ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವು: ವೈದ್ಯೆ ಸೇರಿ ನಾಲ್ವರನ್ನ ಸಸ್ಪೆಂಡ್ ಮಾಡಿದ ಸಚಿವ ಸುಧಾಕರ್

| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2022 | 12:10 AM

ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಶಿಶುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಆರೋಗ್ಯ ಸಚಿವ ಸುಧಾಕರ್ ಸಸ್ಪೆಂಡ್ ಮಾಡಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವು: ವೈದ್ಯೆ ಸೇರಿ ನಾಲ್ವರನ್ನ ಸಸ್ಪೆಂಡ್ ಮಾಡಿದ ಸಚಿವ ಸುಧಾಕರ್
ಆರೋಗ್ಯ ಸಚಿವ ಕೆ ಸುಧಾಕರ
Follow us on

ತುಮಕೂರು: ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತಾಯಿ ಹಾಗೂ ಅವಳಿ ಶಿಶುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಕರ್ತವ್ಯದಲ್ಲಿದ್ದ ವೈದ್ಯೆ ಉಷಾ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ವೈದ್ಯೆ, ಮೂವರು ನರ್ಸ್​ಗಳನ್ನು ಸಸ್ಪೆಂಡ್‌ ಮಾಡಿ ಆರೋಗ್ಯ ಸಚಿವ ಸುಧಾಕರ್ ಆದೇಶ ಹೊರಡಿಸಿದ್ದಾರೆ.

ತಾಯಿ ಕಾರ್ಡ್ ಇಲ್ಲ ಎಂಬ ಕಾರಣ ನೀಡಿ, ಆಸ್ಪತ್ರೆಯಿಂದ ವಾಪಸ್‌ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷ್ಯ ಮಾಡಿದ್ದರಿಂದ ಮಕ್ಕಳು ಹಾಗೂ ತಾಯಿ ಮೂವರೂ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಇಂದು(ನ.3) ಸಂಜೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಖುದ್ದ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ಮಾಡಿ ಮಾಹಿತಿ ಪಡೆದುಕೊಂಡರು. ಬಳಿಕ ಕರ್ತವ್ಯ ಲೋಪದ ಮೇಲೆ ಮಹಿಳೆ ಡೆಲೆವರಿಗೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ಹಾಗೂ ಮೂವರು ನರ್ಸ್​ಗಳನ್ನು ಸಸ್ಪೆಂಡ್ ಮಾಡಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಅವಳಿ ಗಂಡು ಮಕ್ಕಳ ಜೊತೆ ತಾಯಿನೂ ಸಾವು

ಘಟನೆ ಹಿನ್ನೆಲೆ

ತಮಿಳುನಾಡು ಮೂಲದ ಕಸ್ತೂರಿ 1 ತಿಂಗಳಿಂದ ಓರ್ವ ಪುತ್ರಿ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗರ್ಭಿಣಿ ಕಸ್ತೂರಿಗೆ ನಿನ್ನೆ(ನ.2) ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ತಾಯಿ ಕಾರ್ಡ್​, ಆಧಾರ್​ ಕಾರ್ಡ್​ ಇಲ್ಲವೆಂದು ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದು, ನಾವು ಚಿಕಿತ್ಸೆ ನೀಡಲ್ಲ ಎಂದು ವೈದ್ಯರು ಕೂಡ ನಿರಾಕರಿಸಿದ್ದರು. ಅಲ್ಲದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸಿಬ್ಬಂದಿ ಹೇಳಿದ್ದರು. ಆದ್ರೆ, ಬೆಂಗಳೂರಿಗೆ ತೆರಳಲು ಹಣವಿಲ್ಲದೆ ಕಸ್ತೂರಿ ಮನೆಗೆ ಹಿಂದಿರುಗಿದ್ದರು. ಬಳಿಕ ಇಂದು(ನ.03) ಒಂದು ಮಗುವಿಗೆ ಜನ್ಮ ನೀಡಿದ್ದು, ಮತ್ತೊಂದು ಮಗುವಿಗೆ ಜನ್ಮನೀಡುವಾಗ ರಕ್ತಸ್ರಾವವಾಗಿದೆ. ಪರಿಣಾಮ ಅವಳಿ ಗಂಡು ಮಕ್ಕಳು ಹಾಗೂ ತಾಯಿ ಕಸ್ತೂರಿ(30) ಮೃತಪಟ್ಟಿದ್ದರು. ತಾಯಿ, ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದರು.