ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಅವಳಿ ಗಂಡು ಮಕ್ಕಳ ಜೊತೆ ತಾಯಿನೂ ಸಾವು

TV9kannada Web Team

TV9kannada Web Team | Edited By: ಗಂಗಾಧರ್​ ಬ. ಸಾಬೋಜಿ

Updated on: Nov 03, 2022 | 3:34 PM

ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಭಾರತಿನಗರದ ಆಂಜನೇಯ ದೇಗುಲ ಬಳಿ ನಡೆದಿದೆ.

ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಅವಳಿ ಗಂಡು ಮಕ್ಕಳ ಜೊತೆ ತಾಯಿನೂ ಸಾವು
ಪ್ರಾತಿನಿಧಿಕ ಚಿತ್ರ

ತುಮಕೂರು: ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ (death) ಯಾಗಿರುವಂತಹ ಘಟನೆ ಜಿಲ್ಲೆಯ ಭಾರತಿನಗರದ ಆಂಜನೇಯ ದೇಗುಲ ಬಳಿ ನಡೆದಿದೆ. ಬಾಣಂತಿ ಕಸ್ತೂರಿ(30), ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ಕಸ್ತೂರಿ 1 ತಿಂಗಳಿಂದ ಓರ್ವ ಪುತ್ರಿ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗರ್ಭಿಣಿ ಕಸ್ತೂರಿಗೆ ನಿನ್ನೆ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ತಾಯಿ ಕಾರ್ಡ್​, ಆಧಾರ್​ ಕಾರ್ಡ್​ ಇಲ್ಲವೆಂದು ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದು, ನಾವು ಚಿಕಿತ್ಸೆ ನೀಡಲ್ಲ ಎಂದು ವೈದ್ಯರು ಕೂಡ ನಿರಾಕರಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸಿಬ್ಬಂದಿ ಹೇಳಿದ್ದು, ಬೆಂಗಳೂರಿಗೆ ತೆರಳಲು ಹಣವಿಲ್ಲದೆ ಕಸ್ತೂರಿ ಮನೆಗೆ ಹಿಂದಿರುಗಿದ್ದಾರೆ.

ಇಂದು ಮುಂಜಾನೆ ಒಂದು ಮಗುವಿಗೆ ಜನ್ಮ ನೀಡಿದ್ದು, ಮತ್ತೊಂದು ಮಗುವಿಗೆ ಜನ್ಮನೀಡುವಾಗ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳು, ತಾಯಿ ಕಸ್ತೂರಿ(30) ಸಾವನ್ನಪ್ಪಿದ್ದಾರೆ. ತಾಯಿ, ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ತುಮಕೂರಿನ ಎನ್​ಇಪಿಎಸ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಮಾನತುಗೊಳಿಸುವವರೆಗೂ ಶವಗಳನ್ನು ಎತ್ತಲ್ಲ

ಸ್ಥಳಕ್ಕೆ DHO ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಗೆ ದಾಖಲಿಸಿಕೊಳ್ಳದ ವೈದ್ಯರ ವಿರುದ್ಧ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಡಾ. ಉಷಾ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ DHO ಮಂಜುನಾಥ್​ಗೆ ಸ್ಥಳೀಯರು ಆಗ್ರಹಿಸಿದ್ದು, ಅಮಾನತುಗೊಳಿಸುವವರೆಗೂ ಶವಗಳನ್ನು ಎತ್ತಲ್ಲ ಎಂದು ಪಟ್ಟುಹಿಡಿದರು. ಹೆರಿಗೆ ಮಾಡಿಸಲು ಆಧಾರ್​, ತಾಯಿ ಕಾರ್ಡ್ ಕಡ್ಡಾಯವಲ್ಲ. ಈ ಸಂಬಂಧ ಮಾಹಿತಿ ಪಡೆದು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವೆ ಎಂದು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಹೇಳಿದರು.

ಯಾರೇ ಆಗಿದ್ದರೂ ಕ್ರಮ ತೆಗೆದುಕೊಳ್ಳಿ: ಸಚಿವೆ ಶಶಿಕಲಾ ಜೊಲ್ಲೆ

ಈ ಕುರಿತಾಗಿ ಸಚಿವೆ ಶಶಿಕಲಾ ಜೊಲ್ಲೆ ಬೆಂಗಳೂರಿನಲ್ಲಿ ಮಾತನಾಡಿದ್ದು, ತುಮಕೂರು ಘಟನೆ ನಿಜಕ್ಕೂ ನೋವಿನ ಸಂಗತಿ. ಈ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಯಾರಿಂದ ತಪ್ಪಾಗಿದೆ ಅಂತ ಸಂಪೂರ್ಣ ತನಿಖೆ ನಡೆಸಲಿ. ಆಸ್ಪತ್ರೆಯ ಬೇಜವಾಬ್ದಾರಿ ಆಗಿದ್ದರೂ ಕಠಿಣ ಕ್ರಮ ಆಗಬೇಕು. ನಾನೂ ಕೂಡ ಆರೋಗ್ಯ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಸಾರಿಗೆ ಬಸ್​ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಾಯ

ಕಲಬುರಗಿ: ಸಾರಿಗೆ ಬಸ್​ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಶಹಾಬಾದ್ ಬಳಿಯ ಕಾಗಿಣಾ ಸೇತುವೆ ಬಳಿ ಅವಘಡ ಸಂಭವಿಸಿದೆ. ಜೇವರ್ಗಿಯಿಂದ ಚಿತ್ತಾಪುರಕ್ಕೆ ಸರ್ಕಾರಿ ಬಸ್ ಹೊರಟಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಸೇತುವೆ ಆರಂಭದಲ್ಲೇ ಬಸ್ ಉರುಳಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಶಹಾಬಾದ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada