ತುಮಕೂರು: ಮರ ಕಡಿಯುವ ಶಬ್ದ ಆಲಿಸಿಕೊಂಡು ಹೋಗಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹರಗಲದೇವಿ ಗುಡ್ಡ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀ ಗಂಧ ಕಳ್ಳರ ಮೇಲೆ ಫೈರಿಂಗ್ ನಡೆಸಲಾಗಿದೆ. ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇತ್ತಿಚೆಗೆ ಶ್ರೀ ಗಂದ ಮರಗಳ್ಳರ ಹಾವಳಿ ಹೆಚ್ಚಾಗಿದೆ.ಕಳೆದ 15 ದಿನಗಳ ಹಿಂದೆ ಕುಣಿಗಲ್ ತಾಲೂಕಿನ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀ ಗಂಧ ಕಡಿಯಲು ಮೂರು ಜನರ ತಂಡ ಹೋಗಿತ್ತು, ಈ ವೇಳೆ ಓರ್ವ ಶಿವರಾಜ್ ಅನ್ನೋ ವ್ಯಕ್ತಿ ಅರಣ್ಯ ಸಿಬ್ಬಂದಿ ಹೊಡೆದ ಗುಂಡಿಗೆ ಬಲಿಯಾಗಿದ್ದ, ಆ ಘಟನೆ ಮಾಸುವ ಮುನ್ನವೇ ಗುಬ್ಬಿ ತಾಲೂಕಿನ ಕಡಬ ಹೋಬಳಿ ಹರಗಲದೇವಿ ಗುಡ್ಡ ಸಂಖ್ಯೆ 1 ರ 1500 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದಲ್ಲಿ ಮತ್ತೆ ಘಟನೆ ನಡೆದಿದೆ.
ಭಾನುವಾರ ಸಂಜೆ ಶ್ರೀ ಗಂಧ ಕಳ್ಳರ ಮೇಲೆ ಫೈರಿಂಗ್ ಮಾಡಲಾಗಿದ್ದು, ಈ ವೇಳೆ ಮೂರ್ತಿ ಎಂಬುವನಿಗೆ ಗುಂಡು ತಗಲಿ, ತಲೆಗೆ ಗಾಯವಾಗಿದೆ. ಕೃಷ್ಣ ಮತ್ತು ಮಲ್ಲಪ್ಪ ಎಂಬ ಕಳ್ಳರನ್ನು ಬಂಧಿಸಲಾಗಿದೆ. ಗಾಯಗೊಂಡ ಮೂರ್ತಿಯನ್ನು ತುಮಕೂರು ಜಿಲ್ಲಾಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಶ್ರೀ ಗಂಧದ ಕಳ್ಳರು ತಮಿಳುನಾಡು ಮೂಲದವರು ಎನ್ನಲಾಗಿದೆ.
ಒಟ್ಟು ಮೂವರ ಬಂಧನವಾಗಿದ್ದು, ಇನ್ನುಳಿದವರು ಪರಾರಿಯಾಗಿದ್ದಾರೆ. ಸುಮಾರು 12 ಜನ ಕಳ್ಳರು ಶ್ರೀ ಗಂಧ ಕಳ್ಳತನ ಮಾಡಲು ಬಂದಿದ್ದರು ಎಂದು ತಿಳಿದುಬಂದಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಳಿದ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕರಾಜೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅಡುಗೆ ಮಾಡಿಕೊಳ್ಳುವ ಪಾತ್ರೆಗಳು ಕೂಡ ಪತ್ತೆಯಾಗಿದ್ದು, ದೊಡ್ಡ ಗ್ಯಾಂಗ್ ಅರಣ್ಯಕ್ಕೆ ಬಂದಿರಬಹುದು ಎನ್ನಲಾಗಿದೆ.
(Gubbi forest officials shoot sandalwood smugglers)
Published On - 8:17 am, Mon, 6 September 21