ಕೊರೊನಾ ಸೋಂಕಿಗೆ ತಾಯಿ ಬಲಿ; ವಿಷಯ ತಿಳಿದು 19 ವರ್ಷದ ಮಗಳು ಎದೆನೋವಿಗೆ ಬಲಿ
ಕೊರೊನಾ ಸೋಂಕಿಗೆ ತುತ್ತಾಗಿದ್ದ 45 ವರ್ಷದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ನಿನ್ನೆ ಮಧ್ಯಾಹ್ನದ ವೇಳೆಗೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಬಳಿಕ ತಾಯಿ ಮೃತಪಟ್ಟ ಸುದ್ದಿಯನ್ನು 19 ವರ್ಷದ ಮಗಳಿಗೆ ತಿಳಿಸಿದ ಆಕೆಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.
ತುಮಕೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರ್ಭಟ ಮುಂದುವರೆದಿದ್ದು ದಿನೇದಿನೇ ಸೋಂಕಿತರ ಸಂಖ್ಯೆ ಉಲ್ಬಣ ಆಗುತ್ತಿದೆ. ಕಳೆದ ಬಾರಿಗಿಂತಲೂ ಗಂಭೀರ ಸ್ವರೂಪಕ್ಕೆ ತಿರುಗಿರುವ ರೂಪಾಂತರಿ ವೈರಾಣು ಯುವ ಸಮುದಾಯವನ್ನೂ ಎಡೆಬಿಡದೇ ಕಾಡುತ್ತಿದೆ. ಕೆಲವೆಡೆ ಒಂದೇ ಕುಟುಂಬದ ಹಲವರನ್ನು ಬಲಿ ಪಡೆಯುತ್ತಿರುವ ಕೊವಿಡ್ 19 ಎಲ್ಲರ ಕರುಳು ಹಿಂಡುತ್ತಿದೆ. ತುಮಕೂರಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದ್ದು ಕೊರೊನಾ ಸೋಂಕಿನಿಂದ ತಾಯಿ ಮೃತಪಟ್ಟ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಗಳು ಸಹ ಸಾವನಪ್ಪಿದ್ದಾಳೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ 45 ವರ್ಷದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ನಿನ್ನೆ ಮಧ್ಯಾಹ್ನದ ವೇಳೆಗೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಬಳಿಕ ತಾಯಿ ಮೃತಪಟ್ಟ ಸುದ್ದಿಯನ್ನು 19 ವರ್ಷದ ಮಗಳಿಗೆ ತಿಳಿಸಿದ ಆಕೆಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಮಗಳು ವಿಶೇಷ ಚೇತನಳಾಗಿದ್ದಳು ಎನ್ನಲಾಗಿದ್ದು, ಆಕೆಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ತುಮಕೂರಿನಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
20 ವರ್ಷದ ಯುವತಿ ಸಾವು ತುಮಕೂರು ತಾಲ್ಲೂಕಿನ ಕುಚ್ಚಂಗಿ ಗ್ರಾಮದಲ್ಲಿ ಕೊರೊನಾ ಸೋಂಕಿಗೆ 20 ವರ್ಷದ ಯುವತಿ ಮೃತಪಟ್ಟಿದ್ದಾರೆ. ರೇಖಾ ಎಂಬ ಯುವತಿ ಮೃತ ದುರ್ದೈವಿಯಾಗಿದ್ದು, ತುಮಕೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿ ಆಸ್ಪತ್ರೆ ಗೆ ದಾಖಲಿಸುವಷ್ಟರಲ್ಲಿ ಸಾವಿಗೀಡಾಗಿದ್ದಾರೆ. ಯುವತಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು ಎನ್ನಲಾಗಿದ್ದು, ಚಿಕಿತ್ಸೆ ಸಿಗುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
ಹಸೆಮಣೆ ಏರಬೇಕಾಗಿದ್ದ ಯುವಕ ಕೊರೊನಾ ಸೋಂಕಿಗೆ ಬಲಿ ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೇವರಕೊಡಿಗೆಯಲ್ಲಿ ಇಂದು (ಏಪ್ರಿಲ್ 29) ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಕೊರೊನಾ ಸೋಂಕಿನಿಂದ ದುರಂತ ಅಂತ್ಯ ಕಂಡಿದ್ದು ಇಡೀ ಊರಿನಲ್ಲಿ ಶೋಕ ಮಡುಗಟ್ಟಿದೆ. ದೇವರಕೊಡಿಗೆ ಗ್ರಾಮದ 32 ವರ್ಷದ ಪೃಥ್ವಿರಾಜ್ ಎಂಬ ಯುವಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಇಂದು ಮದುವೆಯಾಗಬೇಕಿದ್ದ ಪೃಥ್ವಿರಾಜ್ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್ ಕೊರೊನಾ ಸೋಂಕಿನ ತೀವ್ರತೆಗೆ ಸಿಕ್ಕು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿವಾಹ ಕಾರ್ಯಕ್ರಮದ ನಿಮಿತ್ತ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲಿ ಕೊರೊನಾದಿಂದಾಗಿ ಸೂತಕ ಆವರಿಸಿದ್ದು, ಯುವಕನ ಸಾವಿಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಮೊದಲನೇ ಅಲೆಯಲ್ಲಿ ವಯೋವೃದ್ಧರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಮಾತ್ರ ಪ್ರಾಣಾಪಾಯ ಸೃಷ್ಟಿಸುತ್ತಿದ್ದ ಕೊರೊನಾ ವೈರಾಣು ಇದೀಗ ಆರೋಗ್ಯವಂತ ಯುವಕರ ಸಾವಿಗೂ ಕಾರಣವಾಗುತ್ತಿರುವುದು ವೈದ್ಯಕೀಯ ವಲಯದಲ್ಲಿ ಆತಂಕ ಮೂಡಿಸಿದೆ.
Published On - 8:55 am, Thu, 29 April 21