ಕೋಲಾರ: ಲಸಿಕೆ ಪಡೆದ ಬಳಿಕ 3 ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಗರಾಜ್, ಅಂಜಲಿ ದಂಪತಿ ಮಗು ಮೃತಪಟ್ಟಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿಯಲ್ಲಿ ನಿನ್ನೆ ಗ್ರಾಮದ ಜನರಿಗೆ ಕೊವಿಡ್ ಲಸಿಕೆ ನೀಡಿದ್ದರು. ಇದೇ ವೇಳೆ 3 ತಿಂಗಳ ಮಕ್ಕಳಿಗೂ ಪೆಂಟಾವಲೆಂಟ್ (pentavalent vaccine) ಲಸಿಕೆಯನ್ನೂ ಹಾಕಲಾಗಿತ್ತು. ಈ ವೇಳೆ ಆರೋಗ್ಯ ಅಧಿಕಾರಿಗಳು ಮಗುವಿಗೆ 3 ತಿಂಗಳ ಲಸಿಕೆ ಬದಲು ಕೊವಿಡ್ ಲಸಿಕೆ ಹಾಕಿ ಎಡವಟ್ಟು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಪುಟ್ಟ ಮಗುವಿಗೆ ಕೊವಿಡ್ ಲಸಿಕೆಯನ್ನು ನೀಡಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಯುತ್ತಿದ್ದು ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಿನ್ನೆ ಒಟ್ಟು ಮೂರು ಪುಟ್ಟ ಮಕ್ಕಳಿಗೆ ಪೆಂಟಾವಲೆಂಟ್ ವ್ಯಾಕ್ಸಿನ್ (pentavalent vaccine) ಹಾಕಲಾಗಿದೆ. ಈ ಪೈಕಿ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ವ್ಯಾಕ್ಸಿನ್ ಬದಲಾಗಿದ್ದಲ್ಲಿ ಮಗುವಿಗೆ ವ್ಯಾಕ್ಸಿನ್ ಹಾಕಿದ ಒಂದು ಗಂಟೆಯಲ್ಲೇ ಅದರ ಪ್ರಭಾವ, ಸೈಡ್ ಎಫೆಕ್ಟ್ ಗೊತ್ತಾಗುತ್ತಿತ್ತು. ಆದ್ರೆ ರಾತ್ರಿ 2 ಗಂಟೆಯ ನಂತರ ಒಂದು ಮಗುವಿಗೆ ಮಾತ್ರ ಆರೋಗ್ಯದಲ್ಲಿ ಏರುಪೇರಾಗಿ ಅದು ಮೃತಪಟ್ಟಿದೆ. ಇಲ್ಲಿ ಯಾವುದೇ ವ್ಯಾಕ್ಸಿನ್ ಬದಲಾವಣೆ ಮಾಡಿಲ್ಲ. ಯಾವುದೋ ಬೇರೆ ಸಮಸ್ಯೆಯಿಂದ ಮಗು ಪ್ರಾಣ ಕಳೆದುಕೊಂಡಿದೆ ಎಂದು ಟಿಹೆಚ್ಒ ವರಣಾ ಶ್ರೀ ತಿಳಿಸಿದ್ದಾರೆ.
ಇದನ್ನೂ ಓದಿ: Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!