ತುಮಕೂರು: ಸಮುದ್ರ ಮಂಥನವಾದಾಗ ಮೊದಲು ವಿಷ ಬಂದರೂ ನಂತರ ಬಂದಿದ್ದು ಅಮೃತ ಅಂತಾ ನಮ್ಮ ಪುರಾಣಗಳು ಹೇಳುತ್ತವೆ. ಯಾವುದೇ ಬಿಕ್ಕಟ್ಟು ಅಥವಾ ಕಷ್ಟಕರ ಸಂದರ್ಭ ಬಂದರೂ ಅದರ ಜೊತೆಗೆ ಹೊಸತರ ಅಲೆಯೂ ಬರುತ್ತೆ ಅನ್ನೋ ಮಾತಿದೆ. ಈಗ ಕೊರೊನಾ ಬಿಕ್ಕಟ್ಟು ಜಗತ್ತನ್ನೇ ನಡುಗಿಸಿದರೂ, ಕೆಲವೆಡೆ ಹೊಸತರ ಅಲೆಗಳಿಗೆ ದಾರಿ ಮಾಡಿಕೊಟ್ಟಿದೆ. ಇಂಥ ಹೊಸ ಅಲೆಗಳಿಗೆ ಸಾಕ್ಷಿಯಾಗುತ್ತಿರೋದು ಕಲ್ಪತರ ನಾಡು ತುಮಕೂರು.
ಡ್ರ್ಯಾಗನ್ ಫ್ರೂಟ್ ಬೆಳೆಯತ್ತ ರೈತರ ಆಸಕ್ತಿ
ಹೌದು, ಕೊರಾನಾ ಬಿಕ್ಕಟ್ಟು ತುಮಕೂರು ಜಿಲ್ಲೆಯ ತೋಟಗಾರಿಕೆ ಇಲಾಖೆಗೆ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಟ್ಟಿದೆ. ರೈತರಿಗೆ ಅನುಕೂಲವಾಗಲಿ ಎನ್ನೋ ಉದ್ದೇಶದಿಂದ ಪ್ರಾಯೋಗಿಕವಾಗಿ ಆರಂಭಿಸಿದ್ದ ಡ್ರ್ಯಾಗನ್ ಫ್ರೂಟ್ ಕೃಷಿಗೆ ಭಾರೀ ಪ್ರತಿಕ್ರಿಯೆ ಬಂದಿದೆ. ರೈತರು ಮತ್ತು ಕೆಲ ವೈಟ್ ಕಾಲರ್ ಉದ್ಯೋಗಿಗಳು ಡ್ರ್ಯಾಗನ್ ಫ್ರೂಟ್ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ.
ತುಮಕೂರಿನ ಪ್ರಾಯೋಗಿಕ ಕೇಂದ್ರಕ್ಕೆ ನೂರಾರು ರೈತರ ಭೇಟಿ
ಈ ಸಂಬಂಧ ತೋಟಗಾರಿಕಾ ಕೇಂದ್ರದ ವೆಬ್ಸೈಟ್ಗೆ ಹೆಚ್ಚು ಹೆಚ್ಚು ಮಂದಿ ಭೇಟಿ ನೀಡಿ ಡ್ರ್ಯಾಗನ್ ಫ್ರೂಟ್ ಬಗ್ಗೆ ಸರ್ಚ್ ಮಾಡಿದ್ದಾರೆ. ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಡ್ರ್ಯಾಗನ್ ಫ್ರೂಟ್ ಬೆಳೆ ಪದ್ಧತಿಯ ವಿಡಿಯೋಗಳನ್ನು ಹೆಚ್ಚು ವೀಕ್ಷಿಸಿದ್ದಾರೆ. ಜೊತೆಗೆ ಡ್ರ್ಯಾಗನ್ ಬೆಳೆ ಹೆಚ್ಚು ಲಾಭದಾಯಕವಾಗಿರೋದ್ರಿಂದ ರೈತರು ಈ ಹಣ್ಣು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಇನ್ನು ಕೆಲವರಂತೂ ಡ್ರ್ಯಾಗನ್ ಫ್ರೂಟ್ ಬೆಳೆಯುವ ಪದ್ಧತಿಯನ್ನು ಪತ್ಯಕ್ಷವಾಗಿ ತಿಳಿದುಕೊಳ್ಳಲು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಎಡತಾಕಿದ್ದಾರೆ. ತುಮಕೂರಿನ ಹೊರವಲಯದ ಹಿರೇಹಳ್ಳಿಯಲ್ಲಿ ಇರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಲಾಕ್ಡೌನ್ ಸಂದರ್ಭದಲ್ಲಿ ಐಟಿ ಉದ್ಯಮಿಗಳು, ಹಣ್ಣು ಬೆಳೆಗಾರರು, ರೈತರು ದೂರವಾಣಿ ಮೂಲಕ ಸಾಕಷ್ಟು ಮಾಹಿತಿ ಪಡೆದಿದ್ದಾರೆ.
ಪ್ರಾಯೋಗಿಕ ಕೇಂದ್ರಲ್ಲಿದೆ 250 ಡ್ರ್ಯಾಗನ್ ಫ್ರೂಟ್ಸ್‌ಗಳ ತೋಟ
ದಿನವೊಂದಕ್ಕೆ ಕನಿಷ್ಠವೆಂದರೂ ನೂರಾರು ಮಂದಿ ತಂಡೋಪತಂಡವಾಗಿ ಬಂದು ಡ್ರ್ಯಾಗನ್ ಫ್ರೂಟ್ ಫಾರ್ಮನ್ನು ವೀಕ್ಷಿಸಿದ್ದಾರೆ. ತಾವೂ ಈ ಬೆಳೆ ಪದ್ಧತಿಯನ್ನು ಅನುಸರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ಕೇಂದ್ರದಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಡ್ರ್ಯಾಗನ್ ಫ್ರೂಟ್ಸ್ ಗಿಡಗಳನ್ನು ಪ್ರಾಯೋಗಿಕವಾಗಿ ಬೆಳೆಯಲಾಗಿದೆ. ಅವುಗಳ ಸಂಪೂರ್ಣ ಸ್ಥಿತಿಗತಿ ಮತ್ತು ಲಭ್ಯವಿರುವ ಮಾರುಕಟ್ಟೆ ಅರಿತಿರುವ ಐಟಿ ಉದ್ಯೋಗಿಗಳು ಮತ್ತು ಬೆಳೆಗಾರರು ಭವಿಷ್ಯದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಆಸಕ್ತಿ ತೋರಿದ್ದಾರೆ.
ಈ ಹಣ್ಣಿನ ಬೆಳೆಗೆ ನವಿಲು ಸೇರಿದಂತೆ ಯಾವುದೇ ಪಕ್ಷಿಗಳ ಕಾಟ ಇರುವುದಿಲ್ಲ. ಕೋತಿಗಳು ಸಹ ಡ್ರ್ಯಾಗನ್ ಫ್ರೂಟ್ ನತ್ತ ತಲೆಹಾಕುವುದಿಲ್ಲ. ಇನ್ನೂ ತೋಟಗಾರಿಕಾ ಕೇಂದ್ರದ ಸಲಹೆ ಮೇರೆಗೆ ಈ ಬೆಳೆಯನ್ನು ಬೆಳೆದರೆ ಸಾಕಷ್ಟು ಆದಾಯ ಪಡೆಯಬಹುದಾಗಿದೆ. ಹೀಗಾಗಿ ತುಮಕೂರಿನ ಹಲವಾರು ರೈತರು ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಿದ್ದು, ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆಯುವ ಯೋಜನೆ ರೂಪಿಸಿದ್ದಾರೆ. -ಮಹೇಶ್
Published On - 3:42 pm, Sun, 21 June 20