Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!

Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!
ಪ್ರಾತಿನಿಧಿಕ ಚಿತ್ರ

ಅರುಣಾಚಲ ಪ್ರದೇಶದೊಳಗೆ ನೀವು ಪ್ರವೇಶಿಸಬೇಕಾದರೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಲೇಬೇಕು. ಕೊರೋನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಈ ರಾಜ್ಯದೊಳಗೆ ಎಂಟ್ರಿ ಇಲ್ಲ!

TV9kannada Web Team

| Edited By: Skanda

Jul 10, 2021 | 7:43 AM

ಕೊರೋನಾದಿಂದಾಗಿ ಗಲ್ಫ್ ರಾಷ್ಟ್ರಗಳು, ಅಮೆರಿಕ ಸೇರಿದಂತೆ ಅನೇಕ ದೇಶಗಳು ಭಾರತದ ಪ್ರಯಾಣಿಕರಿಗೆ ನಿಷೇಧ ಹೇರಿವೆ. ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಿದ್ದು, ಬಹುತೇಕ ಎಲ್ಲ ರಾಜ್ಯಗಳಲ್ಲೂ ಲಾಕ್​ಡೌನ್ ತೆರವುಗೊಳಿಸಲಾಗಿದೆ. ಆದರೆ, ನಮ್ಮ ದೇಶದ ಈ ಒಂದು ರಾಜ್ಯದೊಳಗೆ ನೀವು ಪ್ರವೇಶಿಸಬೇಕಾದರೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಲೇಬೇಕು. ಕೊರೋನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಈ ರಾಜ್ಯದೊಳಗೆ ಎಂಟ್ರಿ ಇಲ್ಲ! ಹಾಗಾದರೆ, ಆ ರಾಜ್ಯ ಯಾವುದು?

ಅರುಣಾಚಲ ಪ್ರದೇಶ ರಾಜ್ಯದಲ್ಲಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್-19 ಅಬ್ಬರವನ್ನು ನಿಯಂತ್ರಿಸಲು ಅರುಣಾಚಲ ಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇಡೀ ರಾಜ್ಯಾದ್ಯಂತ ಕೊರೋನಾ ತಪಾಸಣೆ ನಡೆಸಲಾಗುತ್ತಿದ್ದು, ಈಗಾಗಲೇ ಈ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಶೇ. 68ರಷ್ಟು ಜನರ ಮೊದಲ ಡೋಸ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಈಗಾಗಲೇ ಅರುಣಾಚಲ ಪ್ರದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ಇಂತಹ ಸಂದರ್ಭದಲ್ಲಿ ಬೇರೆ ರಾಜ್ಯಗಳಿಂದ ಬರುವ ಪ್ರವಾಸಿಗರಿಂದ ಮತ್ತೆ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಅರುಣಾಚಲ ಪ್ರದೇಶ ರಾಜ್ಯಕ್ಕೆ ಪ್ರವೇಶಿಸುವವರಿಗೆ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿದೆ.

ಯಾರಾದರೂ ಅರುಣಾಚಲ ಪ್ರದೇಶಕ್ಕೆ ಬರಲು ಇಚ್ಛಿಸಿದರೆ ಅವರ ಕೊರೋನಾ ಲಸಿಕೆ ಹಾಕಿಸಿಕೊಂಡಿರುವ ದಾಖಲೆಯನ್ನು ತೋರಿಸಬೇಕು ಎಂದು ಅರುಣಾಚಲ ಪ್ರದೇಶ ರಾಜ್ಯದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಹೇಳಿದ್ದಾರೆ. ಕೊರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ಅರುಣಾಚಲ ಪ್ರದೇಶ ಸರ್ಕಾರ ಮೂರು ಕ್ರಮಗಳನ್ನು ಕೈಗೊಂಡಿದೆ. ರ್ಯಾಂಡಮ್ ಆಗಿ ಕೊರೋನಾ ತಪಾಸಣೆ, ಕೊರೋನಾ ಹರಡದಿರಲು ಸೂಚಿಸಿರುವ ನಿಯಮಗಳ ಪಾಲನೆ ಮತ್ತು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಸದ್ಯಕ್ಕೆ ಇರುವ ಮೂರ ಮಾರ್ಗಗಳಾಗಿವೆ. ಅರುಣಾಚಲ ಪ್ರದೇಶಕ್ಕೆ ಹೆಚ್ಚುವರಿಯಾಗಿ 3 ಲಕ್ಷ ಕೋವಿಡ್ ಲಸಿಕೆಗಳನ್ನು ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕು ಸ್ವಲ್ಪ ಕಡಿಮೆಯಾಗಿರುವುದರಿಂದ ಬೇರೆ ರಾಜ್ಯಗಳಿಂದ ಅರುಣಾಚಲ ಪ್ರದೇಶಕ್ಕೆ ಜನರ ಬರತೊಡಗಿದ್ದಾರೆ. ಅಂಥವರ ಕೋವಿಡ್ ಲಸಿಕೆ ಮೊದಲ ಡೋಸ್ ಆದರೂ ಹಾಕಿಸಿಕೊಂಡಿರಲೇಬೇಕು. ಇಲ್ಲವಾದರೆ, ಈ ರಾಜ್ಯದೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹೊಸ ಪ್ಲಾನ್ ಕೂಡ ಮಾಡಲಾಗುತ್ತಿದೆ. ಅರುಣಾಚಲ ಪ್ರದೇಶದ ಸುಬಾಂಸಿರಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ 20 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ಅರುಣಾಚಲ ಪ್ರದೇಶ ಮಾತ್ರವಲ್ಲದೆ ಮೇಘಾಲಯ, ಮಣಿಪುರ ರಾಜ್ಯಗಳಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಹಣ ನೀಡುವುದಾಗಿಯೂ ಘೋಷಿಸಲಾಗಿದೆ. ಅಸ್ಸಾಂ, ಮೇಘಾಲಯ, ಮಣಿಪುರಗಳಲ್ಲಿ ಉದ್ಯಮಿಗಳು ಮತ್ತು ಕಂಪನಿಗಳ ಉದ್ಯೋಗಿಗಳಿಗೆ ಕೊರೋನಾ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಲಸಿಕೆ ಹಾಕಿಸಿಕೊಂಡರೆ ಮಾತ್ರ ಉದ್ಯೋಗಿಗಳಿಗೆ ವೇತನ ನೀಡುವುದಾಗಿ ಕೆಲವು ಕಂಪನಿಗಳು ಘೋಷಿಸಿವೆ.

ಇದನ್ನೂ ಓದಿ:

ಶೇ.70ರಷ್ಟು ಬೆಂಗಳೂರಿಗರಿಗೆ ಕೊರೊನಾ ಸದ್ದಿಲ್ಲದೇ ಬಂದು ಹೋಗಿದೆ; ಐಸಿಎಂಆರ್​ ಸೆರೋ ಸರ್ವೆಯಲ್ಲಿ ಬಯಲಾಯ್ತು ಅಚ್ಚರಿ

Explainer ಕೊರೊನಾ ಸಂಕಷ್ಟದ ಮಧ್ಯೆಯೇ ಬಂತು ಝಿಕಾ ವೈರಸ್ ಸೋಂಕು; ಈ ಸೋಂಕು ತಡೆಗಟ್ಟುವುದು ಹೇಗೆ?

(Indian State of Arunachal Pradesh to Allow Entry only for Covid-19 Vaccinated People)

Follow us on

Related Stories

Most Read Stories

Click on your DTH Provider to Add TV9 Kannada