ತುಮಕೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿ ತಾಂಡಾದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಜ್ಜಿಬಾಯಿ (35), ಖುಷಿ (9), ಹರ್ಷಿತಾ (6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಪತಿ ವೆಂಕಟೇಶ್ ನಿತ್ಯ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ ಎಂದು ತಿಳಿದುಬಂದಿದೆ. ಇದರಿಂದ ಮನನೊಂದು ಮಕ್ಕಳ ಜತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ: ಕಳ್ಳನೊಬ್ಬ ನಗರದ ವಿದ್ಯಾಗಿರಿ ಬಡಾವಣೆಯ ಅಂಗಡಿಯಲ್ಲಿ ಚಾಕಲೇಟ್ ಬಾಕ್ಸ್ ಕದ್ದೊಯ್ದ ಘಟನೆ ಇಲ್ಲಿ ನಡೆದಿದೆ. ಬಂಗಾರ, ಬೆಳ್ಳಿ, ಆಭರಣ, ಹಣವಲ್ಲ. ಬದಲಿಗೆ ಕಳ್ಳ ಚಾಕಲೇಟ್ ದೋಚಿದ್ದಾನೆ. ಚಾಕಲೇಟ್ ಬಾಕ್ಸ್ ದೋಚಿ ಬೈಕ್ ಮೇಲೆ ಪರಾರಿ ಆಗಿದ್ದಾನೆ. ಬಾಗಲಕೋಟೆ ವಿದ್ಯಾಗಿರಿ ಬಡಾವಣೆಯಲ್ಲಿ ಇರುವ ರಾಜ್ ಪಾನ್ ಶಾಪನಲ್ಲಿ ಕಳ್ಳತನ ನಡೆಸಲಾಗಿದೆ. ಚಾಕೊಲೇಟ್ ಡಬ್ಬಿ ಎತ್ತಿಕೊಂಡು ಬೈಕ್ ನಲ್ಲಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ನೆಲಮಂಗಲ: ಲಾರಿ ಹಾಗೂ ಕಂಟೇನರ್ ನಡುವೆ ಅಪಘಾತ ಸಂಭವಿಸಿ, ಕಂಟೇನರ್ ರಸ್ತೆಯಲ್ಲೇ ಉರುಳಿ ಬಿದ್ದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4 ಅಡಕಮಾರನಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ. ಬೃಹತ್ ಕ್ರೇನ್ ಬಳಸಿ ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದೀಗ ಹೆದ್ದಾರಿಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಈ ಅಪಘಾತದಿಂದ ನೈಸ್ ರಸ್ತೆಯೂ ಜಾಮ್ ಆಗಿ ವಾಹನ ಸವಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಮೈಸೂರು: ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜು ಎಂಬುವರ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ, ಸುನಿಲ್, ಹರೀಶ್, ಭರತ್, ಸ್ವಾಮಿಗೌಡ, ಅನಿಲ್, ವಸಂತನಿಂದ ಹಲ್ಲೆ ಆರೋಪ ಕೇಳಿಬಂದಿದೆ. ಮಗನ ಸಹಾಯಕ್ಕೆ ಬಂದ ಮಂಜು ತಾಯಿ ಪುಟ್ಟಮ್ಮಗೂ ಗಾಯ ಆಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗಾವಿ: ಅಕ್ರಮ ಸಂಬಂಧದ ಶಂಕೆಯಿಂದ ಕುಡಿದ ಮತ್ತಿನಲ್ಲಿ ಪತಿ, ಸೀರೆಯಿಂದ ಕುತ್ತಿಗೆ ಬಿಗಿದು ತನ್ನ ಪತ್ನಿಯನ್ನೇ ಹತ್ಯೆಗೈದ ದುರ್ಘಟನೆ ಸಂಭವಿಸಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಆಶಾ ಕಾಂಬಳೆ (35) ಹತ್ಯೆ ಮಾಡಲಾಗಿದೆ. ಆರೋಪಿ ಪ್ರತಾಪ್ ಅಲಿಯಾಸ್ ಪ್ರದೀಪ ಕಾಂಬಳೆ ಎಂಬಾತನನ್ನು ರಾಯಬಾಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ: ಹರಿಹರ ತಾಲೂಕಿನ ಹನಗವಾಡಿ ಬಳಿ ಟ್ರ್ಯಾಕ್ಟರ್ ಡಿಕ್ಕಿಯಾಗಿ ಆಟೋದಲ್ಲಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ. ಐವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಗಲಕೋಟೆಯ ಇಳಕಲ್ ನಗರದ ಪ್ರವಾಸಿ ಮಂದಿರದ ಹಳೇ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇತ್ತ, ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಕಡಲೆ, ಮೇವಿನ ಬಣವೆಗೆ ಬೆಂಕಿ ಬಿದ್ದು 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬೆಳೆ ಸುಟ್ಟು ಭಸ್ಮ ಆಗಿದೆ.
ಇದನ್ನೂ ಓದಿ: Crime Updates: ತಲಾ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಸಿಬ್ಬಂದಿ, ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ
ಇದನ್ನೂ ಓದಿ: Crime News: ನೀನು ಜಗತ್ತಿನ ಬೆಸ್ಟ್ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ