ತುಮಕೂರು: ಅಪರಿಚಿತ ವಾಹನ ಡಿಕ್ಕಿ; ಬೈಕ್ನಲ್ಲಿ ತೆರಳ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವು
ಸಾವು ಹೇಗೆ ಬೇಕಾದರೂ ಬರಬಹುದು ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಅಕ್ಕ, ತಮ್ಮ ಬೈಕ್ನಲ್ಲಿ ಹೋಗುವಾಗ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು, ಸೆ.03: ಅಪರಿಚಿತ ವಾಹನ ಡಿಕ್ಕಿಯಾಗಿ (Accident) ಬೈಕ್ನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು (Tumakur) ಜಿಲ್ಲೆಯ ಶಿರಾ ತಾಲೂಕಿನ ತರೂರು ಗ್ರಾಮದ ಬಳಿ ನಡೆದಿದೆ. ತುಮಕೂರಿನ ಅಂತರಸನಹಳ್ಳಿಯ ಶಶಿಕುಮಾರ್(23), ಮೀನಾಕ್ಷಿ(30) ಮೃತರು. ಇವರು ಆಂಧ್ರಪ್ರದೇಶದ ಅಗಳಿಗೆ ಬೈಕ್ನಲ್ಲಿ ಮದುವೆಗೆ ತೆರಳುತ್ತಿದ್ದರು ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಬೈಕ್‌ನ ಮುಂಭಾಗ ನಜ್ಜುಗುಜ್ಜು ಆಗಿದ್ದು, ತುಮಕೂರಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಒಡಿಶಾ ಮೂಲದ ಡ್ರಗ್ ಪೆಡ್ಲರ್ ಬಂಧನ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ಟೌನ್ ಪೊಲೀಸರು ಒಡಿಶಾ ಮೂಲದ ಡ್ರಗ್ ಪೆಡ್ಲರ್ ಅಲೇಖ್ ಸಾಹು(32) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಇತ ಹೊಸಕೋಟೆಯಿಂದ ತಂದು ಹೊರ ರಾಜ್ಯದ ವ್ಯಕ್ತಿಗಳು, ಲಾರಿ ಚಾಲಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಬಂದ ಹಿನ್ನಲೆ PHP ಸೆಕ್ಯೂರಿಟಿ ಕಂಪನಿಯಲ್ಲಿ ಗಾರ್ಡ್ ಆಗಿದ್ದ ಆರೋಪಿ ಅಲೇಖ್ ಸಾಹು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇತನಿಂದ ಅರ್ಧ ಕೆಜಿ ಗಾಂಜಾ, 500 ರೂಪಾಯಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಕೊಡಗು: ಅಪಘಾತ ಮಾಡಿದರೂ ಪರಿಹಾರ ನೀಡದ ಕೆಎಸ್ಆರ್ಟಿಸಿ; ಬಸ್ಸನ್ನೇ ಅಟ್ಯಾಚ್ ಮಾಡುವಂತೆ ವಾರಂಟ್ ಹೊರಡಿಸಿದ ನ್ಯಾಯಾಲಯ!
ಅಂಗಡಿ ಮಳಿಗೆಗಳ ಬೀಗ ಮುರಿದು ಕಳ್ಳತನ
ಆನೇಕಲ್: ಅಂಗಡಿ ಮಳಿಗೆಗಳ ಬೀಗ ಮುರಿದು ಖದೀಮರ ತಂಡ, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕದ್ದು ಎಸ್ಕೇಪ್ ಆಗಿರುವಂತಹ ಘಟನೆ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ. ಗೊಟ್ಟಿಗೆರೆಯ ಜ್ಯೋತಿನಗರ ಮತ್ತು ಬೋರೋ ಲೇಔಟ್ನಲ್ಲಿರುವ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ನಡೆದಿದ್ದು, ಮತ್ತೊಂದು ಅಂಗಡಿ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಮೆಡಿಕಲ್ ಶಾಪ್, ತರಕಾರಿ ಅಂಗಡಿ, ಪತಂಜಲಿ ಶಾಪ್ನ ಬೀಗ ಮುರಿದು ಕಳ್ಳರು ಕಳ್ಳತನ ನಡೆಸಿದ್ದಾರೆ.
ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ ಧರಿಸಿ ಬಂದಿದ್ದ ಮೂವರು ಕಳ್ಳರು ಕೃತ್ಯ ಎಸಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಪೋಲೀಸರ ರೌಂಡ್ಸ್ ಬಂದ್ರೆ, ಇಂತಹ ಕಳ್ಳರ ಹಾವಳಿಗೆ ಬ್ರೇಕ್ ಹಾಕಬಹುದಾಗಿದೆ. ರಾತ್ರಿ ಸಮಯದಲ್ಲಿ ಹೊಂಚು ಹಾಕಿ ಕಳ್ಳತನ ಎಸಗುತ್ತಿದ್ದು, ಕಳ್ಳರ ಹಾವಳಿಗೆ ಪೋಲೀಸರು ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನು ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೋಲೀಸರು ಬಲೆ ಬೀಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Sun, 3 September 23