Fake Bills: ಚೇಳೂರು ಗ್ರಾಮ ಪಂಚಾಯ್ತಿಯಲ್ಲಿ ಕಾಮಗಾರಿ ನಡೆಸದೆಯೇ ಬಿಲ್ ಪಾಸ್ ಮಾಡಿಕೊಂಡು ಕೋಟಿಗಟ್ಟಲೆ ಹಣ ಗುಳುಂ!
ಕಾಮಗಾರಿ ನಡೆಸದೆ ಬಿಲ್ ಪಾಸು ಮಾಡಿಕೊಂಡು ಕೋಟಿಗಟ್ಟಲೆ ಹಣವನ್ನು ಗುಳುಂ ಮಾಡಿರುವ ಪ್ರಕರಣ ತುಮಕೂರು ಜಿಲ್ಲೆ ಚೇಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
Golmaal: ಕಾಮಗಾರಿ ನಡೆಸದೆ ಬಿಲ್ ಪಾಸು ಮಾಡಿಕೊಂಡು (Fake Bills) ಕೋಟಿಗಟ್ಟಲೆ ಹಣವನ್ನು ಗುಳುಂ ಮಾಡಿರುವ ಪ್ರಕರಣ ತುಮಕೂರು (Tumkur) ಜಿಲ್ಲೆ ಚೇಳೂರು ಗ್ರಾಮ ಪಂಚಾಯ್ತಿಯಲ್ಲಿ (Chelur Gram Panchayat) ನಡೆದಿದೆ. ಈ ಕುರಿತು ತನಿಖೆ ನಡೆಸಲು ಮೇಲಾಧಿಕಾರಿಗಳು ಸೂಚನೆ ನೀಡುತ್ತಿದ್ದ ಹಾಗೆ ದಾಖಲೆಗಳನ್ನು ತಿದ್ದುವ ಕೆಲಸ ಬಲು ಜೋರಾಗಿ ನಡೆದಿದೆ. ಅಧಿಕಾರಿಗಳು ದಾಖಲೆ ತಿದ್ದುವುದನ್ನು ಖುದ್ದು ಗ್ರಾಮಸ್ಥರೇ ಸೇರಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯ್ತಿಯಲ್ಲಿ ಕಾಮಗಾರಿ ಮಾಡದೆಯೇ ಬಿಲ್ ಪಾಸ್ ಮಾಡಿಕೊಂಡು ಸರ್ಕಾರದ ಹಣವನ್ನು ಗುಳುಂ ಸ್ವಾಹಃ ಮಾಡಿರುವ ಆರೋಪ ಕೇಳಿ ಬಂದಿದೆ. 2019-20 ನೇ ಸಾಲಿನ ಹಲವು ಕಾಮಗಾರಿಗಳಲ್ಲಿ ಈ ಅಕ್ರಮ ನಡೆದಿದೆ. ಪಂಚಾಯ್ತಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ಜಲ್ಲಿ ಕಲ್ಲು ರಸ್ತೆ, ಕಾಂಕ್ರೀಟ್ ರಸ್ತೆ. ಚರಂಡಿಗಳ ಇನ್ನು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇವೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಬಿಲ್ ಪಾಸು ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಅಕ್ರಮದಲ್ಲಿ ಚೇಳೂರು ಗ್ರಾಮ ಪಂಚಾಯ್ತಿಯ ಹಾಲಿ ಹಾಗೂ ಮಾಜಿ ಪಿಡಿಒಗಳು ಮತ್ತು ಇತರೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದಿದೆ.
ಸರಿಸುಮಾರು 2 ಕೋಟಿಗೂ ಹೆಚ್ಚು ಹಣ ದುರ್ಬಳಕೆಯಾಗಿದೆ. ಗ್ರಾಮ ಪಂಚಾಯ್ತಿಯ ಮೇಲ್ಛಾವಣಿಗೆ ಸೂಲಾರ್ ಪ್ಯಾನಲ್ ಆಳವಡಿಸಲಾಗಿದೆ ಎಂದು ನಕಲಿ ಬಿಲ್ ಸೃಷ್ಟಿಸಿ, ಪಾಸು ಮಾಡಿಕೊಡಲಾಗಿದೆ. ಈ ವಿಚಾರ ಗ್ರಾಮದ ಜನರಿಗೆ ತಿಳಿಯುತ್ತಿದ್ದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ದೊಡ್ಡಮಟ್ಟದಲ್ಲಿ ಪ್ರಚಾರ ಪಡೆದುಕೊಳ್ಳುವುದನ್ನು ಗಮನಿಸಿದ ಮೇಲಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವಿಚಾರ ಅಧಿಕಾರಿಗಳ ಕಿವಿಗೆ ಬೀಳುತ್ತಿದ್ದಂತೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಹೊಸ ಪಿಡಿಒ ಹಾಗೂ ಹಳೇ ಪಿಡಿಒಗಳು ಸೇರಿಕೊಂಡು ಕಳೆದ ಭಾನುವಾರ ಪಂಚಾಯ್ತಿಯಲ್ಲಿ ಕುಳಿತು ದಾಖಲೆಗಳನ್ನು ಸೃಷ್ಟಿಸುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮಸ್ಥರು ಪಂಚಾಯ್ತಿ ಕಚೇರಿ ಬಳಿ ಹೋಗುತ್ತಿದ್ದಂತೆ ಗಾಬರಿಗೊಂಡ ಪಿಡಿಒ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಾಡುತ್ತಿದ್ದ ಕೆಲಸವನ್ನು ಅರ್ಥಕ್ಕೆ ನಿಲ್ಲಿಸಿ ಸ್ಥಳದಿಂದ ಓಡಿ ಹೋಗುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ, ಹಾಗೂ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ವಿದ್ಯಾಕುಮಾರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈಗಾಗ್ಲೇ ಗುಬ್ಬಿ ಇಒ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ನಡುವೆ ದಾಖಲೆಗಳನ್ನು ತಿದ್ದುವುದು ಕೂಡ ಕಂಡು ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿತ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ತನಿಖೆ ಮುಂದುವರೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ವರದಿ: ಮಹೇಶ್, ಟಿವಿ 9, ತುಮಕೂರು)