ಖಾತೆ, ಪಹಣಿ ಪತ್ರಗಳಿಗಾಗಿ ಕಂದಾಯ ಕಚೇರಿ ಎದುರು ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ರೈತರ ಧರಣಿ
ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಎಸ್.ಸಿ, ಎಸ್.ಟಿ ಜಾತಿಯವರು ಇದ್ದು, ಸಂಪೂರ್ಣವಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕಡೆಗಣಿಸಿ ನಮಗೆ ನ್ಯಾಯ ಒದಗಿಸುತ್ತಿಲ್ಲ. ನ್ಯಾಯಕ್ಕೆ ಬದಲಾಗಿ 500 ಅಥವಾ 1000 ರೂಪಾಯಿ ಲಂಚ ನೀಡಿದರೆ ಮಾತ್ರ ಅಲ್ಪ ಸ್ವಲ್ಪ ಕೆಲಸಗಳು ಮಾಡಿಕೊಡುತ್ತಾರೆ ಎಂದು ರೈತರು ಆರೋಪ ಮಾಡಿದ್ದಾರೆ.

ತುಮಕೂರು: ಅದು ತುಂಬಾ ಹಿಂದುಳಿದ ಪ್ರದೇಶ, ಅಲ್ಲಿದೆ ಕಡು ಬಡತನ. ಆದರೆ ಭೀಕರ ಪರಿಸ್ಥಿತಿಯಲ್ಲಿರುವ ಅಲ್ಲಿನ ಜನರನ್ನ ಅಭಿವೃದ್ದಿಯತ್ತ ಕೊಂಡೊಯ್ಯಬೇಕಾದ ಸರ್ಕಾರದ ಅಧಿಕಾರಿಗಳೇ ಈಗ ಅಲ್ಲಿನ ಮುಗ್ದ ರೈತರನ್ನು ಸತಾಯಿಸಿ ಅಲೆದಾಡುವಂತೆ ಮಾಡುತ್ತಿದ್ದಾರೆ. ಅದೆಲ್ಲಿ ಅಂತಿರಾ? ಈ ವರದಿ ನೋಡಿ..
ತುಮಕೂರು ಜಿಲ್ಲೆಯ ತೀರಾ ಹಿಂದುಳಿದ ಪ್ರದೇಶ ಹಾಗೂ ಗಡಿ ಭಾಗವಾಗಿರುವ ಪಾವಗಡ ತಾಲ್ಲೂಕಿನ ಗ್ರಾಮಸ್ಥರು ತಮ್ಮ ಪಹಣಿ, ಖಾತೆ ಪತ್ರಗಳನ್ನು ಹಿಡಿದುಕೊಂಡು 20-30 ವರ್ಷಗಳಿಂದ ಪಾವಗಡ ತಹಶಿಲ್ದಾರ್ ಕಛೇರಿಗೆ ತಿರುಗಾಡುತ್ತಿದ್ದಾರೆ. ಪ್ರತಿದಿನ ಸಾವಿರಾರು ರೈತರು ತಹಸಿಲ್ದಾರ್ ಕಛೇರಿಗೆ ಬಂದರೂ ಸಹ ಯಾವುದೇ ಕೆಲಸಗಳು ಆಗುತ್ತಿಲ್ಲ.
ಹೈಕೋರ್ಟ್ ಆದೇಶ ನೀಡಿದ್ದರೂ ಬಕರ್ ಹುಗಂ ಸಾಗಾವಳಿದಾರರ ಜಮೀನನ್ನು ರೈತರಿಗೆ ಮಂಜೂರು ಮಾಡಿ ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸದ್ಯ ರೈತರ ಆರೋಪವಾಗಿದೆ. ಖಾತೆ ಪಾಣಿ ಪತ್ರಗಳು ಸಕಾಲಕ್ಕೆ ಸೀಗುತ್ತಿಲ್ಲ. ತಿದ್ದಪಡಿಯಾಗಬೇಕಿದ್ದ ಖಾತೆಗಳು ತಿದ್ದುಪಡಿಯಾಗದೇ ಹಾಗೇ ಉಳಿದಿವೆ. ಇದನ್ನ ನಿವಾರಿಸುವ ಬದಲು ನಾಳೆ ಬಾ ಎಂದು ಹೇಳುವ ಅಧಿಕಾರಿಗಳ ವಿರುದ್ಧ ರೈತರು ಸದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನ
ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಎಸ್.ಸಿ, ಎಸ್.ಟಿ ಜಾತಿಯವರು ಇದ್ದು, ಇವರನ್ನ ಸಂಪೂರ್ಣವಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕಡೆಗಣಿಸಿ ತಮಗೆ ನ್ಯಾಯ ಒದಗಿಸುತ್ತಿಲ್ಲ. ನ್ಯಾಯಕ್ಕೆ ಬದಲಾಗಿ 500 ಅಥವಾ 1000 ರೂಪಾಯಿ ಲಂಚ ನೀಡಿದರೆ ಮಾತ್ರ ಅಲ್ಪ ಸ್ವಲ್ಪ ಕೆಲಸಗಳು ಮಾಡಿಕೊಡುತ್ತಾರೆ ಎಂದು ಪಾವಗಡ ತಾಲೂಕು ಕಚೇರಿಯ ಅಧಿಕಾರಿಗಳ ವಿರುದ್ಧ ರೈತರು ಆರೋಪಿಸಿದ್ದಾರೆ.

ಕಂದಾಯ ಕಚೇರಿ ಎದುರು ಪ್ರತಿಭಟನೆ
ಇನ್ನೂ ರಾಜ್ಯ ಸರ್ಕಾರ ಬಡವರಿಗಾಗಿ ಇರುವ ಸರ್ಕಾರ. ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಅವರ ಏಳಿಗೆಯೇ ನಮ್ಮ ಧ್ಯೇಯ ಎಂದು ಸಿಕ್ಕ ಸಿಕ್ಕ ಕಡೆ ಎಲ್ಲಾ ಮೈಕ್ನಲ್ಲಿ ಭಾಷಣ ಮಾಡುತ್ತಾರೆ. ಆದರೆ ನಿಜವಾಗಿ ಬಡ ರೈತರಿಗೆ ಸೇರಬೇಕಾದ ಸವಲತ್ತು ಸೇರುತ್ತಿಲ್ಲ. ಹೇಳಿ ಕೇಳಿ ಪಾವಗಡ ತೀರಾ ಹಿಂದುಳಿದ ಪ್ರದೇಶ. ತೀರಾ ಬಡವರು ಇರುವ ಪ್ರದೇಶ. ಈ ಪ್ರದೇಶಕ್ಕೆ ಹೆಚ್ಚಿನ ಅನುದಾನಗಳು ಸೌಲಭ್ಯಗಳು ನೀಡಿದ್ದರೂ ಸಹ ಅದು ರೈತರಿಗೆ ಸೇರದೆ ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ಅಧಿಕಾರಿಗಳ ಜೇಬಿಗೆ ಬಂದು ಬೀಳುತ್ತಿದೆ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ.

ಪಾವಗಡ ತಾಲೂಕು ಕಚೇರಿ ಅಧಿಕಾರಿಗಳ ವಿರುದ್ಧ ರೈತರ ಆರೋಪ
ಬಗರ್ ಹುಕಂ ಸಮಿತಿಯಲ್ಲಿ ಭೂಮಿಯನ್ನ ಮಂಜೂರು ಮಾಡಿ ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಕಳೆದ 12 ವರ್ಷಗಳಿಂದ ಇದನ್ನ ಜಾರಿಗೊಳಿಸಿಲ್ಲ. ಪ್ರತಿದಿನ ತಹಶಿಲ್ದಾರ್ ಕಚೇರಿಗೆ ಬರುವುದು ಕಂದಾಯ ಅಧಿಕಾರಿಗಳನ್ನ ಕೇಳುವುದು ಬರಿಗೈಯಲ್ಲಿ ವಾಪಸ್ ಆಗುವುದು ಇದು ಪಾವಗಡ ರೈತರ ಕೆಲಸ. ತಹಶಿಲ್ದಾರ್ ಕಛೇರಿಗೆ ಪ್ರತಿದಿನ ಬಂದು ಹೋಗುವುದಕ್ಕೆ ಖರ್ಚಿಗೆ ಸಾಲ ಮಾಡಿಕೊಂಡು ಇದರಲ್ಲಿ ತಮ್ಮ ಜೀವನ ಕಳೆದಿದ್ದಾರೆ ಇಲ್ಲಿನ ರೈತರು.
ಇನ್ನೂ ಜಿಲ್ಲಾಕೇಂದ್ರದಿಂದ 150 ಕಿಲೋಮೀಟರ್ ದೂರವಿರುವ ಪಾವಗಡಕ್ಕೆ ಯಾರೋಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಲ್ಲ ಎಂಬ ಆಶಯದಿಂದ ತಾಲೂಕಿನಲ್ಲಿ ಈ ರೀತಿ ಅನ್ಯಾಯಗಳು ನಡೆಯುತ್ತಿವೆ. ಏನೇ ಆಗಿರಲಿ ಬಡವರ ಜತೆ ಅಧಿಕಾರಿಗಳು ಆಟವಾಡುವುದು ತಪ್ಪು. ಇನ್ನಾದರೂ ಸರ್ಕಾರ ಈ ಕಡೆ ಗಮನ ಹರಿಸಿ ನ್ಯಾಯ ಕೋಡಿಸಬೇಕು ಎನ್ನುವುದು ಟಿವಿ9 ಕನ್ನಡ ಡಿಜಿಟಲ್ ಆಶಯ.
ಟ್ರ್ಯಾಕ್ಟರ್ ಮೆರವಣಿಗೆ: ಪ್ರತಿಭಟನಾನಿರತ ರೈತರು ಪೂರ್ವ ನಿರ್ಧರಿತ ಮಾರ್ಗಗಳನ್ನು ಬಿಟ್ಟು ಬೇರೆ ರಸ್ತೆ ಹಿಡಿದಿದ್ದೇಕೆ?