ಬೆಂಗಳೂರು, (ಅಕ್ಟೋಬರ್ 17): ಕರ್ನಾಟಕದಲ್ಲಿ (Karnataka) ಪ್ರತಿದಿನ ಒಂದಲ್ಲ ಒಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಅದರಂತೆ ಇಂದು(ಅಕ್ಟೋಬರ್ 17) ರಾಜ್ಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳ ಜೊತೆಗೆ ಕಾವೇರಿ ನೀರಿಗಾಗಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ, ದಸರಾ ಕಾರ್ಯಕ್ರಮಗಳು ಸೇರಿದಂತೆ ಪ್ರಮುಖ ಬೆಳವಣಿಗೆಗಳತ್ತ ಗಮನಹರಿಸೋಣ. ಹಾಗಾದ್ರೆ ಇಂದು ರಾಜ್ಯದಲ್ಲಿ ಏನೆಲ್ಲಾ ಬೆಳವಣಿಗೆಗಳಿವೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysuru Dasara 2023) ಮೂರನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಲಲಿತಕಲೆ ಹಾಗೂ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಕಾವ್ಯ ಸಂಭ್ರಮ, ಹಾಸ್ಯ ಚುಟುಕು ಕಾರ್ಯಕ್ರಮ ನಡೆಯಲಿದ್ದು ಸಾಹಿತಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ (Talacauvery Theerthodbhava) ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕಾವೇರಿ, ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವ ನಡೆಯಲಿದೆ. ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಬಿಜೆಪಿ-ದಳದ ಮೈತ್ರಿಯಿಂದ ಮುನಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇದೀಗ ಹೊಸದೊಂದು ದಾಳ ಉರುಳಿಸಿದ್ದಾರೆ. ಸಿಎಂ ಇಬ್ರಾಹಿಂ ಜೆಡಿಎಸ್‌ನಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಪಕ್ಷ ತೊರೆಯಬಹುದು ಎನ್ನಲಾಗಿತ್ತು. ಅದ್ರೆ ಇದೀಗ ಸಿಎಂ ಇಬ್ರಾಹಿಂ ಶುರುಮಾಡಿರುವ ಹೊಸ ಆಟ ದಳಪತಿಗಳಿಗೆ ಸವಾಲ್ ಎಸೆದಿದೆ. ನಮ್ಮದೇ ಒರಿಜಿನಲ್ ಜೆಡಿಎಸ್ ಬಿಜೆಪಿಗೆ ಬೆಂಬಲ ಇಲ್ಲ ಎಂದಿರುವ ಇಬ್ರಾಹಿಂ, ನಾನೇ ರಾಜ್ಯಾಧ್ಯಕ್ಷ.. ನಾನೇಕೆ ಪಕ್ಷ ಬಿಡಲಿ. ನಾನು ಪಕ್ಷ ಬಿಡಲ್ಲ, ಬಿಜೆಪಿ ಜೊತೆಗೂ ಹೋಗಲ್ಲ ಶಾಸಕರ ನಿರ್ಧಾರ ಏನು ಕಾದು ನೋಡಿ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಜೆಡಿಎಸ್ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಇನ್ನು ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಸಿಕ್ಕ ಒಟ್ಟು 80 ಕೋಟಿ ರೂಪಾಯಿ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇದನ್ನು ಪ್ರಕರಣವನ್ನ ಸಿಬಿಐ ತನಿಖೆಗೆ ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಮಾಜಿ ಸಚಿವರಾದ ಆರ್. ಅಶೋಕ್, ಸಿ.ಎನ್ ಅಶ್ವತ್ಥ ನಾರಾಯಣ್, ಕೆ. ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬೆಂಗಳೂರಿನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಾಜಿ ಮೇಯರ್, ಬಿಬಿಎಂಪಿ ಮಾಜಿ ಸದಸ್ಯರುಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ನಡೆದ ಐಟಿ ದಾಳಿಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ತನಿಖೆ ಚುರುಕುಕೊಂಡಿದೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಸಿಕ್ಕ 45 ಕೋಟಿ ಹಣ ಮತ್ತು ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ 40ಕೋಟಿಗೂ ಹೆಚ್ಚು ಹಣ ಸೇರಿ ಒಟ್ಟಾರೆ 80 ಕೋಟಿ ಹಣ ಯಾರಿಗೆ ಸೇರಿದ್ದು ಅನ್ನೋ ಪ್ರಶ್ನೆ ಎದುರಾಗಿದೆ. ಆದಾಯ ತೆರಿಗೆ ಇಲಾಖೆ ಈಗಾಗ್ಲೇ ಅಂಬಿಕಾಪತಿ ಪುತ್ರ ಪ್ರದೀಪ್ ಮತ್ತು ಬಿಲ್ಡರ್ ಸಂತೋಷ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಇಂದು ಇಬ್ಬರನ್ನು ವಿಚಾರಣೆಗೊಳಪಡಿಸಲಿದೆ.
ಕಾವೇರಿಗಾಗಿ ಬುಧವಾರ(ಅ.18) ರಾಷ್ಟ್ರರಾಜಧಾನಿಯಲ್ಲಿ ಕನ್ನಡಿಗರ ಕೂಗು ಪ್ರತಿಧ್ವನಿಸಲಿದೆ. ನದಿ ನೀರು ಹಂಚಿಕೆ ಸಂಬಂಧ ಶಾಶ್ವತ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಬಳಿಕ ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಕರವೇ ಕಾರ್ಯಕರ್ತರು ಕೆಲವರು ವಿಮಾನದ ಮೂಲಕ ನವದೆಹಲಿಗೆ ಪ್ರಯಾಣಿಸಲಿದ್ದು, ಈಗಾಗಲೇ ಹಲವರು ವಿಮಾನಗಳ ಮೂಲಕ ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ.
ನೀರಿಲ್ಲದೆ ಬೆಳೆಯನ್ನೇ ನಾಶ ಮಾಡ್ತಿರೋ ರೈತ ಒಂದೆಡೆಯಾದರೆ, ಇನ್ನೊಂದೆಡೆ ಕರೆಂಟ್ ಇಲ್ಲದೆ ಕಂಗಾಲಾಗಿರೋ ಅನ್ನದಾತರು ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕುತ್ತಿದ್ದಾರೆ. ಕರೆಂಟ್ ಕಣ್ಣಾಮುಚ್ಚಾಲೆ ವಿರುದ್ಧ ರಾಜ್ಯದ ಉದ್ದಗಲಕ್ಕೂ ರೈತರು ರೊಚ್ಚಿಗೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ನಾಯಕರು ಸರ್ಕಾರ ವಿರುದ್ಧ ವಾಕ್ಸಮರ ನಡೆಸಿದ್ದಾರೆ.