ತುಮಕೂರು: ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2024 | 6:44 PM

ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ನಂತರ ಓರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಫಿರ್ದೋಸ್ ಎಂಬ 26 ವರ್ಷದ ಮಹಿಳೆ ಮಧ್ಯಾಹ್ನ ಹೆರಿಗೆಯಾದ ನಂತರ ಕೆಲವೇ ಗಂಟೆಗಳಲ್ಲಿ ನಿಧನರಾದರು. ವೈದ್ಯರು ಪಲ್ಮನರಿ ಎಂಬಾಲಿಸಮ್​ ಕಾರಣ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.

ತುಮಕೂರು: ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು
ತುಮಕೂರು: ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು
Follow us on

ತುಮಕೂರು, ಡಿಸೆಂಬರ್​ 29: ಕರ್ನಾಟಕದಲ್ಲಿ ಬಾಣಂತಿಯರ ಸಾವು (Maternal death) ಮುಂದುವರಿದಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ಬಳಿಕ ಇದೀಗ ತುಮಕೂರಿನಲ್ಲೂ ಬಾಣಂತಿ ಸಾವಾಗಿದೆ. ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಯಿ, ಮೂಗಿನಲ್ಲಿ ರಕ್ತ ಬಂದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಫಿರ್ದೋಸ್‌(26) ಮೃತ ಬಾಣಂತಿ.

ಬೆಂಗಳೂರಿನ ಡಿ.ಜೆ.ಹಳ್ಳಿಯ ಮೋದಿ ರೋಡ್‌ ನಿವಾಸಿ ಫಿರ್ದೋಸ್​​, ಹೆರಿಗೆಗಾಗಿ ತಿಪಟೂರಿನ ಗಾಂಧಿನಗರದ ತವರು ಮನೆಗೆ ಹೋಗಿದ್ದರು. ಡಿ.27ರಂದು ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಮಗುವಿಗೆ ಸಿಸೇರಿಯನ್ ಮಾಡಿಸಿಕೊಂಡಿದ್ದ ಫಿರ್ದೋಸ್‌, ಬಳಿಕ ಕೆಮ್ಮು ಅತಿಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಯೂ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಕೆಮ್ಮು ಕಫ ಜೋರಾಗಿದ್ದರಿಂದ ಮೂಗು ಮತ್ತು ಬಾಯಲ್ಲಿ ರಕ್ತ ಬರಲಾರಂಬಿಸಿತ್ತು. ನಿನ್ನೆ ಮಧ್ಯರಾತ್ರಿ 2.30ರಲ್ಲಿ ಮೃತಪಟ್ಟಿದ್ದಾರೆ. ಇನ್ನು ಈ ಘಟನೆ ಬಗ್ಗೆ ವೈದ್ಯರನ್ನು ಕೇಳಿದರೆ, ಮಹಿಳೆಗೆ ಪಲ್ಮನರಿ ಎಂಬಾಲಿಸಮ್​ ಇದ್ದು, ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ.

ಹೆರಿಗೆಯಾದ ಐದೇ ದಿನಕ್ಕೆ ಹಸಿ ಬಾಣಂತಿ ಸಾವು

ಇನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ, ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗಿದೆ ಅನ್ನೊ ಆರೋಪ ಕೇಳಿಬಂದಿದೆ. ಸಿಜರಿನ್ ಹೆರಿಗೆಯಾಗಿ ಐದು ದಿನಗಳ ಬಳಿಕ ಬಾಣಂತಿ ಸಾವಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಮೃತಳ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದಾರೆ.

ಐಶ್ವರ್ಯ ಎಂಬುವವರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಡಿಸೆಂಬರ್ 19 ನೇ ತಾರೀಖು ಹೆರಿಗೆಗೆ ಆಡ್ಮಿಟ್ ಆಗಿದ್ದರು. ಡಿಸೆಂಬರ್ 20 ರಂದು ಸಿಜೇರಿಯನ್ ಮೂಲಕ ಹೆರಿಗೆಯಾಗಿತ್ತು. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ: ಬೆಳಗಾವಿ ಬಿಮ್ಸ್​ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ

ಹೆರಿಗೆ ಆಗಿದೆ 3 ದಿನಗಳ ಕಳೆದಿವೆ. ಡಿಸೆಂಬರ್ 23ರಂದು ಅದೇನಾಯಿತೋ ಏನೋ ಗೊತ್ತಿಲ್ಲ ಬೆಳಿಗ್ಗೆ ಇಡ್ಲಿ ತಿಂದಿದ್ದ ಬಾಣಂತಿ ಐಶ್ವರ್ಯಳಿಗೆ ವಾಂತಿ ಭೇದಿ ಶುರುವಾಗಿತ್ತು. ತಕ್ಷಣ ವೈದ್ಯರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಆದರೆ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಮೃತಪಟ್ಟಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.