AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2005 ಪಾವಗಡ ಬಾಂಬ್​ ಬ್ಲಾಸ್ಟ್​ ಪ್ರಕರಣ: ನಾಲ್ವರು ಮಾಜಿ ನಕ್ಸಲ​ರು ಪೊಲೀಸರ ವಶಕ್ಕೆ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ನಾಲ್ವರು ಮಾಜಿ ನಕ್ಸಲರನ್ನು ಪಾವಗಡ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರಾದ ಹಿನ್ನೆಲೆಯಲ್ಲಿ ಪೊಲೀಸರು ಮಾಜಿ ನಕ್ಸಲರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

2005 ಪಾವಗಡ ಬಾಂಬ್​ ಬ್ಲಾಸ್ಟ್​ ಪ್ರಕರಣ: ನಾಲ್ವರು ಮಾಜಿ ನಕ್ಸಲ​ರು ಪೊಲೀಸರ ವಶಕ್ಕೆ
ಪಾವಗಡ ಪೊಲೀಸ್​ ಠಾಣೆ
ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ|

Updated on: Jan 08, 2024 | 11:09 AM

Share

ತುಮಕೂರು, ಜನವರಿ 08: ಪಾವಗಡ (Pavagad) ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ಸಂಭವಿಸಿದ್ದ ಸ್ಫೋಟ (Blast) ಪ್ರಕರಣದ ನಾಲ್ವರು ಮಾಜಿ ನಕ್ಸಲರನ್ನು (Naxal) ಪಾವಗಡ ಠಾಣೆ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರಾದ ಹಿನ್ನೆಲೆಯಲ್ಲಿ ಪೊಲೀಸರು ಮಾಜಿ ನಕ್ಸಲರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಪಾವಗಡ ತಾಲೂಕು ನ್ಯಾಯಾಲಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. 3-4 ಬಾರಿ ನ್ಯಾಯಾಲಯದ ​ವಿಚಾರಣೆಗೆ ಆರೋಪಿಗಳು ಗೈರಾಗಿ, ಆಂಧ್ರ ಪ್ರದೇಶದ ವಿವಿಧ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ನಾಲ್ವರನ್ನು ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಬಾಂಬ್​ ಬ್ಲಾಸ್ಟ್​ ಪ್ರಕರಣ

2005ರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಾದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಮತ್ತು ತಿರುಮಣಿಯಲ್ಲಿ ನಕ್ಸಲ್​ರ ಹಾವಳಿ ಹೆಚ್ಚಾದ ಹಿನ್ನೆಲ್ಲೆಯಲ್ಲಿ ವೆಂಕಟಮ್ಮನಹಳ್ಳಿಯಲ್ಲಿ 30 ಜನರ ಕೆಎಸ್​ಆರ್​ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು. 2005ರ ಸೆಪ್ಟೆಂಬರ್​ 10ರ ರಾತ್ರಿ 10:30ರ ಸುಮಾರಿಗೆ 300 ಜನ ನಕ್ಸಲ್​​ರು ಕೆಎಸ್​ಆರ್ಪಿ ತುಕುಡಿ ಮೇಲೆ ದಾಳಿ ಮಾಡಿದ್ದರು.

ಕಪ್ಪು ಮತ್ತು ಪಾಚಿ ಹಸಿರು ಸಮವಸ್ತ್ರದಲ್ಲಿ ಮೂರು ಟ್ರಕ್‌ಗಳಲ್ಲಿ ಮಹಿಳೆಯರೂ ಸೇರಿದಂತೆ 300 ಜನ ನಕ್ಸಲ್​ರು ಆಂದ್ರ ಪ್ರದೇಶದಿಂದ ಬಂದಿದ್ದರು. ಇವರಲ್ಲಿ 200 ಜನ ನಕ್ಸಲ್​ರು ಕೆಎಸ್​ಆರ್​ಪಿ ತುಕುಡಿ ತಂಗಿದ್ದ ಶಾಲೆಯೊಳೆಗೆ ನುಗ್ಗಿದರು. ಶರಣಾಗುವಂತೆ ಒತ್ತಾಯಿಸಿದರು. ಇನ್ನೂ 100 ಜನ ನಕ್ಸಲ್​ರು ಕಟ್ಟಡವನ್ನು ಸುತ್ತುವರೆದರು.

ಇದನ್ನೂ ಓದಿ: ತುಮಕೂರು: ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ಆಟವಾಡಿದ ಮಕ್ಕಳು, ಆಮೇಲೇನಾಯ್ತು?

ಬಳಿಕ ಪೊಲೀಸರು ಶರಣಾಗಿ ಹೊರ ಬರುತ್ತಿದ್ದಂತೆ ರಾಜೀವ್ ಎಂಬ ಪೊಲೀಸ್​ ಅಧಿಕಾರಿಯ ಎದೆಗೆ ನಕ್ಸಲ್​ರು ಗುಂಡು ಹಾರಿಸಿದರು. ಬಳಿಕ ಸ್ವಾಮಿ ಎಂಬ ಅಧಿಕಾರಿ ಮೇಲೆ ಗುಂಡು ಹಾರಿಸಿದರು. ಬಳಿಕ ಪೊಲೀಸರು ತಂಗಿದ್ದ ಶಾಲೆಯ ಮೇಲೆ ಗ್ರೆನೆಡ್​ ಬಾಂಬ್​ ದಾಳಿ ಮಾಡಿದರು. ಈ ವೇಳೆ ಕೂಡ ಹಲವು ಅಧಿಕಾರಿಗಳು ಪ್ರಾಣ ಬಿಟ್ಟರು. ಆರ್‌ಎಸ್‌ಐ ಕಾಲವಾಡ, ಹೆಡ್‌ಕಾನ್ಸ್‌ಟೇಬಲ್‌ಗಳಾದ ಸಿದ್ದರಾಮಣ್ಣ, ಜಯರಾಮ್, ರಾಜೀವ್ ಮತ್ತು ಚಿಕ್ಕನರಸಯ್ಯ ಮತ್ತು ಕಾನ್‌ಸ್ಟೆಬಲ್ ವೆಂಕಟೇಶ್ ಮೃತ ಪೊಲೀಸರು.

ಈ ಘಟನೆ ನಡೆಯುವ ಮುನ್ನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್​ ಸಹಚರು ಮೃತಪಟ್ಟಿದ್ದರು. ಇದರ ಪ್ರತೀಕಾರ ತೀರಿಸಿಕೊಳ್ಳಲು ಈ ಹತ್ಯೆಗಳನ್ನು ಮಾಡಿದರು ಎನ್ನಲಾಗಿತ್ತು. ಘಟನೆ ಸಂಬಂಧ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ