ನಿಮ್ಮ ಸುಖ-ದುಃಖವೇ ನಮ್ಮ ಸುಖ-ದುಃಖ: ಮುಷ್ಕರ ಬಿಟ್ಟು ಸೇವೆಗೆ ಮರಳಿ -ಸಾರಿಗೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್
ನಿಮ್ಮ ಸುಖ ದುಖ ನಮ್ಮ ಸುಖ ದುಖವಿದ್ದಂತೆಯೇ, ಎಲ್ಲಾ ಉದ್ಯೋಗಿಗಳು ದಯವಿಟ್ಟು ಮುಷ್ಕರ ಬಿಟ್ಟು ಮರಳಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಬೆಂಗಳೂರು: ಸಾರಿಗೆ ಸಿಬ್ಬಂದಿಗಳ ಮುಷ್ಕರಕ್ಕೆ ಪ್ರಚೋದನೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದರು. ಬಸ್ ಅಥವಾ ಸಾರಿಗೆ ಇಲಾಖೆಯ ಯಾವುದೇ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಾಟ ಮಾಡಿದವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಸುಖ-ದು:ಖ ನಮ್ಮ ಸುಖ-ದು:ಖವಿದ್ದಂತೆಯೇ, ಎಲ್ಲಾ ಉದ್ಯೋಗಿಗಳು ದಯವಿಟ್ಟು ಮುಷ್ಕರ ಬಿಟ್ಟು ಮರಳಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
KSRTC ಸಂಸ್ಥೆಯನ್ನು ಬಹಳ ಶ್ರಮದಿಂದ ಕಟ್ಟಲಾಗಿದೆ. ಚಾಲಕ, ನಿರ್ವಾಹಕರ ಶ್ರಮವೂ ಬಹಳಷ್ಟು ಇದೆ. ಸಾರಿಗೆ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಪ್ರತಿಭಟನೆ ಮಾಡುತ್ತಿಲ್ಲ. ನಾವು ಚರ್ಚಿಸಿ ಸಾಧಕ-ಬಾಧಕಗಳು ನೋಡಬೇಕು. ಆದರೆ ಈ ರೀತಿ ಮುಷ್ಕರ ಎಂದೂ ಆಗಿರಲಿಲ್ಲ. ಫೆಬ್ರವರಿ, ಮಾರ್ಚ್‌ನಲ್ಲಿ ಹಲವು ಸಮಿತಿಗಳ ಜತೆ ಚರ್ಚೆ ನಡೆಸಿದ್ದೇವೆ. 2000ದಲ್ಲಿ ಶೇ 10ರಷ್ಟು ಸಂಬಳ ಹೆಚ್ಚಿಸಲಾಗಿತ್ತು. 2004ರಲ್ಲಿ ಶೇ 5ರಷ್ಟು, 2008ರಲ್ಲಿ ಶೇ 6ರಷ್ಟು ಹೆಚ್ಚಳ ಮಾಡಲಾಗಿದೆ. 2012ರಲ್ಲಿ ಶೇಕಡಾ 6ರಷ್ಟು ಸಂಬಳ ಹೆಚ್ಚಿಸಲಾಗಿತ್ತು. 2016ರಲ್ಲಿ ಶೇ 12ರಷ್ಟು ಸಂಬಳ ಹೆಚ್ಚಿಸಲಾಗಿತ್ತು ಎಂದು ಬೆಂಗಳೂರಿನಲ್ಲಿ ಅಂಜುಂ ಪರ್ವೇಜ್ ಹೇಳಿದರು.
ವಸತಿ ಗೃಹದಲ್ಲಿರುವ ಸಿಬ್ಬಂದಿಗೆ ನೋಟಿಸ್
ಇದೇ ವೇಳೆ ವಸತಿ ಗೃಹಗಳಲ್ಲಿರುವ ಸಾರಿಗೆ ನೌಕರರಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಬಿಎಂಟಿಸಿ, ಕೆಎಸ್ಆರ್ಟಿಸಿ ಸಿಬ್ಬಂದಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ವಸತಿ ಗೃಹದಲ್ಲಿದ್ದು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ತೆರವುಗೊಳಿಸಿ ಎಂದು ಶಾಂತಿನಗರ, ಕನ್ನಳ್ಳಿಯ ಡಿಪೋ-35 ಸೇರಿದಂತೆ ನಗರದ ಬಹುತೇಕ ಡಿಪೋ ನೌಕರರಿಗೆ ಮನೆ ಬಾಗಿಲಿಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.
ಖಾಸಗಿಯವರಿಗೂ ದರ ನಿಗದಿ
ಖಾಸಗಿಯವರಿಗೂ KSRTC, BMTC ಹಾಲಿ ದರ ನಿಗದಿಪಡಿಸಲಾಗಿದೆ. ಖಾಸಗಿ ಬಸ್ಗಳ ಮಾಲೀಕರು ಇದಕ್ಕೆ ಒಪ್ಪಿಕೊಂಡಿದ್ದಾರೆ. 2,300 ಬಸ್ಗಳನ್ನು ಖಾಸಗಿಯವರಿಂದ ಪಡೆಯಲಾಗಿದೆ. ಮಿನಿ ಬಸ್, ಮ್ಯಾಕ್ಸಿ ಕ್ಯಾಬ್ಸ್, ಶಾಲಾ ವಾಹನಗಳು, ಆ್ಯಕ್ಸೆಲ್ ಬಸ್ಗಳನ್ನು ಖಾಸಗಿಯವರಿಂದ ಪಡೆದಿದ್ದೇವೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ತಿಳಿಸಿದರು.
ಇದನ್ನೂ ಓದಿ: ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ನೆನಪು ಮಾಡ್ಕೊಳಿ: ಸಂಸದ ಪ್ರತಾಪ್ಗೆ ಸಾರಿಗೆ ನೌಕರರಿಂದ ಟಕ್ಕರ್
ಮುಷ್ಕರ ಕೈ ಬಿಡಿ ಇಲ್ಲವಾದ್ರೆ ಮನೆ ಖಾಲಿ ಮಾಡಿ: ಸಾರಿಗೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ನೋಟಿಸ್