ಬೆಡ್ ನೀಡಲು 1.20 ಲಕ್ಷ ಹಣ ಪಡೆದ ಆರೋಪ; ಸದಾಶಿವನಗರ ಠಾಣೆ ಪೊಲೀಸರಿಂದ ಮೂವರ ಬಂಧನ

ಲಕ್ಷ್ಮೀದೇವಮ್ಮ ಪುತ್ರ ಲಕ್ಷ್ಮೀಶನಿಂದ ಮೂವರು ಒಟ್ಟು 1.20 ಲಕ್ಷ ಪಡೆದಿದ್ದರು. 50 ಸಾವಿರ ಗೂಗಲ್ ಪೇ ಮೂಲಕ ಮತ್ತು 70 ಸಾವಿರ ನಗದು ಪಡೆದಿದ್ದರು.

ಬೆಡ್ ನೀಡಲು 1.20 ಲಕ್ಷ ಹಣ ಪಡೆದ ಆರೋಪ; ಸದಾಶಿವನಗರ ಠಾಣೆ ಪೊಲೀಸರಿಂದ ಮೂವರ ಬಂಧನ
ಸಾಂದರ್ಭಿಕ ಚಿತ್ರ
Updated By: ganapathi bhat

Updated on: Aug 23, 2021 | 12:48 PM

ಬೆಂಗಳೂರು: ಬೆಡ್ ನೀಡಲು 1.20 ಲಕ್ಷ ಹಣ ಪಡೆದಿದ್ದ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರು ವೆಂಕಟೇಶ್, ಮಂಜುನಾಥ್, ಪುನೀತ್ ಎಂಬವರಾಗಿದ್ದಾರೆ. ಈ ಮೂವರು ಕೂಡ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದರು. ‘ಆರೋಗ್ಯ ಮಿತ್ರ’ರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಈಗ ಬಂಧನಕ್ಕೆ ಒಳಗಾಗಿದ್ದಾರೆ.

ಇಂದು ಮಧ್ಯಾಹ್ನ ವೇಳೆ ಲಕ್ಷ್ಮೀದೇವಮ್ಮ ಎಂಬವರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ, ಲಕ್ಷ್ಮೀದೇವಮ್ಮ ಪುತ್ರ ಲಕ್ಷ್ಮೀಶನಿಂದ ಮೂವರು ಒಟ್ಟು 1.20 ಲಕ್ಷ ಪಡೆದಿದ್ದರು. 50 ಸಾವಿರ ಗೂಗಲ್ ಪೇ ಮೂಲಕ ಮತ್ತು 70 ಸಾವಿರ ನಗದು ಪಡೆದಿದ್ದರು. ಚಿಕಿತ್ಸೆ ಫಲಿಸದೆ ಸೋಂಕಿತ ಲಕ್ಷ್ಮೀದೇವಮ್ಮ ಮೃತಪಟ್ಟಿದ್ದರು. ಆರೋಪಿಗಳು ಹಣ ಪಡೆದು ಬೆಡ್ ನೀಡಿದ್ದ ಬಗ್ಗೆ ಪುತ್ರ ಲಕ್ಷ್ಮೀಶ ಪೊಲೀಸರಿಗೆ ದೂರು ನೀಡಿದ್ದರು. ಸದಾಶಿವನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಡ್ ಬುಕಿಂಗ್​ ಹಗರಣ; ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತರು
ಬೆಂಗಳೂರು ನಗರದಲ್ಲಿ ಕೊವಿಡ್ ಬೆಡ್ ಬುಕಿಂಗ್​ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೃತಕವಾಗಿ ಬೆಡ್ ಕೊರತೆ ಸೃಷ್ಟಿಸಲಾಗಿದೆ. ದಿನಪ್ರತಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಈ ವರದಿ ಆಧರಿಸಿ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ 31 ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆರೋಗ್ಯ ಇಲಾಖೆ ಆಯುಕ್ತರು ಸೇರಿ 31 ಜನರಿಗೆ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೆ ನೋಟಿಸ್​ಗೆ​ ಉತ್ತರಿಸಲು ಅಧಿಕಾರಿಗಳಿಗೆ 3 ವಾರಗಳ ಗಡುವು ಕೂಡ ನೀಡಲಾಗಿದೆ. ಪ್ರಕರಣ ಸಂಬಂಧ ಸರಿಯಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಲೋಕಾಯುಕ್ತ ಎಡಿಜಿಪಿ 3 ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಬೆಡ್ ಸಿಗದ ಹಿನ್ನೆಲೆ; ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ವಶಕ್ಕೆ

ಬೆಡ್​ ಬ್ಲಾಕಿಂಗ್ ದಂಧೆ: ತನಿಖಾ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್​ ಸೂಚನೆ

Published On - 11:08 pm, Wed, 5 May 21