ತುಮಕೂರಿನಲ್ಲಿ ತಾಯಿ, ಅವಳಿ ಶಿಶುಗಳ ಸಾವಿನ ಪ್ರಕರಣ, ಅದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ -ಅಧ್ಯಕ್ಷ ನಾಗನಗೌಡ

TV9kannada Web Team

TV9kannada Web Team | Edited By: ಗಂಗಾಧರ್​ ಬ. ಸಾಬೋಜಿ

Updated on: Nov 04, 2022 | 4:12 PM

ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ. ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ತಮ್ಮ ವೈಫಲ್ಯದ ಬಗ್ಗೆ ವೈದ್ಯಾಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ತುಮಕೂರಿನಲ್ಲಿ ತಾಯಿ, ಅವಳಿ ಶಿಶುಗಳ ಸಾವಿನ ಪ್ರಕರಣ, ಅದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ -ಅಧ್ಯಕ್ಷ ನಾಗನಗೌಡ
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನಡೆದ ಬಾಣಂತಿ ಮತ್ತು ಅವಳಿ ಮಕ್ಕಳ ಸಾವು ಪ್ರಕರಣ (mother, twins baby death case) ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ಹೇಳಿಕೆ ನೀಡಿದ್ದು, ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ. ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ತಮ್ಮ ವೈಫಲ್ಯದ ಬಗ್ಗೆ ವೈದ್ಯಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ದಾಖಲೆಗಿಂತ ಪ್ರಾಣ ಮುಖ್ಯ ಅನ್ನೋದನ್ನು ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ನೀಡುತ್ತೇವೆ. ಬಾಲಕಿ ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಇರುತ್ತದೆ. ಮಗುವಿನ ಸಂಪೂರ್ಣ ಜವಾಬ್ದಾರಿ ಸರ್ಕಾರ ಹೊರುತ್ತದೆ. ತಮಿಳು ನಾಡು ಮೂಲದವರಾಗಿದ್ದ ಅವರಿಗೆ ಅಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಸ್ಪತ್ರೆಯಲ್ಲಿ ಅಧ್ಯಕ್ಷ ನಾಗನಗೌಡ ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಟ್ರಿಟ್​ಮೆಂಟ್: ಎನ್. ಗೋವಿಂದರಾಜು 

ತಾಜಾ ಸುದ್ದಿ

ಇನ್ನು ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಗೋವಿಂದರಾಜು ಸುದ್ದಿಗೋಷ್ಠಿ ಮಾಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿಬಾರಿಯೂ ಇಂತಹ ಘಟನೆಗಳು ನಡೆಯುತ್ತಿವೆ. ತಪಾಸಣೆ ಮಾಡದೇ, ಚಿಕಿತ್ಸೆ ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಟ್ರಿಟ್​ಮೆಂಟ್ ಸಿಗುತ್ತದೆ ಎಂದು ಖಂಡಿಸಿದರು. ಗಲಾಟೆ ಮಾಡಿ ಮನೆಗೆ ಕಳುಹಿಸಿದ್ದಾರೆ. ಇಂಥಹ ಘನಘೋರ ಅವ್ಯವಸ್ಥೆ ತುಮಕೂರು ನಗರದಲ್ಲಿ ಇದೆ. ಜಿಲ್ಲಾಸ್ಪತ್ರೆ ವೈದ್ಯರು, ನರ್ಸ್ ಗಳನ್ನು ಮಾತನಾಡಿಸಲು ಆಗುತ್ತಿಲ್ಲ. ನಿಮಗೆ ಎನು ಮಾಡೋಕೆ ಆಗುತ್ತೇ ಎಂದು ಸಾರ್ವಜನಿಕರಿಗೆ ಧಮಕಿ ಹಾಕುತ್ತಾರೆ. 10-15 ವರ್ಷದಿಂದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಠಿಕಾಣಿ ಹೂಡಿದ್ದಾರೆ. ತುಮಕೂರು ನಗರ ಶಾಸಕರು, ನಗರ ಆಸ್ಪತ್ರೆ ಆಗಲಿ, ಜಿಲ್ಲಾ ಆಸ್ಪತ್ರೆಗಳ ಮೀಟಿಂಗ್ ಕರೆದಿಲ್ಲ. ಸಂಸದರು, ಶಾಸಕರಿಗೆ ಕೋವಿಡ್ ನಿಂದ ಮೃತಪಟ್ಟವರ ಬಗ್ಗೆ ಮಾಹಿತಿನೇ ಇಲ್ಲ. ಇವರ ದುರಾಡಳಿತವೇ ಇದಕ್ಕೆಲ್ಲಾ ಕಾರಣ. 7 ವರ್ಷದ ಹೆಣ್ಣು ಮಗಳು ಅನಾಥೆಯಾಗಿದ್ದಾಳೆ. ಸರ್ಕಾರ ಆ ಮಗುವಿನ ರಕ್ಷಣೆ ಮಾಡಬೇಕು ಎಂದು ಗೋವಿಂದರಾಜು ಆಗ್ರಹಿಸಿದರು.

ತುಮಕೂರಿಗೆ ಆಗಮಿಸಿದ ಮೃತ ಕಸ್ತೂರಿ ಸಂಬಂಧಿಕರು

​ತುಮಕೂರಿನ ಶವಾಗಾರಕ್ಕೆ ಮೃತ ಕಸ್ತೂರಿ ಸಂಬಂಧಿಕರು ಆಗಮಿಸಿದ್ದಾರೆ. ತಮಿಳುನಾಡಿನ ಕಲ್ಲಗುಚ್ಚಿ ಜಿಲ್ಲೆಯ ತಿರುಕೊಯ್ಲೂರು ಗ್ರಾಮದವರು. ಪೊಲೀಸರ ಮಾಹಿತಿ ಆಧರಿಸಿ ತುಮಕೂರಿಗೆ ಕಸ್ತೂರಿ ಪತಿ ಶಂಕರ್ ಅಕ್ಕ ಮತ್ತು ಭಾವಂದಿರು  ಆಗಮಿಸಿದ್ದಾರೆ. ಕಳೆದ ವರ್ಷ ಕಸ್ತೂರಿ ಪತಿ ಶಂಕರ್ ಆತ್ಮಹತ್ಯೆಗೆ ಮಾಡಿಕೊಂಡಿದ್ದ.​ ಪತಿ ಮರಣ ನಂತರ ಮಗು ಸಮೇತ ಕಸ್ತೂರಿ ತುಮಕೂರಿಗೆ ಬಂದಿದ್ದಳು.

ವೈದ್ಯೆ ಡಾ.ಉಷಾ ಸೇರಿದಂತೆ ನರ್ಸ್​​ಗಳು ಅಮಾನತ್ತು: ಸಚಿವ ಸುಧಾಕರ್ 

ಪ್ರಕರಣ ಸಂಬಂಧ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ, ನರ್ಸ್​​ಗಳಾದ ಯಶೋಧ, ದಿವ್ಯ, ಸವಿತಾ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆಗೂ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಸಾವನಪ್ಪಿದ ಬಾಣಂತಿ ಕಸ್ತೂರಿಗೆ ಈಗಾಗಲೇ ಏಳು ವರ್ಷದ ಹೆಣ್ಣು ಮಗು ಇದ್ದು, ಈ ನತದೃಷ್ಟ ಹೆಣ್ಣುಮಗು ಇಂದು ನಿರ್ಗತಿಕಳಾಗಿದ್ದಾಳೆ. ಆಕೆಯನ್ನ ಕುಟುಂಬಸ್ಥರು ಪೋಷಿಸದಿದ್ದಲ್ಲಿ ಜಿಲ್ಲಾಡಳಿತದಿಂದ 18 ರ್ಷದವರೆಗೂ ಉಚಿತ ಶಿಕ್ಷಣ, ವಸತಿ ಕಲ್ಪಿಸಲು ವ್ಯವಸ್ಥೆ ಮಾಡುತ್ತೇವೆ ಹಾಗೂ ವೈಯಕ್ತಿಕವಾಗಿ ನಾನು ಆಕೆಯ ಅಕೌಂಟ್​ನಲ್ಲಿ ಎಫ್‌ಡಿ ಮಾಡಲು ಇಚ್ಚಿಸಿದ್ದೇನೆ  ನಿನ್ನೆ ಮುಂಜಾನೆ ಘಟನೆ ನಡೆದಿದ್ದು, ತಡರಾತ್ರಿ ಆರೋಗ್ಯ ಸಚಿವ ಡಾ.ಸುಧಾಕರ್ ತುಮಕೂರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಸೇರಿದಂತೆ ಅಧಿಕಾರಿಗಳ ಸಭೆ ನಡೆಸಿದ್ದರು.

ಮೂವರ ಸಾವಿಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣವಾಗಿತ್ತು. ಗರ್ಭಿಣಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಬಾಣಂತಿ ಹಾಗೂ ಅವಳಿ ನವಜಾತ ಶಿಶುಗಳ ಸಾವಿಗೆ ಕಾರಣರಾಗಿದ್ದರು. ನವೆಂಬರ್ 2 ರ ರಾತ್ರಿ ತುಮಕೂರು ನಗರದ ಭಾರತಿನಗರ ವಾಸಿ ತುಂಬು ಗರ್ಭಿಣಿ ಕಸ್ತೂರಿ ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಹೋಗಿದ್ದಳು. ತಮಿಳು ನಾಡು ಮೂಲದ ಈಕೆ ಅನಾಥೆ ಮಹಿಳೆಯಾಗಿದ್ದರಿಂದ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲಾತಿ ಇರಲಿಲ್ಲ. ಆದರೆ ಆಸ್ಪತ್ರೆ ಸಿಬ್ಬಂದಿಗಳು ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೇಳಿದ್ದಾರೆ. ಕೊಡದೇ ಇದ್ದಾಗ ಅಡ್ಮಿಷನ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ವಿಧಿ ಇಲ್ಲದೇ ವಾಪಸ್ ಮನೆಗೆ ಬಂದ ಕಸ್ತೂರಿ ನಿನ್ನೆ ಬೆಳಗಿನ ಜಾವ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬಳಿಕ ನಿತ್ರಾಣಗೊಂಡ ಬಾಣಂತಿ ಹಾಗೂ ಎರಡೂ ಶಿಶು ಸಾವನಪ್ಪಿತ್ತು. ಘಟನೆ ಬೆನ್ನಲ್ಲೇ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada