್ಯಮಂತ್ರಿ ಅವರ ಕಚೇರಿಯಿಂದ ದೂರವಾಣಿ ಕರೆ ಮೂಲಕ ಸಭೆಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಆ.23ರಂದು ಸರ್ವಪಕ್ಷ ಸಭೆ: ಊರು ಕೊಳ್ಳೆ ಹೊಡೆದ ಮೇಲೆ ಸಭೆ ಕರೆದರೆ ಏನು ಪ್ರಯೋಜನ ಎಂದ ಕುಮಾರಸ್ವಾಮಿ

ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟೆಗಳಲ್ಲಿ ನೀರು ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಬುಧವಾರದಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಕರ್ನಾಟಕದಲ್ಲಿ ಮಳೆ ಸರಿಯಾಗಿ ಆಗದ ಪರಿಣಾಮ ರಾಜ್ಯದಲ್ಲಿನ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಇದರಿಂದಾಗಿ ರೈತರಿಗೆ ನೀರಿನ ಅಭಾವ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡಿನಲ್ಲೂ ಮಳೆಯಾಗದ ಪರಿಣಾಮ ಕಾವೇರಿ ನದಿ ಪಾತ್ರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದ ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಹೊರಡಿಸಿದ ಆದೇಶದಂತೆ ಕರ್ನಾಟಕ ಸರ್ಕಾರವು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಬಿಡುತ್ತಿದೆ.

ನೀರು ಹರಿಸುವ ನಿರ್ಧಾರ ಮರು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ನಾವು ರೈತರ ಹಿತವನ್ನು ಕಾಯುವುದರ ಜೊತೆಗೆ ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Tue, 22 August 23