ಯಶ್ ಹುಟ್ಟುಹಬ್ಬಕ್ಕಾಗಿ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಬಲಿಯಾದ ಯುವಕರ ಸಾವಿಗೆ ಯಾರು ಜವಾಬ್ದಾರರು?

ಯಶ್ ಹುಟ್ಟುಹಬ್ಬಕ್ಕಾಗಿ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಬಲಿಯಾದ ಯುವಕರ ಸಾವಿಗೆ ಯಾರು ಜವಾಬ್ದಾರರು?

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 08, 2024 | 11:14 AM

ಚಿತ್ರನಟರು ಅಥವಾ ಸೆಲಿಬ್ರಿಟಿಗಳು ಸಹ ಜವಾಬ್ದಾರಿಯನ್ನು ಪ್ರದರ್ಶಿಸಬೇಕಿರುವುದು ಅತ್ಯಂತ ಅವಶ್ಯಕವಾಗಿದೆ. ಅಭಿಮಾನದ ಭರದಲ್ಲಿ ಅತಿರೇಕಗಳನ್ನು ಪ್ರದರ್ಶಿಸಬೇಡಿ ಅಂತ ಅವರು ತಮ್ಮ ಅಭಿಮಾನಿಗಳಿಗೆ ಕೇವಲ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಮಾತ್ರ ಅಲ್ಲ, ಬೇರೆ ಸಮಯಗಳಲ್ಲೂ ಪದೇಪದೆ ಹೇಳುತ್ತಿದ್ದರೆ ಇಂಥ ಹುಚ್ಚು ಅಭಿಮಾನ ಕಡಿಮೆಯಾಗಿ ದುರಂತಗಳು ನಿಲ್ಲಬಹುದು.

ಗದಗ: ಇದು ಅಭಿಮಾನವೋ ಅಥವಾ ಮೂರ್ಖತನದ ಪರಮಾವಧಿಯೋ ಅರ್ಥವಾಗದು. ಇಂದು ಚಿತ್ರನಟ ಯಶ್ (actor Yash) ತಮ್ಮ 39 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸತ್ತಿದ್ದಾರೆ. ಆದರೆ, ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ (Suranagi village) ಸೂತಕ ಅವರಿಸಿದೆ. ಈ ಗ್ರಾಮದ ಮೂವರು ಯುವಕರು, ತಮ್ಮ ನೆಚ್ಚಿನ ನಟನ ಕಟೌಟ್ ಗಳನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದಾಗ ವಿದ್ಯತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ. ಮೃತರನ್ನು ನವೀನ್ (Naveen) (19), ಮುರಳಿ (Murali) (20) ಮತ್ತು ಹನುಮಂತ (Hanumantha) (21) ಎಂದು ಗುರುತಿಸಲಾಗಿದೆ. ಅದ್ಯಾವ ಮಹತ್ಸಾಧನೆಗಾಗಿ ಇವರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡು ಹೆತ್ತವರನ್ನು ಯಾವತ್ತೂ ಶಮನಗೊಳ್ಳದ ಶೋಕಕ್ಕೆ ಈಡು ಮಾಡಿದರೋ? ಅವರ ವಯಸ್ಸುಗಳನ್ನು ಗಮನಿಸಿ-19, 20 ಮತ್ತು 21. ಬಾಳಲು ಅವರ ಮುಂದೆ ಇಡೀ ಬದುಕಿತ್ತು. ಹೆತ್ತವರು ಯಾವೆಲ್ಲ ಆಸೆಗಳನ್ನು ಇವರ ಮೇಲಿಟ್ಟುಕೊಂಡಿದ್ದರೋ? ಎಲ್ಲವನ್ನೂ ಮಣ್ಣುಪಾಲು ಮಾಡಿ ತಾವೂ ಮಣ್ಣು ಸೇರಿದ್ದಾರೆ. ತಮ್ಮ ಮೆಚ್ಚಿನ ನಟನಿಗೆ ಇದರಿಂದ ಖುಷಿಯಾಗುತ್ತದೆಯೇ? ಟಿವಿ9 ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಶಾಸಕ ಚಂದ್ರು ಲಮಾಣಿ ಮೃತರ ಕುಟುಂಬಗಳನ್ನು ಭೇಟಿಯಾಗಿ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ