Padma Awards 2026: ಕರ್ನಾಟಕದ ಮೂವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ; ಮಾಹಿತಿ ಇಲ್ಲಿದೆ

2026ರ ಪದ್ಮಶ್ರೀ ಪ್ರಶಸ್ತಿಯು ಕರ್ನಾಟಕದ ಮೂವರು ಮಹನೀಯರಿಗೆ ಸಂದಿದೆ. ಹಿಮೋಫಿಲಿಯಾ ಪೀಡಿತ ಮಕ್ಕಳ ಸೇವಕ ಡಾ. ಸುರೇಶ್ ಹನಗವಾಡಿ, ಸಮಾಜ ಸೇವೆಗೆ ಜೀವನ ಮುಡಿಪಾಗಿಟ್ಟ ಸುಶೀಲಮ್ಮ ಮತ್ತು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ‘ಪುಸ್ತಕ ಮನೆ’ ನಿರ್ಮಿಸಿದ ಅಂಕೇಗೌಡರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಅಸಾಧಾರಣ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಕೇಂದ್ರ ಸರ್ಕಾರ ಗುರುತಿಸಿದೆ.

Padma Awards 2026: ಕರ್ನಾಟಕದ ಮೂವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ; ಮಾಹಿತಿ ಇಲ್ಲಿದೆ
ಪ್ರಶಸ್ತಿ ಪುರಸ್ಕೃತರು

Updated on: Jan 25, 2026 | 5:44 PM

ಬೆಂಗಳೂರು, ಜನವರಿ 25: 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಮೂವರು ಸೇರಿ ಒಟ್ಟು 54 ಮಂದಿ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಅಂಕೇಗೌಡ, ಡಾ.ಸುರೇಶ್ ಹನಗವಾಡಿಮತ್ತು ಸುಶೀಲಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಬಾರಿಯೂ ಕೇಂದ್ರ ಸರ್ಕಾರ ತೆರೆ ಮರೆಯ ಸಾಧಕರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಹಿಮೊಫಿಲಿಯಾ ಪೀಡಿತ ಮಕ್ಕಳ ಸೇವಕ ಡಾ.ಸುರೇಶ್ ಹನಗವಾಡಿ

JJM ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಸುರೇಶ್ ಹನಗವಾಡಿ ಅವರು, ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಂಸ್ಥಾಪಕರು ಕೂಡ ಆಗಿದ್ದಾರೆ. ಸ್ವತಃ ಹಿಮೋಫಿಲಿಯಾ ಪೀಡಿತರಾಗಿರುವ ಇವರು ಕಳೆದ ನಾಲ್ಕು ದಶಕಗಳಿಂದ ಈ ಕಾಯಿಲೆ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರಾಜ್ಯದ ಬಹುತೇಕ ಭಾಗದ ಹಿಮೋಫಿಲಿಯಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಸುರೇಶ್,  ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಸ್ಪಿ ಬಾಲಸುಬ್ರಹ್ಮಣ್ಯಂ ಸಹಕಾರದಿಂದ‌ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಟ್ಟಿ ಬೆಳೆಸಿದ್ದಾರೆ.

ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

ಸಮಾಜ ಸೇವೆಗೆ ಜೀವನವನ್ನೇ ಮುಡಿಪಿಟ್ಟ ಸುಶೀಲಮ್ಮ

1975ರಿಂದ ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುತ್ತಿರುವ ಡಾ. ಎಸ್.ಜಿ. ಸುಶೀಲಮ್ಮ, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಸುಮಂಗಲಿ ಸೇವಾಶ್ರಮ ಸ್ಥಾಪಿಸಿರುವ ಇವರು ಮಕ್ಕಳಿಗೆ ಲೈಬ್ರರಿ, ಮಹಿಳಾ ಮತ್ತು ಮಕ್ಕಳ ಆಧ್ಯಾತ್ಮಿಕ ತರಬೇತಿ, ನಿರ್ಗತಿಕ ಮಹಿಳೆಯರ ಸಬಲೀಕರಣ, ಸ್ವಯಂ ಉದ್ಯೋಗ, ಸಮುದಾಯದ ಅಭಿವೃದ್ಧಿ, ಮದ್ಯಸೇವನೆ ವಿರುದ್ಧ ಹೋರಾಟ, ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ಹೋರಾಟ ಸೇರಿ ಮುಂತಾದವುಗಳಲ್ಲಿ ಗುರುತಿಸಿಕೊಂಡವರು. 1987ರಲ್ಲಿ ಮಕ್ಕಳ ಒಕ್ಕೂಟವನ್ನು ಆರಂಭಿಸಿರುವ ಇವರಿಗೆ ಅದಾಗಲೇ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಂದಿವೆ. ಪರಿಸರ ಸಂರಕ್ಷಣೆಗಾಗಿ ಇವರ ಕೊಡುಗೆ ಗಮನಿಸಿ ಜಪಾನ್ ದೇಶದ ಪುರಸ್ಕಾರವೂ ಲಭಿಸಿದೆ.

‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಾತೃ ಅಂಕೇಗೌಡರು

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಗಮನ ಸೇಳೆದ ವ್ಯಕ್ತಿ. 20ನೇ ವಯಸ್ಸಿನಲ್ಲೇ ಪುಸ್ತಕ ಸಂಗ್ರಹ ಆರಂಭಿಸಿದ್ದ ಅಂಕೇಗೌಡರು, ಸ್ವಂತ ಮನೆ ಮಾರಿ ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿದ್ದಾರೆ. ಪಾಂಡವಪುರದ ಹರಳಹಳ್ಳಿಯಲ್ಲಿನ 22 ಗುಂಟೆ ಜಾಗದಲ್ಲಿ ಪುಸ್ತಕ ಮನೆ ನಿರ್ಮಾಣವಾಗಿದ್ದು, ವಿವಿಧ ಭಾಷೆಯ 20 ಲಕ್ಷಕ್ಕೂ ಅಧಿಕ ಪುಸ್ತಗಳ ಸಂಗ್ರಹ ಇಲ್ಲಿವೆ. ಇಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಕಧಕರಿಗೆ ಮತ್ತು ಸಾರ್ವಜನಿಕರಿಗೆ ಇಲ್ಲಿ ಉಚಿತ ಪ್ರವೇಶ ಇದ್ದು, ಇವರ ಈ ಅಸಾಧಾರಣ ಸಾಧನೆ ಲಿಮ್ಕಾ ಬುಕ್ ಆಫ್​​ ರೆಕಾರ್ಡ್ಸ್ ಕೂಡ ಸೇರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.