Tumkur: ಆಸ್ಪತ್ರೆಯಲ್ಲಿನ ಅಮಾನುಷ ವರ್ತನೆಯಿಂದ ನಾನು ದಿಗ್ಭ್ರಮೆಗೊಳಗಾಗಿದ್ದೇನೆ: ಆರೋಗ್ಯ ಸಚಿವ
ಅಮಾನುಷ ಘಟನೆ ನಡೆದ ಬೆನ್ನಲ್ಲೇ ತುಮಕೂರು ಜಿಲ್ಲಾಸ್ಪತ್ರೆಗೆ ದೌಡಾಯಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಅಧಿಕಾರಿಗಳ ಸಭೆ ನಡೆಸಿ ಓರ್ವ ವೈದ್ಯೆ ಸೇರಿ ನಾಲ್ವರನ್ನ ಅಮಾನತ್ತು ಮಾಡಿ ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ.
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನಡೆದ ಬಾಣಂತಿ ಮತ್ತು ಅವಳಿ ಮಕ್ಕಳ ಸಾವು ಪ್ರಕರಣ ಸಂಬಂಧ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ, ನರ್ಸ್ಗಳಾದ ಯಶೋಧ, ದಿವ್ಯ, ಸವಿತಾ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆಗೂ ಆದೇಶಿಸಲಾಗಿದೆ. ಸಾವನಪ್ಪಿದ ಬಾಣಂತಿ ಕಸ್ತೂರಿಗೆ ಈಗಾಗಲೇ ಏಳು ವರ್ಷದ ಹೆಣ್ಣು ಮಗು ಇದ್ದು, ಈ ನತದೃಷ್ಟ ಹೆಣ್ಣುಮಗು ಇಂದು ನಿರ್ಗತಿಕಳಾಗಿದ್ದಾಳೆ. ಆಕೆಯನ್ನ ಕುಟುಂಬಸ್ಥರು ಪೋಷಿಸದಿದ್ದಲ್ಲಿ ಜಿಲ್ಲಾಡಳಿತದಿಂದ 18 ರ್ಷದವರೆಗೂ ಉಚಿತ ಶಿಕ್ಷಣ, ವಸತಿ ಕಲ್ಪಿಸಲು ವ್ಯವಸ್ಥೆ ಮಾಡುತ್ತೇವೆ ಹಾಗೂ ವೈಯಕ್ತಿಕವಾಗಿ ನಾನು ಆಕೆಯ ಅಕೌಂಟ್ನಲ್ಲಿ ಎಫ್‌ಡಿ ಮಾಡಲು ಇಚ್ಚಿಸಿದ್ದೇನೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ನಿನ್ನೆ ಮುಂಜಾನೆ ಘಟನೆ ನಡೆದಿದ್ದು, ತಡರಾತ್ರಿ ಆರೋಗ್ಯ ಸಚಿವ ಡಾ.ಸುಧಾಕರ್ ತುಮಕೂರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಸೇರಿದಂತೆ ಅಧಿಕಾರಿಗಳ ಸಭೆ ನಡೆಸಿದ್ದರು.
ಮೂವರ ಸಾವಿಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣವಾಗಿತ್ತು. ಗರ್ಭಿಣಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಬಾಣಂತಿ ಹಾಗೂ ಅವಳಿ ನವಜಾತ ಶಿಶುಗಳ ಸಾವಿಗೆ ಕಾರಣರಾಗಿದ್ದರು. ನವೆಂಬರ್ 2 ರ ರಾತ್ರಿ ತುಮಕೂರು ನಗರದ ಭಾರತಿನಗರ ವಾಸಿ ತುಂಬು ಗರ್ಭಿಣಿ ಕಸ್ತೂರಿ ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಹೋಗಿದ್ದಳು. ತಮಿಳು ನಾಡು ಮೂಲದ ಈಕೆ ಅನಾಥೆ ಮಹಿಳೆಯಾಗಿದ್ದರಿಂದ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲಾತಿ ಇರಲಿಲ್ಲ. ಆದರೆ ಆಸ್ಪತ್ರೆ ಸಿಬ್ಬಂದಿಗಳು ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೇಳಿದ್ದಾರೆ. ಕೊಡದೇ ಇದ್ದಾಗ ಅಡ್ಮಿಷನ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ವಿಧಿ ಇಲ್ಲದೇ ವಾಪಸ್ ಮನೆಗೆ ಬಂದ ಕಸ್ತೂರಿ ನಿನ್ನೆ ಬೆಳಗಿನ ಜಾವ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬಳಿಕ ನಿತ್ರಾಣಗೊಂಡ ಬಾಣಂತಿ ಹಾಗೂ ಎರಡೂ ಶಿಶು ಸಾವನಪ್ಪಿತ್ತು. ಘಟನೆ ಬೆನ್ನಲ್ಲೇ ಸಾಕಷ್ಟು ಆಕ್ರೋಷಕ್ಕೆ ಕಾರಣವಾಗಿತ್ತು.
ಜಿಲ್ಲಾಸ್ಪತ್ರೆ ಭೇಟಿ ಬಳಿಕ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಸುಧಾಕರ್, ತುಂಬು ಗರ್ಭಿಣಿ ಮಹಿಳೆ ಬಂದಾಗ ದಾದಿಯರು ಒಳಗಡೆ ಕರೆದುಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೇಳಿದ್ದಾರೆ. ಅದ್ಯಾವುದೂ ಆಕೆಯ ಬಳಿ ಇರಲಿಲ್ಲಾ. ಅಕ್ಕಪಕ್ಕದ ಮನೆಯವರು ಒತ್ತಾಯ ಪೂರ್ವಕವಾಗಿ ಆಕೆಯನ್ನ ಕರೆದುಕೊಂಡು ಬಂದಿದ್ದಾರೆ. ಮೊದಲ ಹೆರಿಗೆ ನಾರ್ಮಲ್ ಆಗಿದೆ. ಇದು ಕೂಡ ಹಾಗೇ ಆಗುತ್ತದೆ ಎಂದು ಗರ್ಭಿಣಿ ಮಹಿಳೆ ಅಂದುಕೊಂಡಿದ್ದಾರೆ. ಕರ್ತವ್ಯದಲ್ಲಿದ್ದ ದಾದಿಯರು ವಿಶೇಷ ಆರೈಕೆಯಲ್ಲಿ ಆ ಮಹಿಳೆಗೆ ತಕ್ಷಣ ಚಿಕಿತ್ಸೆ ಕೊಡಬಹುದಿತ್ತು, ಆದರೆ ಅದೂ ಆಗಿಲ್ಲಾ. ಮೇಲ್ನೋಟಕ್ಕೆ ಇದು ಹೆರಿಗೆ ವಾರ್ಡ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ನರ್ಸ್ಗಳು ಕರ್ತವ್ಯಲೋಪ ಎಸಗಿದ್ದಾರೆ ಅಂತಾ ಅನಿಸಿದೆ. ಅಲ್ಲಿ ಕರ್ತವ್ಯದಲ್ಲಿ ಡಾಕ್ಟರ್ ಕೂಡ ಇದ್ದರು. ದಾದಿಯರು ಏನೇ ಹೇಳಿದರೂ ಅವರಾದರೂ ಬಂದು ಚಿಕಿತ್ಸೆ ಕೊಡಬಹುದಿತ್ತು, ಇದು ಕರ್ತವ್ಯ ನಿರ್ಲಕ್ಷ್ಯ ಮಾತ್ರವಲ್ಲ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಈ ಘಟನೆಯಿಂದ ನಾನು ದಿಗ್ಭ್ರಮೆಗೊಳಗಾಗಿದ್ದೇನೆ. ಹಾಗಾಗಿ ನಾಲ್ಕು ಜನರನ್ನ ಅಮಾನತ್ತು ಮಾಡಲಾಗಿದೆ ಎಂದಿದ್ದಾರೆ.
ರಾಜಕಾರಣ ಮಾತನಾಡಲು ನಾನು ಇಲ್ಲಿಗೆ ಭೇಟಿ ನೀಡಿಲ್ಲ
ಘಟನೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕಾರಣ ಮಾತನಾಡಲು ನಾನು ಇಲ್ಲಿಗೆ ಭೇಟಿ ನೀಡಿಲ್ಲ. ಒಬ್ಬ ವೈದ್ಯನಾಗಿ, ಆರೋಗ್ಯ ಸಚಿವನಾಗಿ ಬಂದಿದ್ದೇನೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರಶ್ನೆಗೆ ನಾಳೆ ಬೆಳಗ್ಗೆ ಉತ್ತರಿಸುತ್ತೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಏನಾಗಿತ್ತೆಂದು ನಾಳೆ ಉತ್ತರಿಸುತ್ತೇನೆ ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Fri, 4 November 22