ತುಮಕೂರಿನಲ್ಲಿ ಒಂದೇ ದಿನ 3 ಶಿಕ್ಷಕರು ಕೊರೊನಾದಿಂದ ನಿಧನ, 85 ಪೊಲೀಸರಿಗೆ ಸೋಂಕು ದೃಢ, 18 ಬಡಾವಣೆಗಳು ಹಾಟ್​ಸ್ಪಾಟ್

| Updated By: Lakshmi Hegde

Updated on: Apr 29, 2021 | 3:38 PM

ತುಮಕೂರಿನ 18 ಬಡಾವಣೆಗಳು ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಸ್ಥಳಗಳನ್ನು ಜಿಲ್ಲಾಡಳಿತದ ವತಿಯಿಂದ ಗುರುತು ಮಾಡಲಾಗಿದೆ. 50ಕ್ಕೂ ಹೆಚ್ಚು ಕೊವಿಡ್ ಪ್ರಕರಣಗಳಿರುವ ಬಡಾವಣೆಗಳಾದ ಅಶೋಕನಗರ, ಮಾರುತಿನಗರ, ಭೀಮಸಂದ್ರ, ಚಿಕ್ಕಪೇಟೆ ಅಗ್ರಹಾರ, ವಿನೋಭನಗರ, ಎಸ್‌ಐಟಿ, ಎಸ್ಎಸ್​ಪುರ ಸೇರಿದಂತೆ 18 ಬಡಾವಣೆಗಳ‌ನ್ನು ಗುರುತು ಮಾಡಲಾಗಿದೆ.

ತುಮಕೂರಿನಲ್ಲಿ ಒಂದೇ ದಿನ 3 ಶಿಕ್ಷಕರು ಕೊರೊನಾದಿಂದ ನಿಧನ, 85 ಪೊಲೀಸರಿಗೆ ಸೋಂಕು ದೃಢ, 18 ಬಡಾವಣೆಗಳು ಹಾಟ್​ಸ್ಪಾಟ್
ಸಾಂದರ್ಭಿಕ ಚಿತ್ರ
Follow us on

ತುಮಕೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭಯದ ವಾತಾವರಣ ಸೃಷ್ಟಿಸಿದ್ದು ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ನಂತರ ತುಮಕೂರು ಜಿಲ್ಲೆಯಲ್ಲೂ ಆತಂಕದ ಛಾಯೆ ಕವಿದಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಒಂದೇ ದಿನ ಮೂವರು ಸರ್ಕಾರಿ ಶಿಕ್ಷಕರು ಸೋಂಕಿನಿಂದ ಮೃತಪಟ್ಟಿರುವುದು ಆತಂಕ ಸೃಷ್ಟಿಸಿದೆ. ಉಜ್ಜನಿ ಪ್ರೌಢಶಾಲೆಯ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯ ಪ್ರೌಢಶಾಲೆಯ ಪರಮೇಶ್ವರ ಆಚಾರ್, ತುರುಗುನೂರು ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಪ್ಪ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.

ಇನ್ನೊಂದೆಡೆ ಜಿಲ್ಲೆಯಲ್ಲಿ 85 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಲ್ಲಿ ಆತಂಕ ಹುಟ್ಟುಹಾಕಿದೆ. ಜಯನಗರ ಪೊಲೀಸ್ ಠಾಣೆಯ 10, ಕ್ಯಾತಸಂದ್ರ ಪೊಲೀಸ್ ಠಾಣೆಯ 5 ಸಿಬ್ಬಂದಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಡಿಎಆರ್ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೋಂಕು ತಗುಲಿದೆ. ದುರದೃಷ್ಟವಶಾತ್ ಕೆಲ ಪೊಲೀಸರಿಗೆ ಆಕ್ಸಿಜನ್ ಬೆಡ್ ಕೂಡಾ ಸಿಗದೇ ಒದ್ದಾಡುವ ಪರಿಸ್ಥಿತಿ ಎದುರಾಗಿದ್ದು, ಜನರನ್ನು ರಕ್ಷಣೆ ಮಾಡುವ ಪೊಲೀಸರು ಕರ್ತವ್ಯಕ್ಕೆ ಹಾಜರಾಗಲು ಹಿಂದೆಮುಂದೆ ಯೋಚಿಸುವಂತಾಗಿದೆ.

ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ಒಂದೇ ದಿನ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಗ್ರಾಮದ 60 ವರ್ಷದ ವೃದ್ಧ ಲಕ್ಷ್ಮೀನರಸಯ್ಯ ಹಾಗೂ ಇನ್ನೋರ್ವ ಯುವತಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದು ಭಯದ ವಾತಾವರಣ ಮೂಡಿಸಿದೆ. ಮೃತ ವೃದ್ಧ ವಾರದ ಹಿಂದಷ್ಟೇ ಕೊವಿಡ್ ವ್ಯಾಕ್ಸಿನ್ ಪಡೆದಿದ್ದು ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರಿನ 18 ಬಡಾವಣೆಗಳು ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಸ್ಥಳಗಳನ್ನು ಜಿಲ್ಲಾಡಳಿತದ ವತಿಯಿಂದ ಗುರುತು ಮಾಡಲಾಗಿದೆ. 50ಕ್ಕೂ ಹೆಚ್ಚು ಕೊವಿಡ್ ಪ್ರಕರಣಗಳಿರುವ ಬಡಾವಣೆಗಳಾದ ಅಶೋಕನಗರ, ಮಾರುತಿನಗರ, ಭೀಮಸಂದ್ರ, ಚಿಕ್ಕಪೇಟೆ ಅಗ್ರಹಾರ, ವಿನೋಭನಗರ, ಎಸ್‌ಐಟಿ, ಎಸ್ಎಸ್​ಪುರ ಸೇರಿದಂತೆ 18 ಬಡಾವಣೆಗಳ‌ನ್ನು ಗುರುತು ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು ತುಮಕೂರು ನಗರದಲ್ಲೇ 5,336 ಸೋಂಕಿತರಿರುವುದರಿಂದ ಆರೋಗ್ಯ ಇಲಾಖೆ ಹೆಚ್ಚಿನ‌ ನಿಗಾವಹಿಸಿದೆ.

ಇದನ್ನೂ ಓದಿ:
ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ; ಮರಣ ಪ್ರಮಾಣದಲ್ಲಿ 3ನೇ ಸ್ಥಾನ 

ಕೊರೊನಾ ಸೋಂಕಿಗೆ ತಾಯಿ ಬಲಿ; ವಿಷಯ ತಿಳಿದು 19 ವರ್ಷದ ಮಗಳು ಎದೆನೋವಿಗೆ ಬಲಿ