AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಬಿಮ್ಸ್​ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ

ಮುದ್ದಿನ ಸಂಸಾರ, ಐದು ದಿನದ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಕೊಂಡಿದ್ದರು. ಕೇಕ್​ ತಿಂದು ಖುಷಿ ಪಟ್ಟಿದ್ದರು. ದಾಂಪತ್ಯಕ್ಕೆ ಮತ್ತೊಂದು ಕುಡಿ ಸೇರಲಿದೆ ಎಂದು ದಿನ ಎಣಿಸುತ್ತಿದ್ದರು. ಆದರೀಗ ನಡೆಯಬಾರದ ಘಟನೆ ನಡೆದಿದೆ. ಹೆರಿಗೆಗೆಂದು ಬೆಳಗಾವಿ ಬಿಮ್ಸ್ ಆಸ್ಪತ್ರೆ ಸೇರಿದ್ದ ಮಹಿಳೆ ಪ್ರಾಣಬಿಟ್ಟಿದ್ದಾಳೆ.

ಬೆಳಗಾವಿ ಬಿಮ್ಸ್​ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ
5 ದಿನದ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ವೈಶಾಲಿ
Sahadev Mane
| Updated By: Ganapathi Sharma|

Updated on: Dec 23, 2024 | 9:15 AM

Share

ಬೆಳಗಾವಿ, ಡಿಸೆಂಬರ್ 23: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಹುಕ್ಕೇರಿ ತಾಲೂಕಿನ ಗೌಡವಾಡದ ವೈಶಾಲಿ ಕೊಟಬಾಗಿ ಅವರಿಗೆ 4 ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್​ಗೆ ಸ್ಥಳಾಂತರ ಮಾಡಿದ್ದರು. ಶನಿವಾರ ಬೆಳಗ್ಗೆ ಬಿಮ್ಸ್​ನಲ್ಲಿ ವೈಶಾಲಿಗೆ ಸಿಜೇರಿಯನ್ ಆಗಿದ್ದು, ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾರೆ.

ಬಳಿಕ ವೈಶಾಲಿ ಆರೋಗ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಭಾನುವಾರ ಬೆಳಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ದಿನ ಹಿಂದಷ್ಟೇ ಆ್ಯನಿವರ್ಸರಿ ಆಚರಿಸಿಕೊಂಡಿದ್ದ ಮಹಿಳೆ

5 ದಿನದ ಹಿಂದಷ್ಟೇ ವೈಶಾಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಚೊಚ್ಚಲ ಹೆರಿಗೆ ಖುಷಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈಗ ಏಕಾಏಕಿ ವೈಶಾಲಿ ಮೃತಪಟ್ಟಿರುವುದರಿಂದ, ರೊಚ್ಚಿಗೆದ್ದ ಕುಟುಂಬದವರು ಮೃತ ಬಾಣಂತಿ ಶವವನ್ನು ಪೋಸ್ಟ್​​ಮಾರ್ಟಂಗೆ ಕೊಟ್ಟಿರಲಿಲ್ಲ. ನಂತರ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಂಎಲ್‌ಸಿ ಮಾಡಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಬಾಣಂತಿ ಶವ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದಲ್ಲಿ ವೈಶಾಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ವೈದ್ಯರ ವಿರುದ್ಧ ಆರೋಪ

ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಸಾವಿನ ಸತ್ಯ ಬಯಲಾಗಲಿದೆ. ಇತ್ತ ಯಾವುದೋ ಮಾತ್ರೆಗಳನ್ನು ನೀಡಿದ್ದಕ್ಕೆ ಈ ರೀತಿ ಆಗಿದೆ ಅಂತ ಕುಟುಂಬದರು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಪಘಾತಗಳ ರಾಜಧಾನಿ: ನೆಲಮಂಗಲ ಸಂಚಾರಿ ಠಾಣೆ ರಾಜ್ಯದಲ್ಲೇ ನಂಬರ್ 1

ಬಳ್ಳಾರಿ, ಸಿಂಧನೂರು ಸೇರಿದಂತೆ ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದ್ದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಇನ್ನಷ್ಟು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ