ಚಿಕ್ಕಬಳ್ಳಾಪುರ: ರಾಜ್ಯ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುವುದಾಗಿ ಸಚಿವ ಮುನಿರತ್ನ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮೊಕದ್ದಮೆ ಹಾಕುವುದಕ್ಕೆ ಯಾರಿಗಿದೆ ಮಾನ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಜೊತೆಗೆ ಪ್ರಧಾನಿಯಿಂದ ಹಿಡಿದು ಯಾರಿಗೂ ಮಾತನಾಡುವ ನೈತಿಕತೆ ಇಲ್ಲ. ಕಮಿಷನ್ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್- ಬಿಜೆಪಿಯ ಯಾರಿಗೂ ನೈತಿಕತೆ ಇಲ್ಲ ಎಂದಿದ್ದರು. ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ವ್ಯವಹಾರ ಏನೂ ಇರಲಿಲ್ಲ ಎಂದಿದ್ದರು. ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಸಾರಿಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿರುವ ಶ್ರೀರಾಮುಲು ಅವರು ಭೂತದ ಬಾಯಲ್ಲಿ ಭಗವದ್ಗೀತೆ ಮಾತಾಡಿದಂತೆ ಎಚ್ ಡಿ ಕೆ ಮಾತನಾಡುತ್ತಾರೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಏನು ಸತ್ಯ ಹರಿಶ್ಚಂದ್ರರಾ..? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಭ್ರಷ್ಟಾಚಾರಗಳನ್ನ ಬಿಜೆಪಿ ಸರ್ಕಾರ ಪ್ಯಾಚ್ ಅಪ್ ಮಾಡ್ತಿದೆ!
ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯವನ್ನ ಲೂಟಿ ಮಾಡೋ ಕೆಲಸ ಮಾಡಿದ್ದಾರೆ. ಅವರು ಮಾಡಿದ ಭ್ರಷ್ಟಾಚಾರಗಳನ್ನ ಬಿಜೆಪಿ ಸರ್ಕಾರ ಪ್ಯಾಚ್ ಆಫ್ ಮಾಡ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರರದ್ದು ಸ್ವಂತ ಹೇಳೀಕೆನಾ? ಇಲ್ಲ, ಪ್ರಚೋದನಕಾರಿ ಹೇಳಿಕೆನಾ ಸ್ಪಷ್ಟಪಡಿಸಿ. ಯಾವುದಾದರೂ ದಾಖಲೆಗಳು ಇದ್ರೆ ಗುತ್ತಿಗೆದಾರರು ಬಹಿರಂಗಪಡಿಸಲಿ. ಸುಖಾಸುಮ್ಮನೆ ಮಂತ್ರಿಗಳು ಹಾಗೂ ಸರ್ಕಾರದ ಮೇಲೆ ಆರೋಪ ಸರಿಯಲ್ಲ. ಎಲ್ಲೋ ಒಂದು ಕಡೆ ಸರ್ಕಾರ, ಸಿಎಂ ಗೆ ಕೆಟ್ಟ ಹೆಸರು ತರುವ ಪ್ರಯತ್ನ ಇದಾಗಿದೆ. ಬೇರೆಯವರು ಹೇಳಿಕೊಟ್ಟಿದ್ದನ್ನ ಹೇಳುವ ಕೆಲಸ ಆಗುತ್ತಿದೆ ಎಂದು ಶ್ರೀರಾಮುಲು ವ್ಯಾಖ್ಯಾನಿಸಿದರು.
Published On - 7:24 pm, Thu, 25 August 22