ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ಪೂರ್ಣ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದ ಶಿಕ್ಷಕನ ಮೇಲೆ ಪೋಕ್ಸೊ ಪ್ರಕರಣ ದಾಖಲು
ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ಪೂರ್ಣ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದ ಗಣಿತ ಶಿಕ್ಷಕನ ಮೇಲೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾದ ಘಟನೆ ನಡೆದಿದೆ.
ತುಮಕೂರು: ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ಪೂರ್ಣ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದ ಗಣಿತ ಶಿಕ್ಷಕ(Maths Teacher)ನ ಮೇಲೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ(Chikkanayakanahalli) ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾದ ಘಟನೆ ನಡೆದಿದೆ. ತಾಲೂಕಿನ ಗೋಡೆಕೆರೆ ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ಹೆಚ್.ಎಸ್ ರವಿ ಎಂಬಾತ ಅತಿಯಾದ ಹೋಮ್ ವರ್ಕ್ ಕೊಟ್ಟು, ವರ್ಕ್ ಪೂರ್ಣ ಮಾಡದೇ ಇದ್ದರೆ ಕಿರುಕುಳ ಕೊಡುತ್ತಿದ್ದನಂತೆ. ಈ ಹಿನ್ನಲೆ ಮಕ್ಕಳು ಪೋಷಕರ ಬಳಿ ‘ಶಿಕ್ಷಕರು ಕಿರುಕುಳ ಕೊಡುತ್ತಾರೆ ಶಾಲೆಗೆ ಹೋಗುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ಕೂಡಲೇ ಪೋಷಕರು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರೌಢಶಾಲೆಯಲ್ಲಿ ಶಿಕ್ಷಕನೊಬ್ಬ ಸಹ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಬಳಿಕ ಸಂತ್ರಸ್ಥ ಸಹ ಶಿಕ್ಷಕಿ ಈ ಕುರಿತು ಆತನಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಆತ ಬದಲಾಗಲಿಲ್ಲ, ಈ ಕಾರಣ ಡಿಡಿಪಿಐಗೆ ದೂರು ನೀಡಿದ್ದರು. ನಂತರ ಈ ಕುರಿತು ಡಿಡಿಪಿಐ ತನಿಖೆ ನಡೆಸಿ, ಆ ಶಿಕ್ಷಕನನ್ನ ಅಮಾನತು ಮಾಡಿದ್ದರು.
ಇದನ್ನೂ ಓದಿ:ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಇನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನನ್ನ ಬಾಡಿಗೆ ಶಿಕ್ಷಕಿ ನೇಮಿಸಿ ಮಕ್ಕಳಿಗೆ ಪಾಠ ಮಾಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಬಿಇಓ ಶಾಲೆಗೆ ಬೇಟಿ ನೀಡಿ ವಿಚಾರಣೆ ನಡೆಸಿದ್ದರು. ಇದರಲ್ಲಿ ಶಿಕ್ಷಕ ಹಣ ನೀಡಿ ಪದವಿ ಓದಿದ ಯುವತಿಯನ್ನ ಪಾಠ ಮಾಡಲು ನೇಮಿಸಿರುವುದು ಸಾಭೀತಾದ ಕಾರಣ ಶಿಕ್ಷಕ ಮಹೇಂದ್ರ ಕೊಲ್ಲೂರ್ ಎಂಬಾತನನ್ನ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Thu, 13 July 23