ತುಮಕೂರು, ಮೇ.07: ಕಲ್ಪತರು ನಾಡು ತುಮಕೂರು (Tumakur) ಜಿಲ್ಲೆ, ಬಹುತೇಕ ಹೇಮಾವತಿ ನೀರಿನ ಮೇಲೆ ನಂಬಿಕೊಂಡು ಜೀವನ ಮಾಡಲಾಗುತ್ತಿದೆ. ಬರುವ ನೀರನ್ನ ಆಯಾ ತಾಲೂಕಿನ ಕೆರೆಗಳಿಗೆ ಹರಿಸುವಷ್ಟರಲ್ಲಿ ಸಾಕಾಪ್ಪ ಎನಿಸುತ್ತಿರುತ್ತದೆ. ಹೀಗಿರುವಾಗ ಇದೇ ನೀರನ್ನ ಈಗ ಜಲಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕುಣಿಗಲ್ ಮೂಲಕ ಮಾಗಡಿಗೆ ಲಿಂಕಿಂಗ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗಲು ನಿರ್ಧರಿಸಿ ಚುನಾವಣೆ ಘೋಷಣೆ ಮುನ್ನ ಕುಣಿಗಲ್ನಲ್ಲಿ ಶಂಕುಸ್ಥಾಪನೆ ಕೂಡ ನೇರವೇರಿಸಿದ್ದಾರೆ.
ಇನ್ನು ಇದಕ್ಕೆ ಸರ್ಕಾರದ ವತಿಯಿಂದ ಸುಮಾರು 900 ಕೋಟಿ ಹಣ ಕೂಡ ಮಂಜೂರು ಆಗಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಗುಬ್ಬಿ ಬಳಿ ಕೆನಾಲ್ನಿಂದ ಲಿಂಕಿಂಗ್ ಕೆನಾಲ್ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದ್ದು, ಇದಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋದ ವ್ಯಕ್ತವಾಗಿದೆ. ಜಿಲ್ಲೆಗೆ ಬರುತ್ತಿರುವುದೆ 24 tmc ನೀರು. ಟ್ರಿಬ್ಯುನಲ್ ಪ್ರಕಾರ ನಮ್ಮ ಜಿಲ್ಲೆಗೆ ನಿಗದಿ ಆಗಿರುವ ನೀರು ಬೇರೆಡೆ ಬಿಡಬಾರದೆಂದು ಇದೆ. ಹೀಗಿದ್ದರೂ ಕೂಡ ಸರ್ಕಾರ ಅನುಮೋದನೆ ನೀಡಿದ್ದು ಜಿಲ್ಲೆಯ ಜನರ ಹಾಗೂ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ:ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ; ನಾಳೆಯಿಂದ ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು
ಇನ್ನು ತುಮಕೂರು ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಮಠಾಧೀಶರು ಯೋಜನೆ ವಿರುದ್ಧ ಕಾನೂನು ಹಾಗೂ ಕಾನೂನಿನ ಹೊರಗೆ ಹೋರಾಟ ಮಾಡುವ ದೃಢ ನಿರ್ಧಾರ ಮಾಡಿದ್ದಾರೆ. ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡುವಂತೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡ ದಿಲೀಪ್, ಮಾಜಿ ಶಾಸಕ ಎಚ್. ನಿಂಗಪ್ಪ ಸೇರಿದ್ದಂತೆ ಹಲವು ರೈತ ಮುಖಂಡರು ಸರ್ಕಾರಕ್ಕೆ ಒತ್ತಾಯ ಹೇರಿದ್ದಾರೆ. ಗುಬ್ಬಿ ತಾಲ್ಲೂಕಿನಿಂದ 35.4 ಕಿಲೋಮೀಟರ್ ಉದ್ಧದ ಪೈಪ್ ಲೈನ್ ಲಿಂಕ್ ಕೆನಾಲ್ ಕಾಮಗಾರಿಯಾಗಿದ್ದು, ಬಿಜೆಪಿ ಸರ್ಕಾರ ರದ್ದು ಪಡಿಸಿದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದೆ. ಡಿಕೆಶಿ ವೈಯಕ್ತಿಕ ಆಸಕ್ತಿ ಮೇರೆಗೆ ಈ ಯೋಜನೆ ಜಾರಿಗೆ ತರಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಕೂಡಲೇ ರದ್ದು ಮಾಡಿಲ್ಲ ಎಂದರೇ ಪಕ್ಷಾತೀತವಾಗಿ ಹೋರಾಟ ಮಾಡಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಕಳೆದ ಬಾರಿ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಕೂಡ ಜಿಲ್ಲೆಯ ಶಾಸಕರು ಸಚಿವರು ಪರಮೇಶ್ವರ್ ಸಮ್ಮುಖದಲ್ಲಿ ಚರ್ಚೆ ನಡೆಸಿ ಆಕ್ರೋಶ ಹೊರಹಾಕಲಾಗಿತ್ತು. ಸರ್ಕಾರಕ್ಕೆ ಮತ್ತೊಮ್ಮೆ ಪರಿಶೀಲನೆ ನಡೆಸಲು ತಿರ್ಮಾನ ಮಾಡಲಾಗಿತ್ತು. ಆದರೆ, ಇದುವರೆಗೂ ಕೂಡ ಏನಾಗಿದೆ ಎಂದು ತಿಳಿದುಬಂದಿಲ್ಲ. ಹೀಗಾಗಿ ಹೋರಾಟದ ಎಚ್ಚರಿಕೆ ನೀಡಿದ್ದು, ಏನಾಗಲಿದೆ ಎಂದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ