ಹಸೆಮಣೆ ಏರಬೇಕಾಗಿದ್ದ ದಿನವೇ ಮದುಮಗನನ್ನು ಬಲಿಪಡೆದ ಕೊರೊನಾ; ಸಂಭ್ರಮದ ಬದಲು ಸೂತಕ
ಇಂದು ಮದುವೆಯಾಗಬೇಕಿದ್ದ ಪೃಥ್ವಿರಾಜ್ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್ ಕೊರೊನಾ ಸೋಂಕಿನ ತೀವ್ರತೆಗೆ ಸಿಕ್ಕು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆ ಗಂಭೀರ ಸ್ವರೂಪ ಪಡೆದಿದ್ದು ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಆತಂಕ ಸೃಷ್ಟಿಸುತ್ತಿದೆ. ಈ ಬಾರಿ ಯುವಕರನ್ನೂ ಕಾಡುತ್ತಿರುವ ಕೊರೊನಾ ಹಲವರನ್ನು ಸಾವಿನ ದವಡೆಗೆ ನೂಕಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೇವರಕೊಡಿಗೆಯಲ್ಲಿ ಇಂದು (ಏಪ್ರಿಲ್ 29) ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಕೊರೊನಾ ಸೋಂಕಿನಿಂದ ದುರಂತ ಅಂತ್ಯ ಕಂಡಿದ್ದು ಇಡೀ ಊರಿನಲ್ಲಿ ಶೋಕ ಮಡುಗಟ್ಟಿದೆ. ದೇವರಕೊಡಿಗೆ ಗ್ರಾಮದ 32 ವರ್ಷದ ಪೃಥ್ವಿರಾಜ್ ಎಂಬ ಯುವಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಇಂದು ಮದುವೆಯಾಗಬೇಕಿದ್ದ ಪೃಥ್ವಿರಾಜ್ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಆದರೆ, ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್ ಕೊರೊನಾ ಸೋಂಕಿನ ತೀವ್ರತೆಗೆ ಸಿಕ್ಕು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿವಾಹ ಕಾರ್ಯಕ್ರಮದ ನಿಮಿತ್ತ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲಿ ಕೊರೊನಾದಿಂದಾಗಿ ಸೂತಕ ಆವರಿಸಿದ್ದು, ಯುವಕನ ಸಾವಿಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಮೊದಲನೇ ಅಲೆಯಲ್ಲಿ ವಯೋವೃದ್ಧರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಮಾತ್ರ ಪ್ರಾಣಾಪಾಯ ಸೃಷ್ಟಿಸುತ್ತಿದ್ದ ಕೊರೊನಾ ವೈರಾಣು ಇದೀಗ ಆರೋಗ್ಯವಂತ ಯುವಕರ ಸಾವಿಗೂ ಕಾರಣವಾಗುತ್ತಿರುವುದು ವೈದ್ಯಕೀಯ ವಲಯದಲ್ಲಿ ಆತಂಕ ಮೂಡಿಸಿದೆ.
ನಿರ್ಮಾಪಕ ಚಂದ್ರಶೇಖರ್ ನಿಧನ ಕನ್ನಡ ಚಿತ್ರರಂಗದ ಮೇಲೂ ಕೊರೊನಾ ಕರಿನೆರಳು ಬಿದ್ದು ಸೂತಕದ ಛಾಯೆ ಆವರಿಸಿದೆ. ರನ್ನ, ಅಣ್ಣಯ್ಯ, ಬಿಂದಾಸ್ ಸಿನಿಮಾ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 23 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಮಣಿಪಾಲ್ ಸೆಂಟರ್ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಶೇಖರ್ ಅವರಿಗೆ ಕೊರೊನಾ ವಾಸಿಯಾಗಿತ್ತಾದರೂ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿತ್ತು. ಪರಿಣಾಮವಾಗಿ ಇಂದು (ಏ.29) ಮುಂಜಾನೆ ಸುಮಾರು 3-4 ಗಂಟೆಯ ವೇಳೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ನಿಮಿಷಾಂಬ ಪ್ರೊಡಕ್ಷನ್ಸ್ ನಿರ್ಮಾಪಕ ಚಂದ್ರಶೇಖರ್ ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರೊಂದಿಗೆ ಹೊಸ ಸಿನಿಮಾವೊಂದನ್ನು ಘೋಷಿಸಿದ್ದರು. ಆದರೆ, ಕೊರೊನಾ ಸೋಂಕಿಗೆ ತುತ್ತಾಗಿ ನಂತರ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡ ಕಾರಣ ಚಿಕಿತ್ಸೆ ಫಲಕಾರಿಯಾಗಿದೆ ಅರ್ಧದಾರಿಯಲ್ಲೇ ತಮ್ಮ ಪಯಣ ಮುಗಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ನಿರ್ಮಾಪಕ ಕೋಟಿ ರಾಮು ಸಹ ಕೊರೊನಾ ಸೋಂಕಿನಿಂದ ನಿಧನರಾಗಿದ್ದು ಅವರ ಸಾವಿನ ಬೆನ್ನಲ್ಲೇ ಕನ್ನಡ ಚಿತ್ರರಂಗದ ಮತ್ತೊಬ್ಬ ಅನ್ನದಾತನನ್ನು ಕೊವಿಡ್ ಕಿತ್ತುಕೊಂಡಿದೆ. ಕೊರೊನಾ ಸೋಂಕಿನ ಎರಡನೇ ಅಲೆ ಗಂಭೀರವಾಗಿದ್ದು ಸೋಂಕಿನ ತೀವ್ರತೆಯಿಂದ ಅನೇಕರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಯುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ರನ್ನ, ಅಣ್ಣಯ್ಯ, ಬಿಂದಾಸ್ ಸಿನಿಮಾ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ
ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಸಿಗದ ಬೆಡ್: 28 ವರ್ಷದ ಯುವಕ ಸಾವು